

ಬೆಂಗಳೂರು: ರಾಜಭವನದ ಗಾಜಿನಮನೆಯಲ್ಲಿ ನಡೆದ ವಿವಿಧ ರಾಜ್ಯಗಳ ಸಂಸ್ಕೃತಿ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳ ಸಮಾಗಮ ವೈವಿಧ್ಯತೆಯಲ್ಲಿ ಏಕತೆಯ ಸಂದೇಶ ಸಾರಿತು.
ರಾಜಸ್ಥಾನ, ಗುಜರಾತ್, ಮಹಾರಾಷ್ಟ್ರ, ಗೋವಾ, ಹಿಮಾಚಲ ಪ್ರದೇಶ, ಬಿಹಾರ, ಸಿಕ್ಕಿಂ, ಪಶ್ಚಿಮ ಬಂಗಾಳ, ಒಡಿಶಾ ಮತ್ತು ತೆಲಂಗಾಣ ರಾಜ್ಯಗಳ ಸಂಸ್ಥಾಪನಾ ದಿನಾಚರಣೆಯನ್ನು ರಾಜಭವನದಲ್ಲಿ ಆಚರಿಸಲಾಯಿತು.
ಸಮಾರಂಭವನ್ನು ಉದ್ದೇಶಿಸಿ ಮಾತನಾಡಿದ ರಾಜ್ಯಪಾಲ ಥಾವರಚಂದ್ ಗೆಹಲೋತ್, ಭಾರತದ ಪ್ರತಿಯೊಂದು ರಾಜ್ಯವು ಅದರ ಗುಣಲಕ್ಷಣಗಳು ಮತ್ತು ಧಾರ್ಮಿಕ ಮತ್ತು ಸಾಂಸ್ಕೃತಿಕ ಪರಂಪರೆಯಿಂದಾಗಿ ವಿಶಿಷ್ಟವಾಗಿದೆ. ರಾಜ್ಯಗಳ ಈ ಗುಣಲಕ್ಷಣಗಳು ಭಾರತೀಯ ಸಂಸ್ಕೃತಿಯ ವೈವಿಧ್ಯತೆ ಮತ್ತು ಶ್ರೀಮಂತಿಕೆಯನ್ನು ಪ್ರದರ್ಶಿಸುತ್ತವೆ ಎಂದರು.
ಏಕ ಭಾರತ ಚಿಂತನೆಗೆ ಮೆರುಗು:
ಭಾರತದ ವಿವಿಧ ರಾಜ್ಯಗಳಲ್ಲಿ ಆಚರಿಸಲಾಗುವ ಹಬ್ಬಗಳು ಮತ್ತು ಆಚರಣೆಗಳ ಪರಿಕಲ್ಪನೆ ಮತ್ತು ಉದ್ದೇಶಗಳಲ್ಲಿ ಸಮಾನತೆ ಮತ್ತು ಸಾಮರಸ್ಯವು ಗೋಚರಿಸುತ್ತದೆ. ಏಕ ಭಾರತ, ಅತ್ಯುತ್ತಮ ಭಾರತ ಎಂಬ ಚಿಂತನೆಯ ಮೇರೆಗೆ, ಪ್ರತಿ ರಾಜ್ಯಗಳ ಸಂಸ್ಥಾಪನಾ ದಿನವನ್ನು ಇತರ ರಾಜ್ಯಗಳಲ್ಲಿಯೂ ಆಚರಿಸಲಾಗುತ್ತಿದೆ, ಇದು ನಮ್ಮ ದೇಶದ ಅನನ್ಯ ಅಸ್ಮಿತೆಯನ್ನು, ವಿವಿಧತೆಯಲ್ಲಿ ಏಕತೆಯ ಪರಿಕಲ್ಪನೆಯನ್ನು ಮತ್ತಷ್ಟು ಬಲಪಡಿಸುತ್ತದೆ. ಮತ್ತೊಂದು ರಾಜ್ಯದ ಸಂಸ್ಥಾಪನಾ ದಿನವನ್ನು ಆಚರಿಸುವುದು ಸಾಮಾಜಿಕ ಏಕೀಕರಣ ಮತ್ತು ಸಾಂಸ್ಕೃತಿಕ ವಿನಿಮಯವನ್ನು ಉತ್ತೇಜಿಸುತ್ತದೆ ಎಂದು ರಾಜ್ಯಪಾಲರು ವಿವರಿಸಿದರು.