

ಮೇಲುಕೋಟೆ: ಶ್ರೀ ಚೆಲುವನಾರಾಯಣನ ಸನ್ನಿಧಿ ಮೇಲುಕೋಟೆಯ ವಾಹನೋತ್ಸವ ಮಂಟಪದಲ್ಲಿ ಪ್ರಥಮ ಬಾರಿಗೆ ಶನಿವಾರ ಆಯೋಜಿಸಿದ್ದ ನವರಾತ್ರಿ ಸಂಗೀತ-ನೃತ್ಯೋತ್ಸವ ಸೇವೆಯ ಪ್ರಥಮ ದಿನದ ಕಾರ್ಯಕ್ರಮ ಪ್ರೇಕ್ಷಕರ ಮನಸೂರೆಗೊಂಡಿತು.
ಭರತನಾಟ್ಯ, ನಾದಸ್ವರ ವಾದನ ಹಾಗೂ ದೇವಾಲಯದ ಮೊಗಸಾಲೆಯಲ್ಲಿ ಮಹಿಳೆಯರಿಗಾಗಿ ಆಯೋಜಿಸಿದ್ದ ರಂಗೋಲಿ ಸ್ಪರ್ಧೆ ಭಕ್ತರ ಮನಸ್ಸಿಗೆ ಮುದ ನೀಡಿತು. ಅಪರ ಜಿಲ್ಲಾಧಿಕಾರಿ ಡಾ.ಎಚ್.ಎಲ್ ನಾಗರಾಜು ಅವರು ಸಾಂಸ್ಕೃತಿಕ ಕಾರ್ಯಕ್ರಮ ವೀಕ್ಷಿಸಿದರು. ದೇವಾಲಯದ ಪಾರುಪತ್ತೇಗಾರ ಸ್ಥಾನಾಚಾರ್ಯ ಶ್ರೀ ನಿವಾಸನರಸಿಂಹನ್ ಗುರೂಜಿ ಭರತನಾಟ್ಯ ಕಲಾವಿದರಿಗೆ ಸ್ಮರಣಿಕೆ ನೀಡಿ ಗೌರವಿಸಿದರು. ಮೇಲುಕೋಟೆಯ ವಿದ್ವಾನ್ ಕುಮಾರ್ ತಂಡ ನಾದಸ್ವರ ಕಛೇರಿ ನಡೆಸಿಕೊಟ್ಟರೆ, ಬೆಂಗಳೂರಿನ ನಾಟ್ಯಭೈರವಿ ಕಲಾ ಕುಟೀರದ ತಂಡ ವಿದುಷಿ ಮಂಜುಭೈರವಿ ಅವರ ಭರತನಾಟ್ಯ ರೂಪಕಗಳು ಪ್ರೇಕ್ಷಕರ ಮನಗೆದ್ದವು.
ಬೆಂಗಳೂರಿನ ಶಾರದ ಸುಗಮ ಸಂಗೀತ ಶಾಲೆಯ ವಿದುಷಿ ಗಾಯತ್ರಿ ತಂಡ ಭಕ್ತಿಗೀತೆಗಳ ಗಾಯನ ನಡೆಸಿಕೊಟ್ಟಿತು.