ಉನ್ನತ ಶಿಕ್ಷಣ ಪಡೆದು ಉದ್ಯಮಿಗಳಾಗಿ: ಪ್ರಾಂಶುಪಾಲ ಡಾ.ಎಂ.ಮಂಜುನಾಥ್ ಕಿವಿಮಾತು

Cultural and sports activity closing ceremony Mandya
Published on

ಮಂಡ್ಯ: ಕಾಲೇಜು ವಿದ್ಯಾರ್ಥಿಗಳು ಉನ್ನತ ಶಿಕ್ಷಣ ಪಡೆದು ಉದ್ಯೋಸ್ಥರಾಗಿ ಅಥವಾ ಉದ್ಯಮಿಗಳಾಗಿ ಎಂದು ಪಿಇಎಸ್ ವಿಜ್ಞಾನ, ಕಲಾ ಮತ್ತು ವಾಣಿಜ್ಯ ಕಾಲೇಜಿನ ಪ್ರಾಂಶುಪಾಲ ಡಾ.ಎಂ.ಮಂಜುನಾಥ್ ಹೇಳಿದರು.

ನಗರದ ಪಿಇಎಸ್ ಕಾಲೇಜಿನ ಸ್ವಾಮಿ ವಿವೇಕಾನಂದ ರಂಗಮಂದಿರದಲ್ಲಿ ಜನತಾ ಶಿಕ್ಷಣ ಟ್ರಸ್ಟ್‌ನ ಪಿಇಎಸ್ ವಿಜ್ಞಾನ, ಕಲಾ ಮತ್ತು ವಾಣಿಜ್ಯ ಕಾಲೇಜು ವತಿಯಿಂದ ಆಯೋಜಿಸಿದ್ದ ಪಿಇಎಸ್ ಉತ್ಸವ ಮತ್ತು ಪ್ರತಿಭಾ ಪುರಸ್ಕಾರ-ಪಾರಂಪರಿಕ ದಿನೋತ್ಸವ ಹಾಗೂ ಸಾಂಸ್ಕೃತಿಕ ಮತ್ತು ಕೀಡಾ ಚಟುವಟಿಕೆ ಸಮಾರೋಪ ಸಮಾರಂಭದಲ್ಲಿ ಮಾತನಾಡಿದ ಅವರು, ಪದವಿ ಪಡೆದ ವಿದ್ಯಾರ್ಥಿಗಳು ಪಾಲಕರು ಮತ್ತು ಅಧ್ಯಾಪಕರ ಮಾರ್ಗದರ್ಶನ, ಹಿತವಚನಗಳ ಮೇಲೆ ಉನ್ನತ ಶೈಕ್ಷಣಿಕ ವೃತ್ತಿ ಕೋರ್ಸ್‌ಗಳನ್ನು ಆರಿಸಿಕೊಳ್ಳಿ. ಮಾತ್ರವಲ್ಲದೆ ಸ್ಪರ್ಧಾತ್ಮಕ ಪರೀಕ್ಷೆಗಳ ತರಬೇತಿ ಪಡೆದು ಉತ್ತಮ ಅಧಿಕಾರಿ ಅಥವಾ ಉದ್ಯಮಿಗಳಾಗಬೇಕು ಎಂದರು.

ಕಾಲೇಜಿನ ವಿದ್ಯಾರ್ಥಿಗಳು ಕ್ರೀಡೆ, ಸಾಂಸ್ಕೃತಿಕ ಚಟುವಟಿಕೆ, ಓದುವುದಲ್ಲಿ ಮುಂದಿದ್ದೀರಿ. ಕಾಲೇಜಿಗೆ ಕೀರ್ತಿ, ಹೆತ್ತವರಿಗೆ ಖುಷಿಯಾಗುವ ರೀತಿ ಅಂಕಗಳನ್ನು ಪಡೆದು ಸಾಧಿಸುತ್ತಿದ್ದೀರಿ. ಇದೇ ರೀತಿ ಮುಂದುವರಿಯಲಿ ಎಂದು ಹೇಳಿದರು.

ವಿದ್ಯಾರ್ಥಿ ಕ್ಷೇಮಪಾಲನ ಅಧಿಕಾರಿ ಪ್ರೊ. ವೀರೇಶ್ ಮಾತನಾಡಿ, ವಿದ್ಯಾರ್ಥಿ ಜೀವನದಲ್ಲೇ ಸೇವಾ ಚಟುವಟಿಕೆಯತ್ತ ಆಸಕ್ತಿ ಬೆಳೆಸಿಕೊಳ್ಳಿ. ಶಾಲಾ, ಕಾಲೇಜು ಹಂತದಲ್ಲಿರುವ ರೋವರ್ಸ್‌, ಎನ್‌ಸಿಸಿ, ಎನ್‌ಎಸ್‌ಎಸ್, ಯುವ ರೆಡ್‌ಕ್ರಾಸ್‌ನಂತಹ ಸೇವಾ ತಂಡಗಳಲ್ಲಿ ಗುರುತಿಸಿಕೊಳ್ಳಿ. ಇದರಿಂದ ನಾಯಕತ್ವ ಗುಣ ಬೆಳೆಯುತ್ತದೆ ಎಂದು ಕಿವಿಮಾತು ಹೇಳಿದರು.

ಟ್ರಸ್ಟ್‌ನ ಧರ್ಮದರ್ಶಿಗಳಾದ ಶಿವಣ್ಣ, ಮುದ್ದೇಗೌಡ, ಸಾಂಸ್ಕೃತಿಕ ಸಮಿತಿ ಸಂಚಾಲಕಿ ಡಾ.ವಿ.ಸವಿತಾ, ಕ್ರೀಡಾ ಸಮಿತಿ ಸಂಚಾಲಕ ಡಾ.ಆರ್.ರಮೇಶ್, ಡಾ.ಜಿ.ವಿ.ನರಸಿಂಹನ್, ಪ್ರೊ.ಚಂದ್ರಶೇಖರ್, ಪ್ರೊ.ನಂದೀಶ್ ಇತರರಿದ್ದರು. ಇದೇ ಸಂದರ್ಭದಲ್ಲಿ ಸಾಂಸ್ಕೃತಿಕ, ಕ್ರೀಡಾ ಸ್ಪರ್ಧೆಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಗಣ್ಯರು ಬಹುಮಾನ ವಿತರಿಸಿದರು. ಬಳಿಕ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net