

ಮೈಸೂರು: ಅಗತ್ಯ ವಸ್ತುಗಳ ಬೆಲೆ ಏರಿಕೆಯ ನಡುವೆಯೂ ಸಮೃದ್ಧಿ ಮತ್ತು ಸಹಬಾಳ್ವೆಯ ಸಂಕೇತವಾದ ಮಕರ ಸಂಕ್ರಾಂತಿ ಹಬ್ಬಕ್ಕೆ ಸಾಂಸ್ಕೃತಿಕ ನಗರಿ ಸಜ್ಜಾಗಿದೆ.
ಜ.15ರಂದು ಸೂರ್ಯ ಉತ್ತರಾಯಣ ಪ್ರವೇಶ (ಮಕರ ರಾಶಿ ಪ್ರವೇಶ) ಮಾಡಲಿದ್ದು, ಆ ಶುಭ ದಿನವನ್ನು ಮಕರ ಸಂಕ್ರಾಂತಿಯನ್ನಾಗಿ ಆಚರಿಸಲಾಗುತ್ತದೆ. ‘ಎಳ್ಳು-ಬೀರುವುದು’ ಹಾಗೂ ಜಾನುವಾರುಗಳಿಂದ ‘ಕಿಚ್ಚು ಹಾಯಿಸುವುದು’ ಹಬ್ಬದ ವಿಶೇಷ. ಹೀಗಾಗಿ ನಗರದ ವಿವಿಧ ಮಾರುಕಟ್ಟೆಗಳಲ್ಲಿ ಎಳ್ಳು-ಬೆಲ್ಲ ಮಿಶ್ರಣಕ್ಕೆ ಬಳಸುವ ಎಲ್ಲ ವಸ್ತುಗಳ ವ್ಯಾಪಾರ ಮಂಗಳವಾರ ಭರ್ಜರಿಯಾಗಿ ನಡೆಯಿತು. ಇದರೊಂದಿಗೆ ಹೂವು, ಹಣ್ಣು, ಎಳ್ಳು, ಬೆಲ್ಲ, ಕಬ್ಬು ಮತ್ತು ಇತರ ವಸ್ತುಗಳನ್ನು ಜನರು ಖರೀದಿಸಿದರು.
ಹಬ್ಬದ ಅಂಗವಾಗಿ ಹುರಿದ ಕಡಲೇ ಬೀಜವನ್ನು ಕೆಜಿಗೆ 180 ರೂ.ಗೆ ಮಾರಾಟ ಮಾಡಲಾಯಿತು. ಜತೆಗೆ ಕತ್ತರಿಸಿದ ಬೆಲ್ಲ ಕೆಜಿಗೆ 100 ರೂ., ಕತ್ತರಿಸಿದ ಕೊಬ್ಬರಿಗೆ 350 ರೂ., ಹುರಿಗಡಲೆ 120 ರೂ., ಸಕ್ಕರೆ ಅಚ್ಚು 120ರಿಂದ 200 ರೂ.ವರೆಗೂ ದರ ನಿಗದಿ ಮಾಡಲಾ ಗಿತ್ತು.
ದೇವರಾಜ ಮಾರುಕಟ್ಟೆ, ಅಗ್ರಹಾರ, ಅಶೋಕ ವೃತ್ತ, ಕುವೆಂಪುನಗರ, ವಿವೇಕಾನಂದನಗರ, ಒಂಟಿಕೊಪ್ಪಲು ಸೇರಿದಂತೆ ವಿವಿಧ ಬಡಾವಣೆಗಳ ಪ್ರಮುಖ ವೃತ್ತಗಳಲ್ಲಿ ರೈತರು ಕಬ್ಬು ಮಾರಾಟ ಮಾಡುತ್ತಿದ್ದ ದೃಶ್ಯ ಕಂಡು ಬಂತು. ಒಂದು ಜಲ್ಲೆ ಕಬ್ಬು 20ರಿಂದ 30 ರೂ.ವರೆಗೂ ಮಾರಾಟವಾಯಿತು.
ಸೇವಂತಿಗೆ ಹೂವಿನ ದರ ದುಬಾರಿಯಾಗಿತ್ತು. ಮಧ್ಯವರ್ತಿಗಳ ಗೋಜಿಗೆ ಹೋಗದ ಕೆಲ ರೈತರು ತಾವೇ ಖುದ್ದು ಮಾರಾಟ ಮಾಡಿದರು. ಮಾರೊಂದಕ್ಕೆ 40ರಿಂದ 60 ರೂ. ಪಡೆಯುವ ಮೂಲಕ ಲಾಭ ಮಾಡಿಕೊಂಡರು. ಉಳಿದಂತೆ ಮಾರುಕಟ್ಟೆಯಲ್ಲಿ ಮಲ್ಲಿಗೆ, ಕಾಕಡ, ಕನಕಾಂಬರ, ಸುಗಂಧರಾಜ, ಗುಲಾಬಿ ಹೂ ಹೆಚ್ಚು ಬಿಕರಿಯಾದವು.
ಹಿಂದಿನ ವರ್ಷದಲ್ಲಿ 25ರಿಂದ 30 ರೂ.ಗೆ ದೊರಕುತ್ತಿದ್ದ ಅವರೇಕಾಯಿ ಈ ಸಲ 40 ರಿಂದ 50 ರೂ.ಗೆ ತಲುಪಿದೆ. ಒಂದು ಕೆಜಿ ಬೀನ್ಸ್, ನುಗ್ಗೆ ದರ 40ರಿಂದ 60 ರೂ. ಇತ್ತು. ಇವುಗಳನ್ನು ಬಿಟ್ಟರೆ ಇತರ ತರಕಾರಿಗಳ ಬೆಲೆ ಹೆಚ್ಚಳವಾಗಿರಲಿಲ್ಲ.
ಮಾರುಕಟ್ಟೆಯಲ್ಲಿ ಕೆಜಿ ಕ್ಯಾರೆಟ್, ಬೀಟ್‌ರೋಟ್, ಹಸಿಬಟಾಣಿ, ಬದನೆಕಾಯಿ 25ರಿಂದ 40 ರೂ., ಬೆಂಡೆಕಾಯಿ 25 ರೂ., ಪಡುವಲ, ಸೋರೆ, ಹೀರೇಕಾಯಿ 20ರಿಂದ 25 ರೂ. ಇದ್ದರೆ, ಉಳಿದಂತೆ ಸೌತೇಕಾಯಿ, ಹಸಿಮೆಣಸಿನಕಾಯಿ, ನಿಂಬೆ ಹಣ್ಣು ಹಾಗೂ ಇತರ ತರಕಾರಿಗಳ ಬೆಲೆ ಯಥಾಸ್ಥಿತಿಯಲ್ಲಿತ್ತು.
ಈ ಹಿಂದೆ ಕಾಗದದ ಪೇಪರ್ ಅಥವಾ ಪ್ಲಾಸ್ಟಿಕ್ ಕವರ್‌ಗಳಲ್ಲಿ ಎಳ್ಳು ಬೆಲ್ಲವನ್ನು ನೀಡಲಾಗುತ್ತಿತ್ತು. ಆದರೀಗ ಅವುಗಳ ಜಾಗವನ್ನು ಪ್ಲಾಸ್ಟಿಕ್ ಡಬ್ಬಿಗಳು ಆವರಿಸಿಕೊಂಡಿವೆ. ದೇವರಾಜ ಮಾರುಕಟ್ಟೆಯ ಶಿವರಾಮಪೇಟೆ, ಅಗ್ರಹಾರ, ವಿದ್ಯಾರಣ್ಯಪುರಂ ಹಾಗೂ ಇತರ ಕಡೆಗಳಲ್ಲಿ ಪ್ಲಾಸ್ಟಿಕ್ ಡಬ್ಬಿಗಳ ಮಾರಾಟ ಬಿರುಸಿನಿಂದ ಸಾಗಿತ್ತು.