ಮೊಬೈಲ್ ಗೀಳಿನಿಂದ ವಿದ್ಯಾರ್ಥಿಗಳು ಹೊರಬನ್ನಿ: ಚಿಂತಕ ಮ.ರಾಮಕೃಷ್ಣ ಸಲಹೆ

Cultural day Mandya
Published on

ಮಂಡ್ಯ: ವಿದ್ಯಾರ್ಥಿಗಳು ಮೊಬೈಲ್ ಗೀಳಿನಿಂದ ಹೊರಬರದಿದ್ದರೆ ಭವಿಷ್ಯದಲ್ಲಿ ತೊಂದರೆ ಎದುರಿಸಬೇಕಾಗುತ್ತದೆ. ಆದ್ದರಿಂದ ಈಗಿನಿಂದಲೇ ಎಚ್ಚೆತ್ತುಕೊಳ್ಳಬೇಕು ಎಂದು ಚಿಂತಕ ಮ.ರಾಮಕೃಷ್ಣ ಸಲಹೆ ನೀಡಿದರು.

ತಾಲೂಕಿನ ಕೊಮ್ಮೇರಹಳ್ಳಿ ವಿಶ್ವಮಾನವ ಪಿಯು ಕಾಲೇಜಿನಲ್ಲಿ ಆಯೋಜಿಸಿದ್ದ ಸಾಂಸ್ಕೃತಿಕ ದಿನದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ವಿಶ್ವಗುರು ಬಸವಣ್ಣನವರ ವಚನವನ್ನು ಸದಾ ನೆನಪಿಸಿಕೊಳ್ಳಬೇಕು. ಮನೆಗೆ ಬಂದವರನ್ನು ಸ್ವಾಗತಿಸುವ ಅಥವಾ ಮಾತನಾಡಿಸುವ ಸಂಸ್ಕೃತಿ ಮರೆತು, ಮೊಬೈಲ್ ಹಿಡಿದು ಮೂಲೆ ಸೇರುತ್ತಿರುವ ಯುವ ಜನಾಂಗವು ಮುಂದಿನ ದಿನಗಳಲ್ಲಿ ದೊಡ್ಡ ಬೆಲೆ ತರಬೇಕಾಗುತ್ತದೆ ಎಂದು ಭವಿಷ್ಯ ನುಡಿದರು.

ತಲೆಯೆತ್ತಿ ಬಾಳುವಂತೆ ಪ್ರೇರೇಪಿಸುವ ಪುಸ್ತಕಗಳನ್ನು ಓದುವ ಹವ್ಯಾಸವನ್ನು ವಿದ್ಯಾರ್ಥಿಗಳು ಮೈಗೂಡಿಸಿಕೊಳ್ಳಬೇಕೆಂದು ಡಾ.ಬಿ.ಆರ್.ಅಂಬೇಡ್ಕರ್ ಅವರೇ ಹೇಳಿದ್ದರು. ಅದರಂತೆ ನಡೆಯಬೇಕು. ಡಾ.ಅಬ್ದುಲ್ ಕಲಾಂ ಅವರ ಆದರ್ಶವನ್ನು ವಿದ್ಯಾರ್ಥಿಗಳು ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.

ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ಪ್ರಧಾನ ಕಾರ್ಯದರ್ಶಿ ಪುರುಷೋತ್ತಮನಂದನಾಥ ಸ್ವಾಮೀಜಿ ಮಾತನಾಡಿದರು. ಕಾಲೇಜಿನ ಆಡಳಿತಾಧಿಕಾರಿ ಯೋಗಾನಂದ, ಕಲಾವಿದೆ ಪ್ರಿಯದರ್ಶಿನಿ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net