

ಮಂಡ್ಯ: ಮಕ್ಕಳಲ್ಲಿ ವಿವೇಕ ಬೆಳೆಸುವುದೇ ನಿಜವಾದ ಶಿಕ್ಷಣ. ವಿವೇಕವಿಲ್ಲದೆ ಕಲಿಯುವುದು ಸಾಕ್ಷರತೆ ಮಾತ್ರ. ಶಿಕ್ಷಣ ಜೀವನದ ಮೌಲ್ಯಗಳನ್ನು ಮಕ್ಕಳಿಗೆ ಕಲಿಸುತ್ತದೆ ಎಂದು ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಅಖಿಲ ಭಾರತೀಯ ವ್ಯವಸ್ಥಾ ಪ್ರಮುಖ್ ಮಂಗೇಶ್ ಭೇಂಡೆ ಹೇಳಿದರು.
ತಾಲೂಕಿನ ಮರಲಿಂಗನದೊಡ್ಡಿಯ ಮಾಧವ ವಿದ್ಯಾಲಯದಲ್ಲಿ ಆಯೋಜಿಸಿದ್ದ ಸಾಂಸ್ಕೃತಿಕ ಕ್ರೀಡೋತ್ಸವ ಕಾರ್ಯಕ್ರಮದಲ್ಲಿ ಪ್ರಧಾನ ಭಾಷಣ ಮಾಡಿದ ಅವರು, ಸಾಕ್ಷರರು ಹೆಚ್ಚಾದಂತೆ ಅವರು ರಾಕ್ಷಸರಾಗುತ್ತಿದ್ದಾರೆ. ಮಾನವೀಯ ಗುಣಗಳನ್ನು ಅವರಲ್ಲಿ ಕಾಣಲಾಗುವುದಿಲ್ಲ. ಜೀವನ ಮೌಲ್ಯದ ಆಧಾರದ ಮೇಲೆ ಬದುಕುವ ಶಿಕ್ಷಣ ಸಿಕ್ಕಾಗ ಮಾತ್ರ ವಿದ್ಯೆ ಸಾರ್ಥಕತೆ ಪಡೆಯುತ್ತದೆ ಎಂದು ತಿಳಿಸಿದರು.
ಶಿಕ್ಷಣ ಮನುಷ್ಯನಲ್ಲಿ ಉದಾತ್ತ ಗುಣಗಳನ್ನು ನಿರ್ಮಾಣ ಮಾಡುತ್ತದೆ. ಸಮಾಜದಲ್ಲಿ ಮನುಷ್ಯ ಯಾವ ರೀತಿ ಬದುಕನ್ನು ಸಾಗಿಸಬೇಕು ಎನ್ನುವುದನ್ನು ಕಲಿಸುತ್ತದೆ. ಅಂತಹ ಸಂಸ್ಕಾರವಂತ ಶಿಕ್ಷಣವನ್ನು ನೀಡಿದಾಗ ಮಕ್ಕಳು ಸುಸಂಸ್ಕೃತ ಪ್ರಜೆಗಳಾಗಿ ಹೊರಹೊಮ್ಮುತ್ತಾರೆ. ಇದರಿಂದ ನಾಡು-ರಾಷ್ಟ್ರ ಬೆಳವಣಿಗೆಯನ್ನು ಕಾಣುತ್ತದೆ. ಇಂದಿನ ಮಕ್ಕಳೇ ಮುಂದಿನ ಭಾರತದ ಭವಿಷ್ಯ. ಹಾಗಾಗಿ ಮಕ್ಕಳನ್ನು ಸಮಾಜ ಮತ್ತು ದೇಶಕ್ಕೆ ಆಸ್ತಿಯಾಗುವ ರೀತಿಯಲ್ಲಿ ಮಕ್ಕಳಿಗೆ ಶಿಕ್ಷಣ ನೀಡಬೆಕು. ಸಮಾಜಕ್ಕೆ ದೃಷ್ಟಿ ಕೊಡುವ ಕೇಂದ್ರವಾಗಿ ವಿದ್ಯಾಲಯ ಬೆಳೆಯುವಂತೆ ಆಶಿಸಿದರು.
ವಿಜಯಭಾರತಿ ಚಾರಿಟಬಲ್ ಟ್ರಸ್ಟ್ ಅಧ್ಯಕ್ಷ ಡಾ.ವಾಮನ್‌ರಾವ್ ಬಾಪಟ್, ಕಾಪು ಶಾಸಕ ಗುರ್ಮೆ ಸುರೇಶ್ ಶೆಟ್ಟಿ, ಮೈಸೂರು ವಿಶ್ವವಿದ್ಯಾಲಯದ ಸಿಂಡಿಕೇಟ್ ಮಾಜಿ ಸದಸ್ಯ ಈ.ಸಿ.ನಿಂಗರಾಜ್‌ಗೌಡ, ಅನಿವಾಸಿ ಭಾರತೀಯ ಡಾ.ಜಯರಾಂ, ಮೈಸೂರಿನ ಎಂಡಿ ಎಕ್ಸೆಲ್ ಸಾಫ್ಟ್‌ನ ಅಧ್ಯಕ್ಷ ಸುಧನ್ವ ಧನಂಜಯ, ಹೃದ್ರೋಗ ತಜ್ಞ ಡಾ.ವಿಶ್ವನಾಥ ಕಿಡೆ, ಶ್ರೀಕಾಂತ್, ಡಾ.ಚಂದ್ರಶೇಖರ್ ಇತರರಿದ್ದರು. ಇದೇ ವೇಳೆ ಮಕ್ಕಳಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ ನಡೆದವು.