ಕಲಾವಿದರ ಆಯ್ಕೆಗೆ ಮಾನದಂಡ ಪರಿಗಣನೆ: ವಿಧಾನ ಪರಿಷತ್ ಸದಸ್ಯ ದಿನೇಶ್ ಗೂಳಿಗೌಡ ಮಾಹಿತಿ

Cultural Committee Meeting Mandya
Published on

ಮಂಡ್ಯ: ಸಮ್ಮೇಳನದ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಮಂಡ್ಯ, ಮೈಸೂರು, ರಾಮನಗರ ವಿಭಾಗ ಸೇರಿದಂತೆ ಸ್ಥಳೀಯ ಕಲಾವಿದರಿಗೆ ಶೇ.50ರಷ್ಟು ಆದ್ಯತೆ ನೀಡಬೇಕು. ಉಳಿದಂತೆ ಇನ್ನುಳಿದ ಜಿಲ್ಲೆಗಳ ಕಲಾ ತಂಡಗಳಿಗೆ ಅವಕಾಶ ನೀಡಲಾಗುವುದು ಎಂದು ಸಾಂಸ್ಕೃತಿಕ ಸಮಿತಿ ಅಧ್ಯಕ್ಷರೂ ಆದ ವಿಧಾನ ಪರಿಷತ್ ಸದಸ್ಯ ದಿನೇಶ್ ಗೂಳಿಗೌಡ ಹೇಳಿದರು.

ನಗರದ ಖಾಸಗಿ ಹೋಟೆಲ್ ಸಭಾಂಗಣದಲ್ಲಿ ಆಯೋಜಿಸಿದ್ದ ಸಾಂಸ್ಕೃತಿಕ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಯಾವುದೇ ಸಣ್ಣಪುಟ್ಟ ಸಮಸ್ಯೆ ತಲೆದೂರಿದರೂ ಅವುಗಳನ್ನು ಕಡೆಗಣಿಸಿ ಧನಾತ್ಮಕ ಚಿಂತನೆಯನ್ನೊಳಗೊಂಡು ಮುನ್ನಡೆಯೋಣ. ಜಿಲ್ಲೆಯ ಸ್ಥಳೀಯ ಕಲಾವಿದರು ಸಮ್ಮೇಳನದಲ್ಲಿ ಸಮರ್ಥ ಹಾಗೂ ಬಹಳ ಜವಾಬ್ದಾರಿಯುತವಾಗಿ ಕಾರ್ಯ ನಿರ್ವಹಿಸಿ. ಹೊರ ಜಿಲ್ಲೆಗಳು ಹೊಗಳುವಂತೆ ಕಾರ್ಯಕ್ರಮ ಆಯೋಜಿಸಬೇಕು. ಅದಕ್ಕೆ ಕಲಾವಿದರಲ್ಲಿ ಸಹಕಾರ ಮನೋಭಾವ ಮುಖ್ಯವಾಗಿರುತ್ತದೆ ಎಂದರು.

ಸಮ್ಮೇಳನಕ್ಕೆ ಸ್ಥಳೀಯ ಹಾಗೂ ಹೊರ ಜಿಲ್ಲೆಯ ಕಲಾವಿದರಿಂದ ಅರ್ಜಿ ಆಹ್ವಾನಿಸಿ ಪತ್ರಿಕಾ ಪ್ರಕಟಣೆಯನ್ನು ಹೊರಡಿಸಲಾಗಿದೆ. ಇದುವರೆಗೂ ಸ್ಥಳೀಯ ಕಲಾವಿದರಿಂದ ಒಟ್ಟು 138 ಅರ್ಜಿ ನೋಂದಣಿಯಾಗಿವೆ. ಅದರಲ್ಲಿ ಎಷ್ಟು ಕಲಾ ತಂಡಗಳಿಗೆ ಅವಕಾಶ ನೀಡಬೇಕು ಎಂದು ಮುಂದಿನ ವಾರದೊಳಗೆ ಪಟ್ಟಿಯನ್ನು ತಯಾರಿಸಲಾಗುತ್ತದೆ. ಕಲಾವಿದರ ಸೇವಾ ಅನುಭವ ಮಟ್ಟ, ನೈಜತೆ ಹಾಗೂ ಸಾಮರ್ಥ್ಯ ಮಾನದಂಡದ ಆಧಾರ ಪರಿಗಣಿಸಿ ಆಯ್ಕೆ ಮಾಡಲಾಗುವುದು. ಅಂಗವಿಕಲರ ಕಲಾ ತಂಡ ಅರ್ಜಿ ಸಲ್ಲಿಸಿದ್ದು ಅವರಿಗೂ ಅವಕಾಶ ನೀಡಬೇಕು. ಕಳೆದ ಬಾರಿ ಹಾವೇರಿ ಜಿಲ್ಲೆಯಲ್ಲಿ ನಡೆದ ಸಮ್ಮೇಳನದಲ್ಲಿ ಪಾಲ್ಗೊಳ್ಳದ ಕಲಾವಿದರಿಗೆ ಅವಕಾಶ ನೀಡಬೇಕು ಎಂದರು.

ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನವಾದ್ದರಿಂದ 31 ಜಿಲ್ಲೆಯ ಮುಖ್ಯವಾದ ಕಲಾ ಪ್ರಕಾರಗಳಿಗೆ ಪ್ರಧಾನ ವೇದಿಕೆಯಲ್ಲಿ ಅವಕಾಶ ನೀಡಬೇಕು. ಸ್ಥಳೀಯ ಕಲಾ ತಂಡ ಹಾಗೂ ಹೊರ ಜಿಲ್ಲೆಯ ಕಲಾ ತಂಡಗಳಿಗೆ ಒಂದೇ ರೀತಿಯ ಗೌರವ ಧನವನ್ನು ಸಮಾನವಾಗಿ ನೀಡಬೇಕು. ಹೊರಜಿಲ್ಲೆಯ ಕಲಾ ತಂಡಗಳಿಗೆ ಹೆಚ್ಚುವರಿಯಾಗಿ ಪ್ರಯಾಣ ಭತ್ಯೆ ನೀಡಲಾಗುವುದು ಎಂದ ಅವರು, ಸಮಿತಿಯಲ್ಲಿ ಉಪಸಮಿತಿ ಸಂಚಾಲಕರು ಹಾಗೂ ಸದಸ್ಯರು ಕಲಾವಿದರಿಗೆ ಊಟ, ವಸತಿ ಸೌಲಭ್ಯ, ಕಲಾವಿದರ ಆಯ್ಕೆ, ನೋಂದಣಿ ಪ್ರಕ್ರಿಯೆ, ಪ್ರಯಾಣ ಭತ್ಯೆ, ಕಾರ್ಯಕ್ರಮದ ವೇಳಾಪಟ್ಟಿ ಸೇರಿದಂತೆ ಇನ್ನಿತರೆ ವಿವಿಧ ಜವಾಬ್ದಾರಿಗಳನ್ನು ಹಂಚಿಕೆ ಮಾಡಲಾಗಿದೆ ಎಂದು ಹೇಳಿದರು.

ಕಲಾವಿದರನ್ನು ಆಯ್ಕೆ ಮಾಡಲು ಅವರು ಈವರೆಗೂ ನೀಡಿರುವ ಕಾರ್ಯಕ್ರಮಗಳ ಪ್ರಾತ್ಯಕ್ಷಿಕೆಗಳನ್ನು ತರಿಸಿಕೊಂಡು ನೈಜತೆ ಪರಿಶೀಲಿಸಿ. ನೋಂದಣಿಯಾಗಿರುವ ಕಲಾವಿದರ ಪಟ್ಟಿಯನ್ನು ಇಂದಿನಿಂದಲೇ ತಯಾರಿಸಿ. 87ನೇ ಕನ್ನಡ ಸಮ್ಮೇಳನವಾದ್ದರಿಂದ ಕಾರ್ಯಕ್ರಮದ ಮೊದಲ ದಿನದ ವೇದಿಕೆ ಕಾರ್ಯಕ್ರಮದಲ್ಲಿ ನಡೆಯಲಿರುವ ನಾಡಗೀತೆ ಹಾಗೂ ರೈತ ಗೀತೆಗೆ ಪುರುಷ ಹಾಗೂ ಮಹಿಳಾ ಕಲಾವಿದರನ್ನೊಳಗೊಡಂತೆ ಸಮಾನ ಅವಕಾಶ ನೀಡಬೇಕು. ಒಂದೇ ರೀತಿಯ ಡ್ರೆಸ್‌ಕೋಡ್ ನೀಡಲು ಸಚಿವರೊಂದಿಗೆ ಚರ್ಚಿಸಿ ತೀರ್ಮಾನ ಕೈಗೊಳ್ಳಲಾಗುವುದು. ಸಮ್ಮೇಳನವು ಪ್ರಾರಂಭವಾಗುವ ಮುನ್ನ ತಮಟೆ, ನಗಾರಿ, ಡೊಳ್ಳು ಕುಣಿತ ಹಾಗೂ ಮಂಗಳವಾದ್ಯ ಕಲಾತಂಡ ಗಣ್ಯರನ್ನು ಸ್ವಾಗತಿಸಬೇಕು. ಸಮ್ಮೇಳನದಲ್ಲಿ ಸ್ವಯಂ ಸೇವಕರಿಗೆ ಕಾರ್ಯಕ್ರಮದ ಪ್ರಾರಂಭದಿಂದ ಕೊನೆಯವರೆಗೂ ಜವಾಬ್ದಾರಿಯಿಂದ ಸೇವೆ ಮಾಡಲು ಅವರಿಗೆ ಸೂಕ್ತ ತರಬೇತಿ ನೀಡಬೇಕು. ಸ್ವಯಂ ಸೇವಕರುಗಳಿಗೆ ಸೇವಾ ಮನೋಭಾವ ಮುಖ್ಯ ಎಂದು ಹೇಳಿದರು.

ಜಿಲ್ಲಾಧಿಕಾರಿ ಡಾ.ಕುಮಾರ ಮಾತನಾಡಿ, ಸಮ್ಮೇಳನದ ಪ್ರಧಾನ ವೇದಿಕೆಯಲ್ಲಿ ಸ್ಥಳೀಯ ಕಲಾವಿದರು ಪರಿಣಾಮಕಾರಿಯಾಗಿ ಸಾಂಸ್ಕೃತಿಕ ಕಾರ್ಯಕ್ರಮವನ್ನು ಪ್ರದರ್ಶಿಸಿ. ಸಮಿತಿಗೆ ನೀಡಿರುವ ಅನುದಾನಕ್ಕೆ ಸಂಬಂಧಿಸಿದಂತೆ ಯಾವ್ಯಾವ ಸಮಿತಿಗೆ ಎಷ್ಟೆಷ್ಟು ಅನುದಾನ ನೀಡಬೇಕು ಎಂದು ಚರ್ಚಿಸಲಾಗಿದೆ. ಎಲ್ಲ ಸಮಿತಿಗಳು ಇನ್ನೂ ಹೆಚ್ಚಿನ ಅನುದಾನಕ್ಕೆ ಬೇಡಿಕೆ ಇಟ್ಟಿದ್ದು, ಮುಂದಿನ ಸಭೆಯಲ್ಲಿ ಈ ಬಗ್ಗೆ ಚರ್ಚಿಸಿ ಮಂಡಿಸಲಾಗುವುದು ಎಂದರು.

ಸಮ್ಮೇಳನದ ಮೊದಲ 2 ದಿನಗಳ ಕಾಲ ಪ್ರಧಾನ ವೇದಿಕೆಯಲ್ಲಿ ಹೊರ ಜಿಲ್ಲೆಯ ಕಲಾವಿದರಿಗೆ ಅವಕಾಶ ನೀಡುವುದು ಸೂಕ್ತವಾಗಿದ್ದು, ಎರಡು ಸಮಾನಾಂತರ ವೇದಿಕೆಯಲ್ಲಿ ಸ್ಥಳೀಯ ಕಲಾವಿದರಿಗೆ ಆದ್ಯತೆ ನೀಡಲಾಗುವುದು. ಮೂರನೆಯ ದಿನ ಪ್ರಧಾನ ವೇದಿಕೆಯಲ್ಲಿ ಸ್ಥಳೀಯ ಕಲಾತಂಡಗಳಿಗೆ ಆದ್ಯತೆ ನೀಡಲಾಗುವುದು. ಸಂಜೆ 7 ಗಂಟೆವರೆಗೆ ವಿವಿಧ ವಿಚಾರಗೋಷ್ಠಿ ನಡೆಯಲಿವೆ. ಬಳಿಕ 10.30ರವರೆಗೆ ಮೂರು ವೇದಿಕೆಯಲ್ಲಿ ಯಾವ್ಯಾವ ಕಾರ್ಯಕ್ರಮಗಳನ್ನು ನೀಡಬೇಕು ಎಂದು ಸಮಿತಿಯಲ್ಲಿ ಚರ್ಚಿಸಿ ತೀರ್ಮಾನ ಕೈಗೊಳ್ಳಿ ಎಂದರು.

ಕರ್ನಾಟಕ ಸಂಘದ ಅಧ್ಯಕ್ಷ ಪ್ರೊ.ಬಿ.ಜಯಪ್ರಕಾಶಗೌಡ ಮಾತನಾಡಿ, ಸಮಿತಿಗೆ ಒಟ್ಟು 75 ಲಕ್ಷ ಅನುದಾನ ನೀಡಲಾಗಿದ್ದು, ಇದನ್ನು ಹೆಚ್ಚಿಸಬೇಕು. ಸಮ್ಮೇಳನದ ಮೊದಲ ದಿನ ಪ್ರಧಾನವೇದಿಕೆಯಲ್ಲಿ ಜರುಗಲಿರುವ ನಾಡಗೀತೆ ಹಾಗೂ ರೈತ ಗೀತೆಯನ್ನು ಹಾಡುವ ಅವಕಾಶ ಸ್ಥಳೀಯ ಕಲಾವಿದರಿಗೆ ಸಿಗಬೇಕು. ಸಾಂಸ್ಕೃತಿಕ ಸಮಿತಿಯಲ್ಲಿರುವ ಪ್ರತಿಯೊಬ್ಬರು ಉತ್ತಮವಾಗಿ ಕಾರ್ಯನಿರ್ವಹಿಸಬೇಕು ಎಂದು ತಿಳಿಸಿದರು.

ಸಭೆಯಲ್ಲಿ ಜಿಲ್ಲಾ ಕಸಾಪ ಸಂಚಾಲಕಿ ಡಾ.ಮೀರಾ ಶಿವಲಿಂಗಯ್ಯ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಜಂಟಿ ನಿರ್ದೇಶಕ ವಿ.ಎನ್.ಮಲ್ಲಿಕಾರ್ಜುನಸ್ವಾಮಿ, ಸಹಾಯಕ ನಿರ್ದೇಶಕ ಡಾ.ಬಿ.ವಿ.ನಂದೀಶ್, ಡಿಡಿಪಿಐ ಶಿವರಾಮೇಗೌಡ, ಜಿಲ್ಲಾ ಕಸಾಪ ಗೌರವ ಕಾರ್ಯದರ್ಶಿಗಳಾದ ಹರ್ಷ ಪಣ್ಣೆದೊಡ್ಡಿ, ಹುಸ್ಕೂರು ಕೃಷ್ಣೇಗೌಡ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net