

ಕಾನಹೊಸಹಳ್ಳಿ: ದೇವಾಲಯಗಳು ಧಾರ್ಮಿಕ ಮತ್ತು ಆಧ್ಯಾತ್ಮಿಕ ಚಿಂತನೆ ತಾಣಗಳಾಗಿದ್ದು, ಭಕ್ತರ ಮನಸ್ಸನ್ನು ಸನ್ಮಾರ್ಗದತ್ತ ಕೊಂಡೊಯ್ಯುತ್ತವೆ ಎಂದು ಕೂಡ್ಲಿಗಿ ಹಿರೇಮಠದ ಶ್ರೀ ಪ್ರಶಾಂತ ಸಾಗರ ಸ್ವಾಮೀಜಿ ಹೇಳಿದರು.
ಗ್ರಾಮ ಹೊರವಲಯದ ಕೆರೆ ಬಳಿ ಶುಕ್ರವಾರ ಆಯೋಜಿಸಿದ್ದ ನೂತನ ದುರ್ಗಮ್ಮದೇವಿ ದೇವಸ್ಥಾನ ಉದ್ಘಾಟನೆ ಹಾಗೂ ಮೂರ್ತಿ ಪ್ರತಿಷ್ಠಾಪನೆ ನೆರವೇರಿಸಿ ಮಾತನಾಡಿದರು. ಸಮಾಜದಲ್ಲಿ ಧಾರ್ಮಿಕ ಕಾರ್ಯಗಳಿಗೆ ಸಹಕಾರ ನೀಡುವ ಮೂಲಕ ಭಕ್ತಿ ಭಾವನೆ ಬೆಳೆಸಬೇಕಿದೆ. ಗ್ರಾಮಗಳಲ್ಲಿ ಪ್ರತಿಯೊಬ್ಬರೂ ಶಾಂತಿ ಮತ್ತು ಸುವ್ಯವಸ್ಥೆ ಕಾಪಾಡುವ ಜತೆಗೆ ಸಾಂಸ್ಕೃತಿಕ ಪರಂಪರೆ ಉಳಿಸಲು ಕೈಜೋಡಿಸಬೇಕು ಎಂದರು.
ಕಾನಮಡುಗು ದಾಸೋಹ ಮಠದ ಧರ್ಮಾಧಿಕಾರಿ ದಾ.ಮ.ಐಮುಡಿ ಶರಣಾರ್ಯರು ಮಾತನಾಡಿದರು. ದೇವಿಗೆ ಕಂಕಣಧಾರಣೆ ಮತ್ತು ಗಂಗಾದೇವಿ ತರುವುದು, ಗೋಪೂಜೆ, ಕುಂಭಾಭಿಷೇಕ, ನವದುರ್ಗೆಯರ ಪೂಜೆ, ಅಷ್ಟ ಲಕ್ಷ್ಮೀಯರ ಪೂಜೆ ಸೇರಿ ವಿವಿಧ ಧಾರ್ಮಿಕ ಕಾರ್ಯಗಳು ಜರುಗಿದವು.
ವೇದಮೂರ್ತಿ ಎ.ಎಂ.ಚನ್ನವೀರಸ್ವಾಮಿ, ಎಚ್.ಎಂ.ಗುರುಮೂರ್ತಿ ಸ್ವಾಮಿ, ಎಚ್.ಎಂ.ಬಸವರಾಜಸ್ವಾಮಿ ಪೌರೋಹಿತ್ಯವಹಿಸಿದ್ದರು. ಪ್ರಮುಖರಾದ ಲಿಂಗನಗೌಡ್ರು, ಕುಮಾರ ಗೌಡ್ರು, ಮಾಡಗೌಡ್ರು ವಿಜಯ್ ಕುಮಾರ್, ಎಸ್.ದೇವೇಂದ್ರಪ್ಪ ಇದ್ದರು.