

ಮಂಡ್ಯ: ಪದವಿ ಕಾಲೇಜಿನಂತಿರುವ ಮಂಡ್ಯ ವಿಶ್ವವಿದ್ಯಾನಿಲಯವನ್ನು ಇನ್ನೈದು ವರ್ಷದಲ್ಲಿ ಪರಿಪೂರ್ಣ ವಿವಿಯನ್ನಾಗಿ ಉನ್ನತೀಕರಣ ಮಾಡಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ಹೇಳಿದರು.
ನಗರದ ಮಂಡ್ಯ ವಿಶ್ವವಿದ್ಯಾಲಯದ ಆವರಣದಲ್ಲಿ ಶನಿವಾರ ಆಯೋಜಿಸಲಾಗಿದ್ದ ಸಾಂಸ್ಕೃತಿಕ ಹಬ್ಬವನ್ನು ಉದ್ಘಾಟಿಸಿ ಮಾತನಾಡಿದ ಅವರು, ಬೆಂಗಳೂರು ಮತ್ತು ಮೈಸೂರು ವಿಶ್ವವಿದ್ಯಾನಿಲಯದ ರೀತಿ ಮಂಡ್ಯ ವಿವಿ ಅಭಿವೃದ್ಧಿಯಾಗಬೇಕು. 2019ರಲ್ಲಿ ವಿವಿ ಘೋಷಣೆಯಾದರೂ ನಿರೀಕ್ಷಿತ ಪ್ರಮಾಣದಲ್ಲಿ ಉನ್ನತೀಕರಣವಾಗಿಲ್ಲ. ವಿವಿಯಲ್ಲಿರಬೇಕಾದ ವಾತಾವರಣ ನಿರ್ಮಾಣವಾಗಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
ಮಂಡ್ಯ ವಿವಿಗೆ ಅಗತ್ಯವಾಗಿ ಏನೇನು ಬೇಕು ಎಂಬುದರ ಬಗ್ಗೆ ಪ್ರಸ್ತಾವನೆ ಸಲ್ಲಿಸಲು ಕುಲಸಚಿವರಿಗೆ ತಿಳಿಸಿದ್ದೇನೆ. ಆ ಬಳಿಕ ಬೇಡಿಕೆಗಳಿಗನುಗುಣವಾಗಿ ಸರ್ಕಾರದ ಗಮನಕ್ಕೆ ತಂದು ಉನ್ನತೀಕರಣ ಮಾಡಲಾಗುವುದು. ಇಲ್ಲಿ ಸಾವಿರಾರು ಮಕ್ಕಳು ವಿದ್ಯಾಭ್ಯಾಸ ಮಾಡುತ್ತಿದ್ದು, ಹೊಸ ಕೋರ್ಸ್‌ಗಳು ಪ್ರಾರಂಭವಾಗಿರುವುದು ಆಶಾದಾಯಕ ಬೆಳವಣಿಗೆ. ಇನ್ನಷ್ಟು ಕೋರ್ಸ್‌ಗಳ ಅಗತ್ಯವಿದ್ದರೆ ಸರ್ಕಾರದಿಂದ ಅನುಮತಿ ಕೊಡಿಸಿಕೊಡಲಾಗುವುದು ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಶಾಸಕ ರವಿಕುಮಾರ್ ಗಣಿಗ ಮಾತನಾಡಿ, ವಿದ್ಯಾರ್ಥಿ ಜೀವನ ಎಂಬುದು ಗೋಲ್ಡನ್ ಲೈಫ್. ಈ ಸಮಯ ಮತ್ತೊಮ್ಮೆ ನಿಮಗೆ ಬರುವುದಿಲ್ಲ. ಹಾಗಾಗಿ ಉನ್ನತ ವ್ಯಾಸಂಗ ಮಾಡಿ ಸಮಾಜಕ್ಕೆ ಉತ್ತಮ ಹೆಸರು ತಂದುಕೊಡಬೇಕು. ಸಿಕ್ಕಿರುವ ಅವಕಾಶವನ್ನು ಸದುಪಯೋಗ ಪಡೆದುಕೊಂಡು ಉತ್ತಮ ಜೀವನ ರೂಪಿಸಿಕೊಳ್ಳುವಂತೆ ಸಲಹೆ ನೀಡಿದರು.
ಖ್ಯಾತ ಜಾನಪದ ಗಾಯಕ ಮಳವಳ್ಳಿ ಮಹಾದೇವಸ್ವಾಮಿ, ಮಂಡ್ಯ ವಿಶ್ವವಿದ್ಯಾಲಯ ಕುಲಪತಿ ಡಾ.ಪುಟ್ಟರಾಜು, ಉಪಕುಲಪತಿ ಡಾ.ರಂಗರಾಜ್, ಕುಲಸಚಿವ ಡಾ.ನಾಗರಾಜ್ ಜಿ.ಚೊಳ್ಳ, ಸಿಂಡಿಕೇಟ್ ಸದಸ್ಯ ಎಂ.ನಾಗರಾಜು, ಕಿರುತೆರೆ ನಟ ಮಧುಸಾಗರ್, ಅಖಿಲಾ ಪ್ರಕಾಶ್ ಹಾಜರಿದ್ದರು.
ವೇದಿಕೆ ಕಾರ್ಯಕ್ರಮಕ್ಕೂ ಮುನ್ನ ಸಚಿವ ಚಲುವರಾಯಸ್ವಾಮಿ ಹಾಗೂ ಶಾಸಕ ರವಿಕುಮಾರ್ ಅವರನ್ನು ಕಲಾತಂಡಗಳು ವೇದಿಕೆಗೆ ಮೆರವಣಿಗೆ ಮೂಲಕ ಕರೆದುಕೊಂಡು ಬಂದರು. ಕ್ರೀಡೆ ಹಾಗೂ ವಿವಿಧ ಕ್ಷೇತ್ರಗಳಲ್ಲಿ ಸ್ಪರ್ಧೆ ಮಾಡಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು.