ಸಂಸ್ಕೃತಿ ಪರಿಚಯ ಸಂಘಟನೆಗಳಿಂದ ಸಾಧ್ಯ

ಸಂಸ್ಕೃತಿ ಪರಿಚಯ ಸಂಘಟನೆಗಳಿಂದ ಸಾಧ್ಯ
Published on

ಶನಿವಾರಸಂತೆ: ಅರೆಭಾಷೆ, ಸಾಹಿತ್ಯ, ಸಂಸ್ಕೃತಿ, ಆಚಾರ ವಿಚಾರಗಳನ್ನು ಮುಂದಿನ ಪೀಳಿಗೆಗೆ ಉಳಿಸಿ ಬೆಳೆಸಲು ಸಂಘಟನೆಗಳಿಂದ ಮಾತ್ರ ಸಾಧ್ಯ ಎಂದು ಕರ್ನಾಟಕ ಅರೆಭಾಷೆ ಸಾಹಿತ್ಯ ಮತ್ತು ಸಂಸ್ಕೃತಿ ಅಕಾಡೆಮಿ ಅಧ್ಯಕ್ಷ ಮಾವೊಜಿ ಸದಾನಂದ ಅಭಿಪ್ರಾಯಪಟ್ಟರು.

ಸಂಗಯನಪುರ ಅರೆಭಾಷೆ ಗೌಡ ಸಮಾಜದ ಸಭಾಂಗಣದಲ್ಲಿ ಆಲೂರು ಸಿದ್ದಾಪುರ ಅರೆಭಾಷೆ ಗೌಡ ಸಮಾಜದ ವತಿಯಿಂದ ಶನಿವಾರ ಹಮ್ಮಿಕೊಂಡಿದ್ದ ಸಮುದಾಯದ ಸಾಧಕರಿಗೆ ಸನ್ಮಾನ ಕಾರ್ಯಕ್ರಮದಲ್ಲಿ ಮಾತನಾಡಿದರು.

ಅರೆಭಾಷೆ ಗೌಡ ಸಮಾಜದ ವಿವಿಧ ಸಂಘಟನೆಗಳು ಭಾಷೆ, ಸಂಸ್ಕೃತಿ, ಆಚಾರ ವಿಚಾರಗಳನ್ನು ಉಳಿಸಿಕೊಳ್ಳುವ ಸಲುವಾಗಿ ಕಾರ್ಯನಿರ್ವಹಿಸುತ್ತಿದೆ ಇದರ ಜತೆಯಲ್ಲಿ ಸಮುದಾಯದವರು ಶೈಕ್ಷಣಿಕ, ರಾಜಕೀಯ, ಸಾಂಸ್ಕೃತಿಕ, ಕ್ರೀಡೆ, ಸಾಮಾಜಿಕ ಕ್ಷೇತ್ರಗಳಲ್ಲಿ ಮುಂಚೂಣಿಯಲ್ಲಿದ್ದಾರೆ. ಅರೆಭಾಷೆ ಮತ್ತು ಸಂಸ್ಕೃತಿಯನ್ನು ಬಲಪಡಿಸಿ ವಿಸ್ತರಿಸುವ ಉದ್ದೇಶದಿಂದ ಸಾಹಿತ್ಯ ಅಕಾಡೆಮಿ ಸ್ಥಾಪಿಸಲಾಗಿದೆೆ ಎಂದರು.

ಅರೆಭಾಷೆ ಗೌಡ ಸಮಾಜದ ವಿವಿಧ ಸಂಘಟನೆಗಳು ಕೇವಲ ಜನಾಂಗವನ್ನು ಬಲಪಡಿಸುವ ಉದ್ದೇಶ ಹೊಂದಿಲ್ಲ. ಅರೆಭಾಷೆ ಅಭಿವೃದ್ಧಿ ಮತ್ತು ಸಂಸ್ಕೃತಿಯನ್ನು ಬೆಳೆಸುತ್ತಿದೆ. ಇದರ ಜತೆಯಲ್ಲಿ ಸಮಾಜ ಸೇವೆಯಲ್ಲಿ ತೊಡಗಿಸಿಕೊಳ್ಳುವ ಕಾರ್ಯವನ್ನು ಮಾಡುತ್ತಿದೆ ಎಂದರು.

ಕುಶಾಲನಗರ ಅರೆಭಾಷೆ ಗೌಡ ಸಮಾಜದ ಅಧ್ಯಕ್ಷ ಚಿಲ್ಲನ ಗಣಿ ಪ್ರಸಾದ್ ಮಾತನಾಡಿ, ಅರೆಭಾಷೆ ಗೌಡ ಸಮುದಾಯ ಮತ್ತು ಭಾಷೆ, ಸಂಸ್ಕೃತಿಯನ್ನು ಬೆಳೆಸಲು ಒಗ್ಗಟಿನ ಅಗತ್ಯವಿದೆ. ಸಮಾಜದ ಆಗಿನ ಹಿರಿಯರು ಮಡಿಕೇರಿಯಲ್ಲಿ 1907ರಲ್ಲಿ ಗೌಡ ಸಮಾಜವನ್ನು ಸ್ಥಾಪಿಸಿದ್ದು, ಈಗ ಕೊಡಗಿನಲ್ಲಿ ಸಮಾಜದ ವಿವಿಧ ಸಂಘಟನೆಗಳು ಮುಂಚೂಣಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಸಂದರ್ಭದಲ್ಲಿ ಸಮಾಜದ ಸಂಘಟನೆಗೆ ನಾಂದಿ ಹಾಕಿದ ಹಿರಿಯರನ್ನು ಸ್ಮರಿಸಬೇಕಾಗುತ್ತದೆ ಎಂದರು.

ಅರೆಭಾಷೆ ಗೌಡ ಸಮಾಜದ ಅಧ್ಯಕ್ಷ ದೇವಾಯಿರ ಗಿರೀಶ್ ಸಮಾರಂಭದ ಅಧ್ಯಕ್ಷತೆವಹಿಸಿ ಮಾತನಾಡಿ, ಅರೆಭಾಷೆ ಗೌಡ ಸಮಾಜವು ಅರೆಭಾಷೆ ಸಾಹಿತ್ಯ ಸಂಸ್ಕೃತಿ ಅಕಾಡೆಮಿಯ ಸಹಕಾರ, ಸಲಹೆಗಳನ್ನು ತೆಗೆದುಕೊಂಡು ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದೆ. ಕುಶಾಲನಗರದಲ್ಲಿ ನಡೆಯಲಿರುವ ಅರೆಭಾಷೆ ಗಡಿನಾಡ ಉತ್ಸವದ ಯಶಸ್ಸಿಗೆ ನಮ್ಮ ಸಮಾಜವು ಎಲ್ಲಾ ರೀತಿಯ ಸಹಕಾರ ನೀಡುತ್ತದೆ ಎಂದರು.

ಸೋಮವಾರಪೇಟೆಯಲ್ಲಿ ಸೇನೆಗೆ ಸೇರಲು ಆಸಕ್ತಿ ಇರುವ ವಿದ್ಯಾರ್ಥಿಗಳಿಗೆ ಉಚಿತವಾಗಿ ಸೇನಾ ತರಬೇತಿ ನೀಡುತ್ತಿರುವ ನಿವೃತ್ತ ಸೈನಿಕ ನಂಗಾರು ಚಂದ್ರಕುಮಾರ್ ದಂಪತಿಯನ್ನು ಸನ್ಮಾನಿಸಲಾಯಿತು.

ಕಾರ್ಯಕ್ರಮದಲ್ಲಿ ಅರೆಭಾಷೆ ಗೌಡ ಸಮಾಜದ ಗೌರವ ಅಧ್ಯಕ್ಷ ಭಟ್ಯನ ಈರಪ್ಪ, ಕಾರ್ಯದರ್ಶಿ ಕುಯುಮುಡಿ ಜಯಕುಮಾರ್, ಸಮಾಜದ ಪ್ರಮುಖರಾದ ಕಡ್ಯದ ಅಶೋಕ್, ಕಡ್ಯದ ಶ್ಯಾಮಲಾ, ಪರ್ಲಕೋಟಿ ಶೈಲಾ ಸತೀಶ್, ಕೂಡಕಂಡಿ ಚಂದ್ರಮತಿ, ಪಿ.ಎಸ್.ಲೀಲಾಧರ್ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net