ಸಾಂಸ್ಕೃತಿಕ ಚಟುವಟಿಕೆ ತರಲಿದೆ ಉತ್ಸಾಹ

HLK MALLADIHALLI 12
Published on

ಹೊಳಲ್ಕೆರೆ: ಸಾಧನೆ ಜತೆಗೆ ಸದಾ ಉತ್ಸಾಹದಿಂದ ಇರಲಿ ಸಾಂಸ್ಕೃತಿಕ ಚಟುವಟಿಕೆಗಳು ಅಗತ್ಯ ಎಂದು ಮಾಜಿ ಶಾಸಕ, ಮಲ್ಲಾಡಳಿಹಳ್ಳಿ ಅನಾಥ ಸೇವಾಶ್ರಮದ ಕಾರ್ಯದರ್ಶಿ ಎಸ್.ಕೆ.ಬಸವರಾಜನ್ ಹೇಳಿದರು.

ಮಲ್ಲಾಡಿಹಳ್ಳಿಯಲ್ಲಿ ಶನಿವಾರ ಅನಾಥಸೇವಾಶ್ರಮದ ಪ್ರೌಢಶಾಲಾ ವಿಭಾಗದ ವಿದ್ಯಾರ್ಥಿ ಸಾಂಸ್ಕೃತಿಕ ಸಂಘದ ಉದ್ಘಾಟನಾ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿ, ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ಪಾಲ್ಗೊಳ್ಳುವುದರಿಂದ ಭವಿಷ್ಯದಲ್ಲಿ ಉತ್ತಮ ವ್ಯಕ್ತಿಯಾಗಲು ಸಾಧ್ಯವಾಗುತ್ತದೆ ಎಂದರು.

ವಿದ್ಯಾರ್ಥಿ ಹಂತದಲ್ಲಿ ಪಠ್ಯ ಮತ್ತು ಪಠ್ಯೇತರ ಚಟುವಟಿಕೆಗಳಿಗೆ ಹೆಚ್ಚು ಮಹತ್ವ ನೀಡಬೇಕು. ಇದರಿಂದ ಆರೋಗ್ಯ, ಜ್ಞಾನದಲ್ಲಿ ಉತ್ತುಂಗ ತಲುಪಿ, ಉನ್ನತ ಸ್ಥಾನದ ಜತೆಗೆ ನೆಮ್ಮದಿ ಗಳಿಸಬಹುದು ಎಂದು ಹೇಳಿದರು.

ಆಶ್ರಮದ ವ್ಯವಸ್ಥಾಪಕ ಡಿ.ಕೆ.ಚಂದ್ರಪ್ಪ ಮಾತನಾಡಿ, ವಿದ್ಯಾರ್ಥಿಗಳಿಗೆ ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ಪಾಲ್ಗೊಳ್ಳುವ ಎಲ್ಲ ಅವಕಾಶಗಳು ಪ್ರೌಢಹಂತದಲ್ಲಿ ದೊರೆಯುತ್ತವೆ. ಅದಕ್ಕೆ ಪೂರಕ ವಾತಾವರಣ ಕಲ್ಪಿಸುವುದು ವಿದ್ಯಾಸಂಸ್ಥೆಗಳ ಹೊಣೆಗಾರಿಕೆ ಎಂದರು.

ಋಷಿ ಸಂಸ್ಕೃತಿ ಶಾಲೆ ಸಂಸ್ಥಾಪಕ ಶ್ರೀ ತಿಪ್ಪಾರೆಡ್ಡಿ ಗುರೂಜಿ ಮಾತನಾಡಿ, ಪಠ್ಯ ಹಾಗೂ ಪಠ್ಯೇತರ ಚಟುವಟಿಕೆಗಳು ದೈಹಿಕ-ಮಾನಸಿಕ ಬೆಳವಣಿಗೆಗೆ ಸಹಕಾರಿ ಎಂಝದು ಹೇಳಿದರು.

ಎಸ್ಸೆಸ್ಸೆಲ್ಸಿಯಲ್ಲಿ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು. ಉಪಪ್ರಾಚಾರ್ಯ ಆರ್.ಬಿ.ಹಾರೋಮಠ್ ಅಧ್ಯಕ್ಷತೆ ವಹಿಸಿದ್ದರು. ಯೋಗ ತರಬೇತುದಾರ ಸಂತೋಷ್ ಕುಮಾರ್ ಉಪಸ್ಥಿತರಿದ್ದರು.

ವಿಜ್ಞಾನ ಶಿಕ್ಷಕ ದಕ್ಷಿಣಾಮೂರ್ತಿ ಸ್ವಾಗತಿಸಿದರು. ಹಿಂದಿ ಶಿಕ್ಷಕ ಪಾಲಾಕ್ಷಿ ವರದಿ ವಾಚನ ಮಾಡಿದರು. ಕನ್ನಡ ಭಾಷಾ ಶಿಕ್ಷಕ ಎಂ.ಓ.ಸ್ವಾಮಿ ನಿರೂಪಿಸಿದರು. ವಿಜ್ಞಾನ ಶಿಕ್ಷಕ ಹರೀಶ್ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net