

ನರಗುಂದ: ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ನಿರಂತರ ಅಧ್ಯಯನದೊಂದಿಗೆ ಸಂಸ್ಕಾರಯುತ ಶಿಕ್ಷಣ ಪಡೆಯಬೇಕು ಎಂದು ಜಿಲ್ಲಾ ಪ್ರಭಾರಿ ದೈಹಿಕ ಪರಿವೀಕ್ಷಣಾಧಿಕಾರಿ ಎನ್.ಆರ್. ನಿಡಗುಂದಿ ಹೇಳಿದರು.
ಪಟ್ಟಣದ ಮಾರುತಿನಗರ ಬಡಾವಣೆಯ ಸಂಗೊಳ್ಳಿ ರಾಯಣ್ಣ ಪ್ರೌಢ ಶಾಲೆಯಲ್ಲಿ ಬುಧವಾರ ಹಮ್ಮಿಕೊಂಡಿದ್ದ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳ ಬೇಸಿಗೆ ತರಬೇತಿ ಶಿಬಿರದ ಸಮಾರೋಪ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.
ಬೇಸಿಗೆಯಲ್ಲಿ ಮಕ್ಕಳು ಕಾಲಹರಣ ಮಾಡದೇ ನಿರಂತರ ಕಲಿಕೆಯಲ್ಲಿ ತೊಡಗಿಸಿಕೊಳ್ಳಲು ಬೇಸಿಗೆ ತರಬೇತಿ ಶಿಬಿರಗಳನ್ನು ನಡೆಸಲಾಗುತ್ತಿದೆ. ಪ್ರತಿಯೊಬ್ಬ ವಿದ್ಯಾರ್ಥಿಗಳು ಇದರ ಪ್ರಯೋಜನ ಪಡೆದುಕೊಳ್ಳಬೇಕು. ವಿದ್ಯಾರ್ಥಿ ಜೀವನದಲ್ಲಿ ನಿರ್ದಿಷ್ಟ ಗುರಿ ಹೊಂದಿರಬೇಕು. ಕಳೆದು ಹೊದ ಸಮಯ ಮತ್ತೆ ಬರುವುದಿಲ್ಲ. ಹೀಗಾಗಿ ಸಿಕ್ಕ ಸಮಯವನ್ನು ವ್ಯರ್ಥ ಮಾಡದೇ ಉತ್ತಮ ಭವಿಷ್ಯ ನಿರ್ಮಿಸಿಕೊಳ್ಳಲು ಗಮನಹರಿಸಬೇಕು. ಟಿವಿ, ಮೊಬೈಲ್ ಗೀಳಿನಿಂದ ದೂರವಿರಬೇಕು ಎಂದು ಸಲಹೆ ನೀಡಿದರು.
ಎಂ.ಆರ್. ನಾಯಕ್ ಮಾತನಾಡಿ, ಸರ್ಕಾರಿ ಶಾಲೆಗಳಲ್ಲಿ ಎಲ್ಲ ರೀತಿಯ ಶೈಕ್ಷಣಿಕ ಸೌಲಭ್ಯಗಳನ್ನು ಉಚಿತವಾಗಿ ನೀಡಲಾಗುತ್ತಿದೆ. ವಿದ್ಯಾರ್ಥಿಗಳು ಇವುಗಳ ಪ್ರಯೋಜನ ಪಡೆದುಕೊಂಡು ಉತ್ತಮ ಭವಿಷ್ಯ ನಿರ್ಮಿಸಿಕೊಳ್ಳಬೇಕು ಎಂದು ತಿಳಿಸಿದರು.
ಐ.ಎಂ. ತಹಸೀಲ್ದಾರ, ಸಿ.ಬಿ. ಸುಬೇದಾರ ಮಾತನಾಡಿದರು. ಬೇಸಿಗೆ ಶಿಬಿರದಲ್ಲಿ ವಿದ್ಯಾರ್ಥಿ, ವಿದ್ಯಾರ್ಥಿನಿಯರಿಗಾಗಿ ಭಾವಗೀತೆ, ರಸಪ್ರಶ್ನೆ, ರಂಗೋಲಿ, ಮ್ಯೂಸಿಕಲ್ ಚೇರ್ ಸ್ಪರ್ಧೆಗಳನ್ನು ಏರ್ಪಡಿಸಲಾಗಿತ್ತು. ವಿಜೇತರಿಗೆ ಬಹುಮಾನ ನೀಡಿ ಗೌರವಿಸಲಾಯಿತು. ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಗಣ್ಯರನ್ನು ಸನ್ಮಾನಿಸಲಾಯಿತು.
ಈಶ್ವರ ಜ್ಯೋತೆಣ್ಣವರ, ಮುಖ್ಯೊಪಾಧ್ಯಾಯ ಎಂ.ಎಸ್. ತಳವಾರ, ಶ್ರೀಧರ ಹಂದಿಗೋಳ, ಎಂ.ಆರ್. ಜವಳಿ, ಮುತ್ತುರಾಜ ಅಸುಂಡಿ ಇತರರಿದ್ದರು. ಬೀಬಿಜಾನ, ತನುಶ್ರೀ ಸ್ವಾಮಿ ಸಂಗಡಿಗರು ಪ್ರಾರ್ಥನೆ, ಸ್ವಾಗತ ಗೀತೆ ಹಾಡಿದರು. ಇಮಾಮ ಅಗಸರ ಸ್ವಾಗತಿಸಿದರು. ಎಂ.ಆರ್. ಜವಳಿ, ಎಂ.ಬಿ. ಅಸುಂಡಿ ನಿರ್ವಹಿಸಿದರು.