ಕ್ರೀಯಾಶೀಲ ಮತ್ತು ಸೃಜನಶೀಲತೆಗೆ ಸಾಂಸ್ಕೃತಿಕ ಚಟುವಟಿಕೆ ಸಹಕಾರಿ: ಕುಶ್ವಂತ್ ಕೋಳಿಬೈಲು

10adarshkdga7
Published on

ಮಡಿಕೇರಿ: ಶಿಕ್ಷಣದೊಂದಿಗೆ ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವುದರಿಂದ ವಿದ್ಯಾರ್ಥಿಗಳ ಕ್ರೀಯಾಶೀಲ ಮತ್ತು ಸೃಜನಶೀಲ ಚಟುವಟಿಕೆಗೆ ಸಹಕಾರಿಯಾಗಲಿದೆ ಎಂದು ಕೊಡಗು ವೈದ್ಯಕೀಯ ವಿಜ್ಞಾನ ಸಂಸ್ಥೆಯ ಮಕ್ಕಳ ತಜ್ಞ ಡಾ.ಮೇಜರ್ ಕುಶ್ವಂತ್ ಕೋಳಿಬೈಲುವರು ಹೇಳಿದರು.


ನಗರದ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಕೆ.ಎಂ.ಕಾರ್ಯಪ್ಪ ಸಭಾಂಗಣದಲ್ಲಿ ಗುರುವಾರ ಜಿಲ್ಲಾ ಮಟ್ಟದ ಸಾಂಸ್ಕೃತಿಕ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.


ಕಲೆ, ಕ್ರೀಡೆ, ಸಾಹಿತ್ಯ ಸೇರಿದಂತೆ ವಿವಿಧ ಸಾಂಸ್ಕೃತಿಕ ಚಟುವಟಿಕೆಯಲ್ಲಿ ಮಕ್ಕಳನ್ನು ಸಕ್ರಿಯವಾಗಿ ತೊಡಗಿಸಿದರೆ, ಬಹುಮುಖಿಯಲ್ಲಿ ವ್ಯಕ್ತಿತ್ವ ವಿಕಸನಗೊಳ್ಳಲಿದೆ. ಆದ್ದರಿಂದ ವಿದ್ಯಾರ್ಥಿಗಳು ಪಠ್ಯೇತರ ಚಟುವಟಿಕೆಯಲ್ಲಿ ತೊಡಗಿಸುವುದು ಅವಶ್ಯಕವಾಗಿದೆ. ಸೃಜನಾತ್ಮಕ ಕಲಿಕೆಯಿಂದ ಮಕ್ಕಳ ವ್ಯಕ್ತಿತ್ವ ವೃದ್ಧಿಯಾಗುತ್ತದೆ. ವಿದ್ಯಾರ್ಥಿಗಳಿಗೆ ಪಠ್ಯದಂತೆಯೇ ಪಠ್ಯೇತರ ಚಟುವಟಿಕೆಗಳು ಸಹ ಮುಖ್ಯ ಎಂದರು.


ಸಾಂಸ್ಕೃತಿಕ ಚಟುವಟಿಕೆಗಳು ಒಂದು ರೀತಿ ಸಂವಹನ ಇದ್ದಂತೆ, ಸಂಪರ್ಕದಿಂದ ಸ್ನೇಹ ಇದರಿಂದ ಜೀವನದಲ್ಲಿ ವ್ಯಕ್ತಿತ್ವದ ವ್ಯಾಪ್ತಿ ವಿಸ್ತಾರವಾಗುತ್ತದೆ. ಕ್ರೀಡೆ, ಕಲೆ, ಸಂಸ್ಕೃತಿ ಸೇತುವೆ ಇದ್ದ ಹಾಗೆ ಸೇತುವೆ ಸಂಪರ್ಕ ಸಾಧಿಸುತ್ತದೆ. ಸಂಪರ್ಕ ಇಲ್ಲದಿದ್ದರೆ ಅದು ದ್ವೀಪವಾಗಿ ಉಳಿಯುತ್ತದೆ ಎಂದು ಕುಶ್ವಂತ್ ಕೋಳಿಬೈಲು ಹೇಳಿದರು.


ಪದವಿ ಪೂರ್ವ ಶಿಕ್ಷಣ ಇಲಾಖೆ ಉಪ ನಿರ್ದೇಶಕ ಸಿ.ಪುಟ್ಟರಾಜು ಮಾತನಾಡಿ, ೨ ವರ್ಷಗಳ ನಂತರ ಪದವಿ ಪೂರ್ವ ಶಿಕ್ಷಣ ಇಲಾಖೆ ಕಾರ್ಯಕ್ರಮ ಪ್ರಾರಂಭಿಸಿದೆ. ಎಲ್ಲಾ ವಿದ್ಯಾರ್ಥಿಗಳು ಯಶಸ್ವಿಯಾಗಿ ಭಾಗವಹಿಸಬೇಕು. ಸ್ಪರ್ಧೆಯಲ್ಲಿ ವಿಜೇತರಾದವರು ವಿಭಾಗೀಯ ಮತ್ತು ರಾಜ್ಯ ಮಟ್ಟವನ್ನು ಪ್ರತಿನಿಧಿಸಿ ಜಿಲ್ಲೆಗೆ ಒಳ್ಳೆಯ ಫಲಿತಾಂಶ ತರಬೇಕು. ಇದು ಸ್ಪರ್ಧಾತ್ಮಕ ಪರೀಕ್ಷೆಗೆ ಸಹಾಯವಾಗುತ್ತದೆ ಎಂದು ಶುಭ ಹಾರೈಸಿದರು.


ಕಾಲೇಜು ಅಭಿವೃದ್ಧಿ ಸಮಿತಿ ಉಪಾಧ್ಯಕ್ಷ ಧನಂಜಯ ಅಗೋಳಿಕಜೆ ಮಾತನಾಡಿ, ವಿದ್ಯಾರ್ಥಿಗಳು ಸೋಲು ಗೆಲುವುಗಳನ್ನು ಸಮಾನವಾಗಿ ಸ್ವೀಕರಿಸಬೇಕು. ಎಲ್ಲರು ಸ್ಪರ್ಧೆಯಲ್ಲಿ ಭಾಗವಹಿಸಲು ಅವಕಾಶ ಮಾಡಿಕೊಡುತ್ತದೆ. ಸಿಕ್ಕ ಅವಕಾಶಗಳನ್ನು ಸರಿಯಾಗಿ ಬಳಿಸಕೊಳ್ಳಬೇಕು ಎಂದು ಹೇಳಿದರು.


ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಪಿ.ಆರ್.ವಿಜಯ, ಕನ್ನಡ ಉಪನ್ಯಾಸಕಿ ಕೆ.ಬಿ.ಗೌರಿ, ಕೂಡಿಗೆ ಕಾಲೇಜಿನ ಪ್ರಾಂಶುಪಾಲ ಬಸಪ್ಪ, ಉಪನ್ಯಾಸಕರು, ವಿದ್ಯಾರ್ಥಿಗಳು ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net