

ವಿಜಯವಾಣಿ ಸುದ್ದಿಜಾಲ ಧಾರವಾಡ
ಸಲಕಿನಕೊಪ್ಪದ ಡಿ.ಕೆ. ಹಾವೇರಿಪೇಟ್ ಪ್ರತಿಷ್ಠಾನ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ನಗರದ ರಂಗಾಯಣದ ಸಾಂಸ್ಕೃತಿಕ ಸಮುಚ್ಚಯ ಭವನದಲ್ಲಿ ಜು. 24 ಮತ್ತು 26ರಂದು ನಾಟಕ, ಜನಪದ ನೃತ್ಯ, ಭರತನಾಟ್ಯ, ರಂಗಗೀತೆ, ರಂಗಚಿಂತನೆ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ಸಂಯೋಜಕ ಪ್ರಭು ಹಂಚಿನಾಳ ತಿಳಿಸಿದರು.
ನಗರದ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜು. 24ರಂದು ಸಂಜೆ 5.30ಕ್ಕೆ ನಿರ್ದೇಶಕ ನಾಗೇಂದ್ರ ಮಾಗಡಿ ಕಾರ್ಯಕ್ರಮ ಉದ್ಘಾಟಿಸುವರು. ಕನ್ನಡ ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಕುಮಾರ ಬೆಕ್ಕೇರಿ, ಹೈಕೋರ್ಟ್ ವಕೀಲ ಅರುಣ ಜೋಶಿ, ಪಾಲಿಕೆ ಸದಸ್ಯೆ ಚಂದ್ರಕಲಾ ಕೊಟಬಾಗಿ, ರೂಪಾ ಚೌಧರಿ, ಎನ್.ಎ. ದೇಸಾಯಿ, ವೀರಣಗೌಡ ಸಿದ್ದಾಪುರ, ರಘು ತಮಕೂರ, ಅರವಿಂದ ಮುಳಗುಂದ ಪಾಲ್ಗೊಳ್ಳುವರು. ಪ್ರತಿಷ್ಠಾನದ ಅಧ್ಯಕ್ಷ ಕಲ್ಮೇಶ ಹಾವೇರಿಪೇಟ್ ಅಧ್ಯಕ್ಷತೆ ವಹಿಸುವರು. ನಂತರ ಎಪಿಎಂಸಿ ಯೋಗ ತಂಡದವರು ಜಾನಪದ ಬೀಗತಿ ನೃತ್ಯ, ನವರಸ ಸ್ನೇಹಿತರ ವೇದಿಕೆಯಿಂದ ಜಗಜ್ಯೋತಿ ನಾಟಕ ಪ್ರದರ್ಶನಗೊಳ್ಳಲಿದೆ ಎಂದರು.
ಜು. 26ರಂದು ಸಂಜೆ 5.30ಕ್ಕೆ ಸಮಾರೋಪ ಸಮಾರಂಭ ನಡೆಯಲಿದ್ದು, ಹುಬ್ಬಳ್ಳಿ ಗ್ರಾಮೀಣ ಕ್ಷೇತ್ರ ಶಿಕ್ಷಣಾಧಿಕಾರಿ ಉಮೇಶ ಬಮ್ಮಕ್ಕನವರ, ಸರ್ ಸಿದ್ದಪ್ಪ ಕಂಬಳಿ ಕಾನೂನು ಕಾಲೇಜಿನ ಪ್ರಾಚಾರ್ಯೆ ಪ್ರೊ.ಎಸ್.ಆರ್. ಮಂಜುಳಾ, ಪಾಲಿಕೆ ಸದಸ್ಯೆ ಜ್ಯೋತಿ ಪಾಟೀಲ, ರಮೇಶ ಮಹಾದೇವಪ್ಪನವರ, ಕಿಶನರಾವ್ ಕುಲಕರ್ಣಿ, ಬಾಬಾಜಾನ ಮುಲ್ಲಾ ಪಾಲ್ಗೊಳ್ಳುವರು. ನಂತರ ರಂಗನಾಥ ವಾಲ್ಮೀಕಿ ರಂಗ ಚಿಂತನೆ ನಡೆಸುವರು. ಭರತ ನಾಟ್ಯ, ಜಾನಪದ ನೃತ್ಯಗಳು ಹಾಗೂ ವಿವಿಧ ಕ್ಷೇತ್ರದಲ್ಲಿ ಕಾರ್ಯನಿರ್ವಹಿಸಿದ ಸಾಧಕರಿಗೆ ಸನ್ಮಾನಿಸಲಾಗುವುದು ಎಂದರು.
ಫೌಂಡೇಶನ್ ಅಧ್ಯಕ್ಷ ಕಲ್ಮೇಶ್ ಹಾವೇರಿಪೇಟ್, ಎನ್.ಎ. ದೇಸಾಯಿ, ಅರವಿಂದ ಮುಳಗುಂದ, ಇತರರು ಇದ್ದರು.