

ಮೈಸೂರು: ಕೇಂದ್ರ ವಸತಿ ಮತ್ತು ನಗರ ವ್ಯವಹಾರಗಳ ಸಚಿವಾಲಯ ನಡೆಸಿದ 2024-25ನೇ ಸಾಲಿನ ಸ್ವಚ್ಛ ಸರ್ವೇಕ್ಷಣೆಯಲ್ಲಿ ಸಾಂಸ್ಕೃತಿಕ ನಗರಿ ಮೈಸೂರು ‘ಸೂಪರ್ ಸ್ವಚ್ಛ ಲೀಗ್ ಪ್ರಶಸ್ತಿ’ಯನ್ನು ಮುಡಿಗೇರಿಸಿಕೊಂಡಿದೆ.
ಸ್ವಚ್ಛತೆಯ ವಿಚಾರದಲ್ಲಿ ನಗರ-ನಗರಗಳ ನಡುವೆ ಆರೋಗ್ಯಕರ ಪೈಪೋಟಿ ಏರ್ಪಡಿಸುವ ಉದ್ದೇಶದಿಂದ ಪ್ರಥಮ ಬಾರಿಗೆ ‘ಸೂಪರ್ ಸ್ವಚ್ಛ ಲೀಗ್ ಪ್ರಶಸ್ತಿ’ ಪ್ರಾರಂಭಿಸಲಾಗಿದ್ದು, ಬಿಗ್‌ಸಿಟಿ (3 ರಿಂದ 10 ಲಕ್ಷ ಜನಸಂಖ್ಯೆ) ವಿಭಾಗದಲ್ಲಿ ಮೈಸೂರು ಪ್ರಶಸ್ತಿ ಪಡೆದುಕೊಂಡಿದೆ. ಇದೇ ವಿಭಾಗದಲ್ಲಿ ಚಂಡೀಗಢ, ನೋಯ್ಡ, ಉಜ್ಜೈನ್, ಗಾಂಧಿನಗರ ಮತ್ತು ಗುಂಟೂರ್ ನಗರಗಳು ಪ್ರಶಸ್ತಿ ಪಡೆದುಕೊಂಡಿವೆ.
ಅದೇ ರೀತಿ ಮಿಲಿಯನ್ ಪ್ಲಸ್ ಸಿಟಿ (10 ಲಕ್ಷ ಮೇಲ್ಪಟ್ಟು), ಮೀಡಿಯಂ ಸಿಟಿ (50,000 ರಿಂದ 3 ಲಕ್ಷ), ಸ್ಮಾಲ್ ಸಿಟಿ (20,000 ರಿಂದ 50,000), ವೆರಿ ಸ್ಮಾಲ್ ಸಿಟಿ (20,000 ಒಳಗೆ) ವಿಭಾಗದಲ್ಲೂ ‘ಸೂಪರ್ ಸ್ವಚ್ಛ ಲೀಗ್ ಪ್ರಶಸ್ತಿ’ ನೀಡಲಾಗಿದೆ. ಸ್ವಚ್ಛತೆಯಲ್ಲಿ ಪ್ರತಿ ಬಾರಿ ದೇಶದ ಗಮನ ಸೆಳೆಯುವ ಮಧ್ಯಪ್ರದೇಶದ ಇಂದೋರ್ ನಗರವು ‘ಮಿಲಿಯನ್ ಪ್ಲಸ್ ಸಿಟಿ’ ವಿಭಾಗದಲ್ಲಿ ಪ್ರಶಸ್ತಿ ಪಡೆದುಕೊಂಡಿದೆ. ನವದೆಹಲಿಯಲ್ಲಿ ಗುರುವಾರ ನಡೆದ ಸಮಾರಂಭದಲ್ಲಿ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರಿಂದ ನಗರಾಭಿವೃದ್ಧಿ ಇಲಾಖೆ ಕಾರ್ಯದರ್ಶಿ ದೀಪಾ ಚೋಳನ್, ಮೈಸೂರು ನಗರ ಪಾಲಿಕೆ ಆಯುಕ್ತ ಶೇಖ್ ತನ್ವೀರ್ ಆಸಿಫ್ ಸ್ವೀಕರಿಸಿ ದರು.
ರ‌್ಯಾಂಕಿಂಗ್‌ನಲ್ಲಿ ಬದಲಾವಣೆ: 2024-25ನೇ ಸಾಲಿನಲ್ಲಿ ಸಮಗ್ರ ವಿಭಾಗದ ರ‌್ಯಾಂಕಿಂಗ್ ಕೈ ಬಿಡಲಾಗಿದ್ದು, ವಿವಿಧ ವಿಭಾಗಗಳಲ್ಲಿ ರ‌್ಯಾಂಕಿಂಗ್ ನೀಡಲಾಗಿದೆ. ಆದರೆ, ‘ಸೂಪರ್ ಸ್ವಚ್ಛ ಲೀಗ್ ಪ್ರಶಸ್ತಿ’ ಪಡೆದ ನಗರಗಳನ್ನು ಈ ವಿಭಾಗಗಳ ರ‌್ಯಾಂಕಿಂಗ್ ವ್ಯಾಪ್ತಿಯೊಳಗೆ ಸೇರ್ಪಡೆಗೊಳಿಸಿಲ್ಲ. ಪ್ರಶಸ್ತಿ ಪಡೆಯದ ನಗರಗಳನ್ನು ರ‌್ಯಾಂಕಿಂಗ್ ವ್ಯಾಪ್ತಿಯೊಳಗೆ ತರಲಾಗಿದೆ. ಈ ಬಾರಿ ರ‌್ಯಾಂಕಿಂಗ್‌ಗಿಂತ ‘ಸೂಪರ್ ಸ್ವಚ್ಛ ಲೀಗ್ ಪ್ರಶಸ್ತಿ’ಗೆ ಹೆಚ್ಚಿನ ಮಹತ್ವ ನೀಡಲಾಗಿದೆ.
ಈ ಬಾರಿ ರೆಡ್ಯೂಸ್ (ಕಡಿಮೆ ಮಾಡು), ರೀಯೂಸ್ (ಮರುಬಳಕೆ) ಮತ್ತು ರೀಸೈಕಲ್ (ಪುನರ್ಬಳಕೆ) ಥೀಮ್‌ನಡಿ ಸ್ವಚ್ಛ ಸರ್ವೇಕ್ಷಣೆಯು 12,500 ಅಂಕಗಳಿಗೆ ಸ್ಪರ್ಧೆ ನಡೆದಿತ್ತು. ಕಳೆದ ಬಾರಿ ‘ವೇಸ್ಟ್ ಟು ವೆಲ್ತ್’ ಪರಿಕಲ್ಪನೆಯಲ್ಲಿ ಸರ್ವೇಕ್ಷಣೆ ನಡೆದಿತ್ತು.
ಸ್ವಚ್ಛತೆಯಲ್ಲಿ ಮೈಸೂರಿನ ಸಾಧನೆ: ಸ್ವಚ್ಛ ಸರ್ವೇಕ್ಷಣೆಯಲ್ಲಿ ಮೈಸೂರು 2015, 2016ರಲ್ಲಿ ದೇಶದ ನಂ.1 ಸ್ವಚ್ಛ ನಗರಿಯಾಗಿ ಹೊರ ಹೊಮ್ಮಿತ್ತು. ಆ ನಂತರ 2017ರಲ್ಲಿ 5ನೇ ಸ್ಥಾನ, 2018ರಲ್ಲಿ 8, 2019ರಲ್ಲಿ 3, 2020ರಲ್ಲಿ 5, 2021ರಲ್ಲಿ 11, 2022ರಲ್ಲಿ 8, 2023ರಲ್ಲಿ 27ನೇ ಸ್ಥಾನ ಪಡೆದಿತ್ತು.
ಹಲವು ಪ್ರಶಸ್ತಿಗಳು: ಸ್ವಚ್ಛತಾ ರ‌್ಯಾಂಕಿಂಗ್ ಜತೆಗೆ ಇದುವರೆಗೆ ಹಲವು ಪ್ರಶಸ್ತಿಗಳನ್ನು ಮೈಸೂರು ನಗರ ರಾಷ್ಟ್ರಮಟ್ಟದಲ್ಲಿ ಪಡೆದುಕೊಂಡಿದೆ. 2018, 2020 ಮತ್ತು 2022ರಲ್ಲಿ ಮಧ್ಯಮ ನಗರ ವಿಭಾಗದಲ್ಲಿ (3 ರಿಂದ 10 ಲಕ್ಷ ಜನಸಂಖ್ಯೆ) ದೇಶದ ನಂ.1 ಸ್ವಚ್ಛ ನಗರಿ ಪಟ್ಟವನ್ನು ಪಡೆಯಿತು. 2021ರಲ್ಲಿ ದೇಶದ ನಂ.1 ‘ಸ್ವಯಂ ಸುಸ್ಥಿರ ನಗರ’ (ಸೆಲ್ಫ್ ಸಸ್ಟೈನಬಲ್ ಸಿಟಿ) ಪ್ರಶಸ್ತಿ, ಸಫಾಯಿ ಮಿತ್ರ ಸುರಕ್ಷಾ ಪ್ರಶಸ್ತಿ, ಪೌರಕಾರ್ಮಿಕರ ಸಮವಸ್ತ್ರ ವಿನ್ಯಾಸ ಪ್ರಶಸ್ತಿ, 2019 ರಿಂದ 2024ವರೆಗೆ ನಿರಂತರವಾಗಿ ಫೈವ್‌ಸ್ಟಾರ್ ರ‌್ಯಾಂಕಿಂಗ್‌ನೊಂದಿಗೆ ತ್ಯಾಜ್ಯ ಮುಕ್ತ ನಗರ, ಬಯಲು ಶೌಚಮುಕ್ತ ನಗರ ಪ್ರಶಸ್ತಿ ಪಡೆದಿದೆ.
ಸ್ವಚ್ಛತೆಯಲ್ಲಿ ನಿರಂತರ ಶ್ರೇಷ್ಠತೆಗೆ ಹೆಸರುವಾಸಿಯಾದ ಮೈಸೂರು ನಗರಕ್ಕೆ ಈ ಬಾರಿ ‘ಸೂಪರ್ ಸ್ವಚ್ಛ ಲೀಗ್ ಪ್ರಶಸ್ತಿ’ ದೊರೆತ್ತಿರುವುದು ಸಂತಸ ಉಂಟು ಮಾಡಿದೆ. ಈ ಪ್ರಶಸ್ತಿಯೊಂದಿಗೆ ಮೈಸೂರು ದೇಶದ ಸ್ವಚ್ಛ ನಗರಗಳೊಂದಿಗೆ ಸ್ಥಾನ ಪಡೆದಿದೆ. ಇದು ನಗರದ ನಾಗರಿಕರು ಹೆಮ್ಮೆ ಪಡುವ ವಿಚಾರ. ಪ್ರಶಸ್ತಿ ದೊರೆಯಲು ಸ್ವಚ್ಛತಾ ಸಿಬ್ಬಂದಿ, ನಾಗರಿಕರ ಸಮರ್ಪಿತ ಪ್ರಯತ್ನ ಕಾರಣ.
ಶೇಖ್ ತನ್ವೀರ್ ಆಸಿಫ್, ಆಯುಕ್ತ, ಮೈಸೂರು ನಗರ ಪಾಲಿಕೆ
ಈ ಬಾರಿ ಸ್ವಚ್ಛತೆಯ ವಿಚಾರದಲ್ಲಿ ಹೆಚ್ಚಿನ ಒತ್ತು ನೀಡಿದ ಪರಿಣಾಮ ನಮ್ಮ ನಗರಕ್ಕೆ ‘ಸೂಪರ್ ಸ್ವಚ್ಛ ಲೀಗ್ ಪ್ರಶಸ್ತಿ’ ದೊರೆತ್ತಿದೆ. ಪೌರ ಕಾರ್ಮಿಕರು, ಅಧಿಕಾರಿಗಳ ಪರಿಶ್ರಮ, ನಗರದ ನಾಗರಿಕರು ಹಾಗೂ ಮಾಧ್ಯಮಗಳ ಸಹಕಾರದಿಂದ ನಗರ ಪ್ರಶಸ್ತಿ ಪಡೆಯಲು ಸಾಧ್ಯವಾಯಿತು. ನಗರವನ್ನು ಮತ್ತಷ್ಟು ಸ್ವಚ್ಛ ಹಾಗೂ ಸುಂದರಗೊಳಿಸಲು ಎಲ್ಲ ರೀತಿಯ ಪ್ರಯತ್ನಗಳನ್ನು ಮುಂದಿನ ದಿನಗಳಲ್ಲಿ ಕೈಗೊಳ್ಳಲಾಗುವುದು.
ಡಾ.ವೆಂಕಟೇಶ್, ಮೈಸೂರು ನಗರ ಪಾಲಿಕೆ ಆರೋಗ್ಯಾಧಿಕಾರಿ