ಹೆಣ್ಣು ಮಕ್ಕಳಿಂದ ಶಿಕ್ಷಣ ಕ್ಷೇತ್ರದಲ್ಲಿ ಕ್ರಾಂತಿ: ಖ್ಯಾತ ವಿದ್ವಾಂಸ ಡಾ.ಕೆ.ಅನಂತರಾಮು ಬಣ್ಣನೆ

Cultural sports activity closing ceremony mandya
Published on

ಮಂಡ್ಯ: ಇತ್ತೀಚಿನ ವರ್ಷದಲ್ಲಿ ಹೆಣ್ಣುಮಕ್ಕಳ ವಿದ್ಯಾಭ್ಯಾಸದ ಕ್ಷೇತ್ರದಲ್ಲಿ ಶೈಕ್ಷಣಿಕ ಕ್ರಾಂತಿಯೇ ನಡೆದು ಹೋಗಿದೆ ಎಂದು ಖ್ಯಾತ ವಿದ್ವಾಂಸ ಡಾ.ಕೆ.ಅನಂತರಾಮು ಹೇಳಿದರು.

ನಗರದ ಮಹಿಳಾ ಸರ್ಕಾರಿ ಕಾಲೇಜಿ(ಸ್ವಾಯತ್ತ)ನ ವನರಂಗದಲ್ಲಿ ಕಾಲೇಜು ಶಿಕ್ಷಣ ಇಲಾಖೆ, ಮಹಿಳಾ ಸರ್ಕಾರಿ ಕಾಲೇಜು ಸಹಯೋಗದಲ್ಲಿ ಆಯೋಜಿಸಿದ್ದ 2023-24ನೇ ಸಾಲಿನ ಸಾಂಸ್ಕೃತಿಕ, ಕ್ರೀಡೆ, ರಾಷ್ಟ್ರೀಯ ಸೇವಾ ಯೋಜನೆ, ಸ್ಕೌಟ್ಸ್ ಮತ್ತು ಗೈಡ್ಸ್ ಹಾಗೂ ರೆಡ್‌ಕ್ರಾಸ್ ಚಟುವಟಿಕೆಗಳ ಸಮಾರೋಪ ಸಮಾರಂಭ ಉದ್ಘಾಟಿಸಿ ಮಾತನಾಡಿದರು.

ಹೆಣ್ಣುಮಕ್ಕಳ ವಿದ್ಯಾಭಾಸದ ವಿಷಯದಲ್ಲಿ ನಾವು ಹಿಂದೆ ಬಿದ್ದಿದ್ದೆವು. ಆದರೆ ಇಂದಿನ ಶತಮಾನದ ದಿನಗಳಲ್ಲಿ ಹೆಣ್ಣುಮಕ್ಕಳು ಶಿಕ್ಷಣದಲ್ಲಿ ಕ್ರಾಂತಿ ಮಾಡಿದ್ದಾರೆ. ಶೈಕ್ಷಣಿಕ ಕ್ಷೇತ್ರದಲ್ಲಿ ಚೈತನ್ಯ ಉಂಟಾಗಿದೆ, ವೇಗೋತ್ಕರ್ಷವಾಗುತ್ತಿದೆ. 2 ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿನಿಯರು ಈ ಕಾಲೇಜಿನಲ್ಲಿ ಅಧ್ಯಯನ ಮಾಡುತ್ತಿದ್ದಾರೆಂದರೆ ಅದೇನು ಸಾಮಾನ್ಯ ವಿಷಯವಲ್ಲ. ವೈವಿಧ್ಯಮಾನವಾದ ವಿಷಯಗಳನ್ನು ಆಯ್ಕೆಮಾಡಿಕೊಂಡು ಸ್ನಾತಕ ಪದವಿ, ಸ್ನಾತಕೋತ್ತರ ಪದವಿಗಳನ್ನು ಪಡೆದುಕೊಳ್ಳುತ್ತಿರುವುದು ಸಂತಸ ಎಂದು ಹರ್ಷ ವ್ಯಕ್ತಪಡಿಸಿದರು.

ಸ್ವಾಮಿ ವಿವೇಕಾನಂದರು, ಗಾಂಧೀಜಿ, ಬಾಬಾಸಾಹೇಬ್ ಅಂಬೇಡ್ಕರ್ ಅವರು ಹೆಣ್ಣುಮಕ್ಕಳ ವಿದ್ಯಾಭ್ಯಾಸಕ್ಕೆ ವಿಶೇಷವಾದ ಒತ್ತು ಕೊಟ್ಟಿದ್ದಾರೆ. ಹೆಣ್ಣುಮಕ್ಕಳ ಮತ್ತು ಮಹಿಳಾ ಸಬಲೀಕರಣಕ್ಕೆ ಮಹತ್ವದ ವಿಚಾರಗಳನ್ನು ಪ್ರಸ್ತಾಪಿಸಿದ್ದಾರೆ. ಇಂದಿನ ದಿನಗಳಲ್ಲಿ ವಿದ್ಯಾರ್ಥಿಗಳು ಮತ್ತು ವಿದ್ಯಾವಂತರು ಬುದ್ಧಿವಂತರಾಗುತ್ತಿದ್ದಾರೆ. ಆದರೆ ವಿವೇಕವಂತರು ಇಲ್ಲದಾಗುತ್ತಿದ್ದಾರೆ. ವಿದ್ಯಾವಂತರಿಗೆ ಬುದ್ಧಿ ಹೆಚ್ಚಾಗುತ್ತಿದ್ದು, ವಿವೇಕ ಕಡಿಮೆಯಾಗುತ್ತಿದೆ. ಈ ಹಿನ್ನೆಲೆಯಲ್ಲಿ ವಿವೇಕವಂತರು ಸಮಾಜವನ್ನು ಕಟ್ಟಿ ಬೆಳೆಸಬೇಕಿದೆ ಎಂದು ಸಲಹೆ ನೀಡಿದರು.

ಕಾಲೇಜಿನ ಪ್ರಾಂಶುಪಾಲೆ ಡಾ.ಕೆ.ಹೇಮಲತಾ, ಸಾಂಸ್ಕೃತಿಕ ವೇದಿಕೆ ಸಂಚಾಲಕ ಡಾ.ಕುಮಾರ ಬೆಳಲೆ, ಖಜಾಂಚಿ ಡಾ.ಜ್ಯೋತ್ನ್ಸಾ ಕಾರಂತ್, ಕ್ರೀಡಾ ಸಂಚಾಲಕ ಕೆ.ಆರ್.ಲೋಕೇಶ್, ಎನ್‌ಎಸ್‌ಎಸ್ ಘಟಕ-1 ಕಾರ್ಯಕ್ರಮಾಧಿಕಾರಿ ಡಾ.ಎಂ.ಕೆಂಪಮ್ಮ, ಘಟಕ-3ರ ಕಾರ್ಯಕ್ರಮಾಧಿಕಾರಿ ಡಾ.ಕೆ.ಲತಾ, ರೆಡ್‌ಕ್ರಾಸ್ ಸಂಚಾಲಕಿ ಡಾ.ಎಂ.ಬಿ.ಪ್ರಮೀಳಾ, ಸ್ಕೌಟ್ಸ್ ಮತ್ತು ಗೈಡ್ಸ್ ಸಂಚಾಲಕಿ ಡಾ.ಎಂ.ಎಸ್.ರೇಖಾ, ವೇದಿಕೆ ಪದಾಧಿಕಾರಿಗಳಾದ ಅಧ್ಯಕ್ಷೆ ನವ್ಯಶ್ರೀ, ಉಪಾಧ್ಯಕ್ಷೆ ಬಿ.ಕೆ.ಲಾವಣ್ಯ, ಸ್ನಾತಕೋತ್ತರ ವಿಭಾಗದ ಉಪಾಧ್ಯಕ್ಷೆ ನಿಸರ್ಗ, ಕಾರ್ಯದರ್ಶಿ ಡಿ.ಎಸ್.ಮಾನ್ಯಶ್ರೀ, ಜಂಟಿ ಕಾರ್ಯದರ್ಶಿಗಳಾದ ತನುಶ್ರೀ, ತೇಜ, ಪೂರ್ಣಿಮಾ, ನೂರ್‌ಆಯೇಷಾ, ಪೂಜಾ, ದಾಕ್ಷಾಯಿಣಿ ಇತರರಿದ್ದರು.

ಇದೇ ಸಂದರ್ಭದಲ್ಲಿ ಸಾಂಸ್ಕೃತಿಕ, ಕ್ರೀಡೆ, ರಾಷ್ಟ್ರೀಯ ಸೇವಾ ಯೋಜನೆ, ಸ್ಕೌಟ್ಸ್ ಮತ್ತು ಗೈಡ್ಸ್, ರೆಡ್‌ಕ್ರಾಸ್ ಚಟುವಟಿಕೆಗಳಲ್ಲಿ ಉತ್ತಮ ಪ್ರದರ್ಶನ ನೀಡಿದ ವಿದ್ಯಾರ್ಥಿನಿಯರನ್ನು ಗಣ್ಯರ ಸಮ್ಮುಖದಲ್ಲಿ ಅಭಿನಂದಿಸಿ ಬಹುಮಾನ ನೀಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net