

ಮಂಡ್ಯ: ಓದು ಮತ್ತು ಸಂಸ್ಕೃತಿ ನಮ್ಮ ಅವಿಭಾಜ್ಯ ಅಂಗ. ಮಂಡ್ಯ ವಿಶ್ವವಿದ್ಯಾನಿಲಯಯಲ್ಲಿ ದೊಡ್ಡಮಟ್ಟದ ಸಾಂಸ್ಕೃತಿಕ ಹಬ್ಬವನ್ನು ಆಯೋಜನೆ ಮಾಡಿ ರಾಜ್ಯವೇ ತಿರುಗಿ ನೋಡುವಂತೆ ಮಾಡೋಣ ಎಂದು ಶಾಸಕ ರವಿಕುಮಾರ್ ಗಣಿಗ ಹೇಳಿದರು.
ನಗರದ ಮಂಡ್ಯ ವಿಶ್ವವಿದ್ಯಾಲಯದ ಶಾರದಾ ಮಂದಿರ(ವಿಜ್ಞಾನ ಭವನ)ದಲ್ಲಿ ಸರ್ಕಾರಿ ಮಹಾವಿದ್ಯಾಲಯ(ಸ್ವಾಯತ್ತ)ದ ವತಿಯಿಂದ ಆಯೋಜಿಸಿದ್ದ ಸಾಂಸ್ಕೃತಿಕ ಹಬ್ಬ ಉದ್ಘಾಟಿಸಿ ಮಾತನಾಡಿದ ಅವರು, ಮಂಡ್ಯ ವಿಶ್ವವಿದ್ಯಾಲಯದ ಘಟಿಕೋತ್ಸವವು ಜೂನ್‌ನಲ್ಲಿ ನಡೆಯಲಿದೆ ಎಂಬುವ ಮಾಹಿತಿ ಇದೆ. ಇದಾದ ಬಳಿಕ ಜಿಲ್ಲೆಯ ಎಲ್ಲ ವಿದ್ಯಾರ್ಥಿಗಳನ್ನು ಸೇರಿಸಿ ಸಾಂಸ್ಕೃತಿಕ ಹಬ್ಬವನ್ನು ನನ್ನ ಸ್ವಂತ ಖರ್ಚಿನಲ್ಲಿ ಆಯೋಜನೆ ಮಾಡುತ್ತೇನೆ. ಇದಕ್ಕೆ ನಿಮ್ಮ ಸಹಕಾರ ಹಾಗೂ ಪ್ರಾಂಶುಪಾಲರು ಕಾರ್ಯಕ್ರಮದ ದಿನ ತಿಳಿಸಿದರೆ ಸಾಕು ಎಂದು ವಿಶ್ವಾಸ ವ್ಯಕ್ತಪಡಿಸಿದರು.
ತುಮಕೂರು ಲೋಕೋಪಯೋಗಿ ವಿಶ್ರಾಂತ ಲೆಕ್ಕಾಧಿಕಾರಿ ಟಿ.ಆರ್.ನಾರಾಯಣಪ್ಪ ಮಾತನಾಡಿ, ವಿದ್ಯಾರ್ಥಿಗಳು ಓದುವ ಹವ್ಯಾಸ ಬೆಳೆಸಿಕೊಳ್ಳಬೇಕು. ಸ್ಪರ್ಧಾಯುಗವಾಗಿರುವುದರಿಂದ ಪ್ರಚಲಿತ ಘಟನೆಗಳನ್ನು ಅಭ್ಯಾಸ ಮಾಡುವ ಮೂಲಕ ಎಲ್ಲ ವಿಷಯಗಳಲ್ಲಿಯೂ ಜ್ಞಾನ ಹೊಂದಬೇಕು. ಹೀಗಿದ್ದರೆ ಮಾತ್ರ ನಿಮ್ಮ ಸಾಧನೆ ಜತೆಗೆ ಗುರಿ ತಲುಪಲು ಸಾಧ್ಯ ಎಂದು ಸಲಹೆ ನೀಡಿದರು.
ಮಂಡ್ಯ ವಿವಿ ಕುಲಪತಿ ಪ್ರೊ.ಕೆ.ಶಿವಚಿತ್ತಪ್ಪ ಅಧ್ಯಕ್ಷತೆ ವಹಿಸಿದ್ದರು. ಪ್ರಾಂಶುಪಾಲೆ ಬಿ.ಸ್ವರ್ಣಾ, ಮಂಡ್ಯ ವಿವಿ ಕುಲಸಚಿವ(ಮೌಲ್ಯಮಾಪನ) ಪ್ರೊ.ಕೆ.ಯೋಗನರಸಿಂಹಚಾರಿ, ಸಾಂಸ್ಕೃತಿಕ ಸಮಿತಿ ಸಂಚಾಲಕ ಎಂ.ವೈ.ಶಿವರಾಮು ಭಾಗವಹಿಸಿದ್ದರು. ವಿದ್ಯಾರ್ಥಿಗಳು ಸಾಂಸ್ಕೃತಿಕ ಕಾರ್ಯಕ್ರಮ ನಡೆಸಿಕೊಟ್ಟರು.