

ವೇಮಗಲ್ : ನಾಡಿನಾದ್ಯಂತ ಧಾರ್ಮಿಕವಾಗಿ ಶಿವನ ಆರಾಧಕರು ಮಹಾಶಿವರಾತ್ರಿಯ ಆಚರಣೆಯಲ್ಲಿ ತಲ್ಲೀನರಾಗಿದ್ದರೆ ಇತ್ತ ಕೋಲಾರ ತಾಲೂಕಿನ ವೇಮಗಲ್‌ನಲ್ಲಿ ಮಹಿಳೆಯರ ಪಾಲಿಗೆ ಸಾಂಸ್ಕೃತಿಕ ಹಬ್ಬವಾಗಿ ಮಹಿಳಾ ಸಾಂಸ್ಕೃತಿಕ ಉತ್ಸವ ಮೇಳೈಸಿತ್ತು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ವೇಮಗಲ್ ಗ್ರಾಪಂ, ಓಬವ್ವ ಸಾಂಸ್ಕೃತಿಕ ಕಲಾ ಸಂಘದ ಸಹಯೋಗದಲ್ಲಿ ವಿ.ಎಸ್.ರಾಮಶೆಟ್ಟಿ ಬಯಲು ರಂಗಮಂದಿರದಲ್ಲಿ ಮಹಿಳಾ ಸಾಂಸ್ಕೃತಿಕ ಉತ್ಸವ ಕಳೆಗಟ್ಟಿತ್ತು. ಪುರುಷ ಕಲಾವಿದರಿಗೆ ಕಡಿಮೆ ಇಲ್ಲದಂತೆ ಹೆಣ್ಣುಮಕ್ಕಳು ವಿವಿಧ ಕಲಾ ಪ್ರಕಾರಗಳ ಪ್ರದರ್ಶನ ನೀಡಿ ಸೈ ಎನಿಸಿಕೊಂಡರು. ಮೂರಂಡಹಳ್ಳಿಯ ತನುಶ್ರೀ ತಂಡದ ಕಲಾವಿದರು ಡೊಳ್ಳು ಕುಣಿತ, ಉರಟಿ ಅಗ್ರಹಾರದ ಸುನಂದಮ್ಮ ತಂಡವರು ತಮಟೆ ವಾದನ, ತೊಟ್ಲಿಯ ಚೌಡಮ್ಮ ಮತ್ತು ತಂಡ ಕೋಲಾಟ ಪ್ರದರ್ಶನ ನೀಡಿದರು.
ಮಂಡ್ಯದ ಸವಿತಾ ಪೂಜಾ ಕುಣಿತ ಪ್ರದರ್ಶಿಸಿ ನೆರೆದಿದ್ದವರನ್ನು ಬೆರುಗುಗೊಳಿಸಿದರೆ, ಮಭನಶ್ರೀ ಮತ್ತು ತಂಡದವರ ಪಟ ಕುಣಿತ ಗಮನ ಸೆಳೆಯಿತು. ಇದರ ಜತೆಗೆ ಸೋಬಾನೆ ಪದ, ತತ್ವಪದ ಗಾಯನ, ಜನಪದ ಗೀತೆ ಭಕ್ತಿಗೀತೆಗಳೂ, ಸುಗಮಸಂಗೀತ, ಭಜನೆ, ಸಮೂಹ ನೃತ್ಯಕಲಾವಿದರು ಪ್ರಮುಖ ಬೀದಿಗಳಲ್ಲಿ ಮೆರವಣಿಗೆಯಲ್ಲಿ ಕಲಾ ಪ್ರದರ್ಶನ ನೀಡಿ ಸಾರ್ವಜನಿಕರನ್ನು ರಂಜಿಸಿದರು. ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಆವರಣದಲ್ಲಿ ಆಯೋಜಿಸಿದ್ದ ರಂಗೋಲಿ ಸ್ಪರ್ಧೆಯಲ್ಲಿ ಮಹಿಳೆಯರು ಒಂದಕ್ಕಿಂತ ಒಂದು ಭಿನ್ನವಾಗಿ ಅತ್ಯಾಕರ್ಷಕವಾದ ರಂಗೋಲಿಗಳನ್ನು ಬಿಡಿಸಿ ಜನ ಮನ ಸೆಳೆಯುತ್ತಿದ್ದರು.
ಕಲಾಪ್ರದರ್ಶನದ ಮೆರವಣಿಗೆಯನ್ನು ಶಾಸಕ ಕೆ.ಶ್ರೀನಿವಾಸಗೌಡ ಉದ್ಘಾಟಿಸಿದರು. ವಿಧಾನ ಪರಿಷತ್ ಮಾಜಿ ಸಭಾಪತಿ ವಿ.ಆರ್. ಸುದರ್ಶನ್, ಜಿಪಂ ಅಧ್ಯಕ್ಷ ಸಿ.ಎಸ್.ವೆಂಕಟೇಶ್, ತಾಪಂ ಸದಸ್ಯ ವಿ.ಎಂ.ಮುನಿಯಪ್ಪ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಡಿ.ಎಂ.ರವಿಕುಮಾರ್, ವೇಮಗಲ್ ಪಿಡಿಒ ಬಿ.ಆರ್. ರಮೇಶ್ ಬಾಬು, ಕುಡಾ ನಾಮನಿರ್ದೇಶಿತ ಸದಸ್ಯೆ ಮಮತಮ್ಮ, ಬಿಜೆಪಿ ಗ್ರಾಮಾಂತರ ಅಧ್ಯಕ್ಷ ಸಿ.ಡಿ.ರಾಮಚಂದ್ರ, ಮುಖಂಡ ಓಹಿಲೇಶ್ ಹಾಗೂ ಸುತ್ತಮುತ್ತಲಿನ ಗ್ರಾಮಸ್ಥರು ಉಪಸ್ಥಿತರಿದ್ದರು.