

ಅಳ್ನಾವರ: ನಮ್ಮ ಭವ್ಯ ಪರಂಪರೆ ಹಾಗೂ ಸಂಸ್ಕೃತಿಯನ್ನು ಉಳಿಸಿ ಬೆಳೆಸಬೇಕು. ಶ್ರಾವಣ ಮಾಸದಲ್ಲಿ ನಡೆಯುವ ಪುರಾಣ, ಪ್ರವಚನ ಕಾರ್ಯದಲ್ಲಿ ತೊಡಗಿಕೊಂಡು ಸಂಸ್ಕಾರಯುತ ಬದುಕು ಕಟ್ಟಿಕೊಳ್ಳಬೇಕು ಎಂದು ಅಧ್ಯಾತ್ಮ ಜೀವಿ ಪೂರ್ಣಿಮಾ ಮುತ್ನಾಳ ಹೇಳಿದರು.
ಇಲ್ಲಿನ ಇಂದಿರಾ ನಗರ ಬಡಾವಣೆಯ ವೀರಭದ್ರೇಶ್ವರ ದೇವಸ್ಥಾನದಲ್ಲಿ ಶ್ರಾವಣ ಮಾಸದ ಪ್ರಯುಕ್ತ ಹಮ್ಮಿಕೊಂಡ ಶ್ರೀ ಅಜಾತ ನಾಗಲಿಂಗ ಮಹಾಸ್ವಾಮಿಗಳ ಪುರಾಣ ಕಾರ್ಯಕ್ರಮವನ್ನು ಇತ್ತೀಚೆಗೆ ಉದ್ಘಾಟಿಸಿ ಅವರು ಮಾತನಾಡಿದರು.
ನಮ್ಮ ಪುಣ್ಯ ಭೂಮಿಯಲ್ಲಿ ಅನೇಕ ಮಹಾನ್ ಪುರುಷರು ತಮ್ಮ ಪವಾಡಗಳಿಂದ ಸಮಾಜವನ್ನು ಉದ್ಧಾರ ಮಾಡಿದ್ದಾರೆ. ಅವರ ಬದುಕು ನಮಗೆಲ್ಲರಿಗೂ ಆದರ್ಶನೀಯ ಎಂದರು.
ಪ್ರವಚನಕಾರ ಶೇಖಯ್ಯ ಬಸಯ್ಯ ಹಿರೇಮಠ ಮಾತನಾಡಿ, ಪುರಾಣ ಕಾರ್ಯಕ್ರಮ 15 ದಿನಗಳ ಕಾಲ ಪ್ರತಿನಿತ್ಯ ಸಂಜೆ 7 ಗಂಟೆಯಿಂದ 8 ಗಂಟೆಯವೆರೆಗೆ ವೀರಭದ್ರೇಶ್ವರ ದೇವಸ್ಥಾನದಲ್ಲಿ ನಡೆಯಲಿದೆ. ಶ್ರಾವಕರು ಆಗಮಿಸಿ ನಾಗಲಿಂಗನ ಲೀಲೆಗಳನ್ನು ತಿಳಿದುಕೊಳ್ಳಬೇಕು ಎಂದರು.
ಪೂರ್ಣಿಮಾ ಮುತ್ನಾಳ ಸಂಘಡಿಗರು ಭಕ್ತಿ ಗೀತೆ ಹಾಡಿದರು. ದೇವಸ್ಥಾನವನ್ನು ತಳಿರು ತೋರಣಗಳಿಂದ ಸಿಂಗರಿಸಲಾಗಿತ್ತು.
ಬಸಯ್ಯ ಹಿರೇಮಠ, ಎಸ್.ಡಿ. ದೇಗಾವಿಮಠ, ವೀರಯ್ಯ, ಚೆನ್ನಯ್ಯ ಆರಾಧ್ಯಮಠ, ಜಯಶ್ರೀ ಸೊಪ್ಪಿ, ರಾಣಿ ಹಸಬಿಮಠ, ರಾಜು ಬೆಂಡಿಗೇರಿ, ರುದ್ರಪ್ಪ ಹಂಚಿನಮನಿ, ಶ್ರೀಕಲಾ ಸೊಪ್ಪಿ, ಜಗದೀಶ ಚಚಡಿ ಇದ್ದರು