ಭವಿಷ್ಯಕ್ಕೆ ನುಡಿಜಾತ್ರೆ ಮಾದರಿಯಾಗುವಂತಿರಲಿ: ವಿಧಾನ ಪರಿಷತ್ ಸದಸ್ಯ ದಿನೇಶ್ ಗೂಳಿಗೌಡ ಸಲಹೆ

Cultural Coordination Committee Meeting Mandya
Published on

ಮಂಡ್ಯ: ರಾಜ್ಯದಲ್ಲಿ ಎಲ್ಲಿಯೇ ನುಡಿಜಾತ್ರೆಗಳಾದರೂ ಮಂಡ್ಯದಲ್ಲಿ ನಡೆಯುತ್ತಿರುವ 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ರೋಲ್‌ಮಾಡೆಲ್ ಆಗುವಂತಾಗಬೇಕು. ಆದ್ದರಿಂದ ಮೂರು ದಿನವೂ ಕಲೆಯ ರಸದೌತಣವನ್ನು ನೀಡುವ ಕೆಲಸವನ್ನು ಒಟ್ಟಿಗೆ ಸೇರಿ ಮಾಡೋಣ ಎಂದು ಸಾಂಸ್ಕೃತಿಕ ಸಮನ್ವಯ ಸಮಿತಿ ಅಧ್ಯಕ್ಷರೂ ಆದ ವಿಧಾನ ಪರಿಷತ್ ಸದಸ್ಯ ದಿನೇಶ್ ಗೂಳಿಗೌಡ ಹೇಳಿದರು.

ನಗರದ ಹೊರವಲಯದ ಅಮರಾವತಿ ಹೋಟೆಲ್‌ನಲ್ಲಿ ಆಯೋಜಿಸಿದ್ದ ಸಾಂಸ್ಕೃತಿಕ ಸಮನ್ವಯ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಹೃದಯ ಶ್ರೀಮಂತಿಕೆಗೆ ಹೆಸರುವಾಸಿಯಾಗಿರುವ ಮಂಡ್ಯ ಜಿಲ್ಲೆಯಲ್ಲಿ ಅತಿ ಹೆಚ್ಚು ಕಲಾಪ್ರಕಾರಗಳಿವೆ. ಸ್ಥಳೀಯ ಕಲಾವಿದರ ಜತೆಗೆ ಹೊರರಾಜ್ಯ, ವಿದೇಶದ ಕಲಾವಿದರಿಗೆ ಅವಕಾಶ ನೀಡುವ ಮೂಲಕ ಜಿಲ್ಲೆಯ ಜನತೆಗೆ ಕಲೆಯ ರಸದೌತಣ ನೀಡುವ ಕೆಲಸವನ್ನು ನಾವೆಲ್ಲರೂ ಮಾಡಬೇಕು ಎಂದು ಕರೆಕೊಟ್ಟರು.

ಸಾಂಸ್ಕೃತಿಕ ಕಾರ್ಯಕ್ರಮದ ಯಶಸ್ವಿಗೆ ಎಲ್ಲರ ಸಹಕಾರ ಮುಖ್ಯ. ಸಾಹಿತ್ಯ ಸಮ್ಮೇಳನಕ್ಕೆ ಕಲಾವಿದರೇ ಬೆನ್ನೆಲುಬು, ಅವರೇ ಶಕ್ತಿ. ಆದ್ದರಿಂದ ಕಲಾವಿದರ ಆಯ್ಕೆ, ಕಾರ್ಯಚಟುವಟಿಕೆಗಳಿಗೆ ಸ್ಪಷ್ಟ ರೂಪ ಕೊಡಬೇಕು. ಈ ನೆಲ, ಜಲ, ಭಾಷೆ ಹೆಸರು ವಿಶ್ವಮಟ್ಟದಲ್ಲಿ ಪಸರಿಸಲು ಎಲ್ಲರ ಸಹಕಾರ ಮುಖ್ಯ. ವೈಯಕ್ತಿಕವಾಗಿ ಯಾವುದೇ ಹೆಸರನ್ನು ಶಿಫಾರಸು ಮಾಡುವುದಿಲ್ಲ. ಕಲಾವಿದರಿಗೆ ಊಟ ವಸತಿ, ಗೌರವಧನ, ಯಾವ ವೇದಿಕೆಗಳಲ್ಲಿ ಯಾವ್ಯಾವ ಕಾರ್ಯಕ್ರಮ ನಡೆಯಬೇಕು ಎಂಬುದರ ಸಂಬಂಧ 5-6 ಉಪಸಮಿತಿ ರಚನೆ ಮಾಡಲಾಗುವುದು. ಸ್ವಯಂಸೇವೇಕರ ಅವಶ್ಯಕತೆಯಿದ್ದು ಕನ್ನಡ ಹಬ್ಬಕ್ಕೆ ಉಚಿತ ಸೇವೆ ಸಲ್ಲಿಸುವವರಿಗೆ ಅವಕಾಶ ಕಲ್ಪಿಸಲಾಗುವುದು ಎಂದರು.

ಸಮಿತಿಯ ಉಪಾಧ್ಯಕ್ಷರು ಆದ ಕರ್ನಾಟಕ ಸಂಘದ ಅಧ್ಯಕ್ಷ ಪ್ರೊ.ಬಿ.ಜಯಪ್ರಕಾಶಗೌಡ ಮಾತನಾಡಿ, ಮಂಡ್ಯದ ನಾಯಕತ್ವ ಪ್ರಭಾವಶಾಲಿ. ನಾವೆಲ್ಲರೂ ಒಂದು ಎಂದು ಅರಿತು ಎಲ್ಲರನ್ನೂ ಒಳಗೊಳ್ಳಬೇಕು. ನಮ್ಮ ತನವನ್ನು ಅಳಿಸಿ ಸಾಮೂಹಿಕವಾಗಿ ಕೆಲಸ ಮಾಡಬೇಕು. ಕಲಾವಿದರಿಗೆ ಅವಮಾನ ಆಗದಂತೆ ಎಚ್ಚರ ವಹಿಸಬೇಕು. ಮಂಡ್ಯದ ಜನಪದ ಕಲೆಯಾದ ಪಟ್ಟಾ ಕುಣಿತ, ಕೋಲಾಟಕ್ಕೆ ಅಂತಾರಾಷ್ಟ್ರೀಯ ಖ್ಯಾತಿ ಇದೆ. ನಮ್ಮ ಜಿಲ್ಲೆಯಲ್ಲಿ ಅತಿ ಹೆಚ್ಚು ಕಲಾಪ್ರಕಾರ ಇದೆ. ಎಲ್ಲ ತಂಡಗಳಿಂದ ಅತ್ಯುತ್ತಮ ಕಲಾವಿದರನ್ನು ಆಯ್ಕೆ ಮಾಡಬೇಕು. ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ಗೀತೆ ಎಲ್ಲ ವೇದಿಕೆಗಳಲ್ಲಿ ಮೊಳಗಬೇಕು ಎಂದು ಸಲಹೆ ನೀಡಿದರು.

ಸಮ್ಮೇಳನದ ಸಂಚಾಲಕಿ ಡಾ.ಮೀರಾ ಶಿವಲಿಂಗಯ್ಯ, ಸಮಿತಿ ಸದಸ್ಯ ಕಾರ್ಯದರ್ಶಿ ಉದಯ್‌ಕುಮಾರ್, ಸಂಚಾಲಕ ಶಿವರಾಮೇಗೌಡ, ಜಿಲ್ಲಾ ಕಸಾಪ ಗೌರವ ಕಾರ್ಯದರ್ಶಿಗಳಾದ ಡಾ.ಕೃಷ್ಣೇಗೌಡ ಹುಸ್ಕೂರು, ಹರ್ಷ ವಿ.ಪಣ್ಣೆದೊಡ್ಡಿ, ಕೋಶಾಧ್ಯಕ್ಷ ಅಪ್ಪಾಜಪ್ಪ ಇತರರಿದ್ದರು.

ಸಭೆ ಆರಂಭಕ್ಕೂ ಮುನ್ನ ಹುಲುವಾಡಿ ರಾಮಯ್ಯ ತಂಡದಿಂದ ಕನ್ನಡ ಗೀತೆ ಗಾಯನ ಮಾಡಲಾಯಿತು. ಕಲಾತಂಡಗಳ ಆಯ್ಕೆ, ಕಾರ್ಯಕ್ರಮ ಆಯೋಜನೆ, ಕಲಾವಿದರಿಗೆ ಆಹ್ವಾನ, ಗೌರವ ಸನ್ಮಾನ ಕಲಾತಂಡಗಳಿಗೆ ಗೌರವ ಸಂಭಾವನೆ, ಊಟ, ವಸತಿ ಆಯೋಜನೆ ಕುರಿತ ಚರ್ಚೆ ನಡೆಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net