

ಚಿಕ್ಕೋಡಿ: ಸಂಸ್ಕೃತಿಯು ಎಲ್ಲರನ್ನು ಸಂಪರ್ಕಿಸುವ ಸೇತುವೆಯಾಗಿದೆ. ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಗುಣಾತ್ಮಕ ಶಿಕ್ಷಣದ ಜತೆಗೆ ಸಾಂಸ್ಕೃತಿಕ ಅರಿವು ಮತ್ತು ಸೂಕ್ಷ್ಮತೆಯ ಮಹತ್ವ ಕಲಿಸಿಕೊಡುವುದು ಅವಶ್ಯಕವಾಗಿದೆ ಎಂದು ಪ್ರಾಧ್ಯಾಪಕ ಡಾ.ಎನ್.ಎಸ್. ಶಿಂಧೆ ಹೇಳಿದರು. ಪಟ್ಟಣದ ಚೌಸನ್ ಶಿಕ್ಷಣ ಮಹಾವಿದ್ಯಾಲಯದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಸಾಂಸ್ಕೃತಿಕ ಚಟುವಟಿಕೆಗಳ ಶೈಕ್ಷಣಿಕ ಜಾಗೃತಿ ಕಾರ್ಯಾಗಾರದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು. ವಿದ್ಯಾರ್ಥಿಗಳು ಶಿಕ್ಷಣದ ಜತೆಗೆ ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ಭಾಗವಹಿಸುವ ಮೂಲಕ ಆತ್ಮವಿಶ್ವಾಸ, ನಾಯಕತ್ವ ಗುಣಗಳನ್ನು ಬೆಳೆಸಿಕೊಂಡು ಉತ್ತಮ ವ್ಯಕ್ತಿತ್ವ ರೂಪಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು. ಡಾ. ಕನಕಾಚಲ ಕನಕಗಿರಿ ಮಾತನಾಡಿ, ಇಂದಿನ ಶೈಕ್ಷಣಿಕ ವ್ಯವಸ್ಥೆಯಲ್ಲಿ ನಮ್ಮ ಸುಂದರ ಬದುಕಿಗೆ ಕೇವಲ ಅಂಕಗಳು ಮಾನ ದಂಡವಲ್ಲ. ವಿದ್ಯಾರ್ಥಿಗಳಿಗೆ ಹಲವು ಕೌಶಲ ಬೇಕು. ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ಪಾಲ್ಗೊಳ್ಳುವ ಮೂಲಕ ಅಂತರ್ ಶಕ್ತಿ ಬೆಳೆಸಿಕೊಳ್ಳಬೇಕು ಎಂದರು. ಕಾಲೇಜಿನ ಪ್ರಶಿಕ್ಷಣಾರ್ಥಿಗಳು ಶೈಕ್ಷಣಿಕ ಅರಿವು ಮೂಡಿಸುವ ಕಿರು ನಾಟಕ ಹಾಗೂ ಜನಪದ ಸಂಸ್ಕೃತಿ ಬಿಂಬಿಸುವ ಜನಪದ ಗೀತೆಗಳನ್ನು ಪ್ರದರ್ಶಿಸಿದರು. ಪ್ರಾಚಾರ್ಯ ಡಾ.ತನುಜಾ ಕುಮಾರ್ ಅಧ್ಯಕ್ಷತೆ ವಹಿಸಿದ್ದರು. ಜ್ಯೋತಿ ಮಜ್ಜಿಗೆ ಸ್ವಾಗತಿಸಿದರು. ಲಕ್ಷ್ಮೀ ಸಾವಂತ, ಶೈಲಾ ನಿರೂಪಿಸಿದರು. ಪ್ರಾಧ್ಯಾಪಕಿ ಸುಜಾತ ಚಂದ್ಗಡೆ ವಂದಿಸಿದರು.