ಮೈಸೂರು ಅರಮನೆಯಲ್ಲಿ ಸಾಂಸ್ಕೃತಿಕ ಕಾರ್ಯಕ್ರಮದ ರಂಗು

Cultural program at Mysore Palace
Published on

ಮೈಸೂರು: ಅರಮನೆ ವೇದಿಕೆಯಲ್ಲಿ ದಸರಾ ಸಾಂಸ್ಕೃತಿಕ ಉಪ ಸಮಿತಿ ಗುರುವಾರ ಹಮ್ಮಿಕೊಂಡಿದ್ದ ದಸರಾ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ರಿಯಾಲಿಟಿ ಶೋ ಖ್ಯಾತಿಯ ಗಾಯಕರು ನಡೆಸಿಕೊಟ್ಟ ‘ಸ್ವರತ ರಂಗ ಸಂಗೀತ ಸಂಜೆ’ಗೆ ಸಾಂಸ್ಕೃತಿಕ ನಗರಿಯ ಜನರು ತಲೆದೂಗಿದರು.

ಕನ್ನಡ ಚಿತ್ರಗೀತೆಗಳು ಹಾಗೂ ಭಾವಗೀತೆಗಳನ್ನು ರಿಯಾಲಿಟಿ ಶೋ ಖ್ಯಾತಿಯ ಗಾಯಕರು ಹಾಡುವ ಮೂಲಕ ರಂಜಿಸಿದರು. ಯಾಕೆ ಬಡಿದಾಡ್ತಿ ತಮ್ಮ ಮಾಯಾ ನೆಚ್ಚಿ.., ಭುವನೇಶ್ವರಿಯ ನೆನೆ ಮಾನಸವೇ.., ಗೀತಾಂಜಲಿ ಹಾಲುಗೆನ್ನೆಗೆ ವಾರೆಗಣ್ಣಿಗೆ ನಮ್ಮೂರ ಹೆಣ್ಣಿಗೆ.., ಸಿಂಗಾರ ಸಿರೆಯೆ.., ನಾನು ಕೋ ಕೋ ಕೋಳಿಕೆ ರಂಗ.., ಜಟಕಾ ಕುದುರೆ ಹತ್ತಿ ಪ್ಯಾಟೆಗೋಗುಮಾ.., ರುಕ್ಕಮ್ಮ ನಾ ನೂರು ಊರು ನೋಡಿ ಬಂದೆ ರುಕ್ಕಮ್ಮ, ನೂರರಲ್ಲೂ ನಮ್ಮ ಊರೇ ಊರಮ್ಮ.., ನಗುವ ನಯನ ಮಿಡಿವ ಮೌನ.., ನಗುವ ನಯನ ಮಧುರ ಮೌನ ಮಿಡಿವ ಹೃದಯ..ಮುಂತಾದ ಹಾಡುಗಳನ್ನು ಹಾಡಿ ರಂಜಿಸಿದರು.

ಹಾವೇರಿಯ ಖಾಸಿ ಅಲಿ ತಂಡದಿಂದ ಸುಗಮ ಸಂಗೀತ, ಮೈಸೂರಿನ ವೈ.ಎಂ. ಪುಟ್ಟಣ್ಣಯ್ಯ ತಂಡದಿಂದ ರಂಗ ಗೀತೆಗಳ ಗಾಯನ, ಮೈಸೂರು ಇಸ್ಕಾನ್ ತಂಡದಿಂದ ಭಜನ ಕೀರ್ತನೆ, ಅಕ್ಕೈ ಪದ್ಮಸಾಲಿ ನೇತೃತ್ವದ ಒಂದೆಡೆ ರಂಗತಂಡದಿಂದ ಜೋಗಪ್ಪ ಜೋಗಮ್ಮ ಚೌಡಿಕೆ ಪದಗಳನ್ನು ಹಾಡಿ ರಂಜಿಸಿದರು. ಅಂತಿಮವಾಗಿ ಮಮೆಖಾನ್ ಮತ್ತು ಫ್ಲೇವರ್ಸ್ ಆಫ್ ಇಂಡಿಯಾ ಕಂಟೆಂಪರೆರಿ ಡ್ಯಾನ್ಸ್ ಕಂಪನಿಯಿಂದ ರಾಜಸ್ತಾನಿ ಫೋಕ್ ಮತ್ತು ಸೂಫಿ ಡ್ಯಾನ್ಸರ್ಸ್ ಜುಗಲ್‌ಬಂದಿ ನಡೆಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net