

ಮೂಡುಬಿದಿರೆ: ನಮ್ಮ ಮನೆಯನ್ನು ಪ್ರೀತಿ ಮಾಡಿದಂತೆ ಶಾಲೆಯನ್ನು ಪ್ರೀತಿ ಮಾಡಬೇಕು. ಶಾಲೆ ವಿದ್ಯಾ ದೇಗುಲ. ಕಲೆಯ ಜತೆ ವಿದ್ಯೆ ಇದ್ದರೆ ಹೆಚ್ಚು ಸಾಧನೆ ಮಾಡಬಹುದು ಎಂದು ನಟ ಅರವಿಂದ ಬೋಳಾರ್ ಹೇಳಿದರು.
ಮೂಡುಬಿದಿರೆ ಕಲ್ಲಬೆಟ್ಟುವಿನಲ್ಲಿರುವ ಎಕ್ಸಲೆಂಟ್ ವಿದ್ಯಾಸಂಸ್ಥೆಯಲ್ಲಿ ವಾರ್ಷಿಕ ಸಾಂಸ್ಕೃತಿಕ ಚಟುವಟಿಕೆಗಳನ್ನು ಉದ್ಘಾಟಿಸಿ ಮಾತನಾಡಿದರು.
ಎಕ್ಸಲೆಂಟ್ ವಿದ್ಯಾಸಂಸ್ಥೆ ಹೆಸರಿಗೆ ತಕ್ಕಂತೆ ಎಕ್ಸಲೆಂಟ್ ಆಗಿದೆ. ವಿದ್ಯಾರ್ಥಿ ಜೀವನ ಬಾಲ್ಯದ ಸುವರ್ಣ ಯುಗ. ಚಿನ್ನಕ್ಕೆ ಬಡಿದಷ್ಟು ಆಕಾರ ಮತ್ತು ಹೆಚ್ಚು ಹೊಳಪು ಬರುತ್ತದೆ ಎಂದರು.
ಎಕ್ಸಲೆಂಟ್ ವಿದ್ಯಾಸಂಸ್ಥೆಗಳ ಅಧ್ಯಕ್ಷ ಯುವರಾಜ್ ಜೈನ್ ಅಧ್ಯಕ್ಷತೆ ವಹಿಸಿ ಮಾತನಾಡಿ, ಜೀವನದಲ್ಲಿ ಪ್ರತಿಭೆಯಿದ್ದರೆ ಏನನ್ನು ಬೇಕಾದರೂ ಸಾಧಿಸಬಹುದು. ಅಂಥ ಕಲೆಗೆ ಮತ್ತು ಕಲಾವಿದರಿಗೆ ಗೌರವ ನೀಡುತ್ತಾ ಎಕ್ಸಲೆಂಟ್ ಶಿಕ್ಷಣ ಸಂಸ್ಥೆ ಬೆಳೆಯುತ್ತಿದೆ. ವಿದ್ಯಾರ್ಥಿಗಳು ಬೇರೆ-ಬೇರೆ ಗುರಿ ಇಟ್ಟುಕೊಳ್ಳುವುದಕ್ಕಿಂತ ಒಂದೇ ಗುರಿಯನ್ನು ಬೇರೆ-ಬೇರೆ ರೀತಿಯಲ್ಲಿ ಸಾಧಿಸಿ ತೋರಿಸಬೇಕು ಎಂದರು.
ಅರವಿಂದ ಬೋಳಾರ್ ಮತ್ತು ಗೋಲ್ಡನ್ ಬುಕ್ ಆಫ್ ರೆಕಾರ್ಡ್ಸ್ ಸಾಧನೆ ಮಾಡಿದ ವಿದ್ವಾನ್ ಯಶವಂತ್ ಎಂ.ಜಿ.ಅವರನ್ನು ಸನ್ಮಾನಿಸಲಾಯಿತು. ಕಾರ್ಯದರ್ಶಿ ರಶ್ಮಿತಾ ಜೈನ್, ಮುಖ್ಯಶಿಕ್ಷಕ ಶಿವಪ್ರಸಾದ್ ಭಟ್, ಸಿಬಿಎಸ್‌ಇ ಶಾಲೆ ಪ್ರಾಂಶುಪಾಲ ಪ್ರಸಾದ್, ಉಪ ಮುಖ್ಯಶಿಕ್ಷಕ ಜಯಶೀಲ ಉಪಸ್ಥಿತರಿದ್ದರು.
ಆಕಾಂಕ್ಷ್ ಜೈನ್ ಸ್ವಾಗತಿಸಿ, ನಕ್ಷತ್ರ ವಂದಿಸಿದರು. ಶಿಕ್ಷಕಿ ಜಯಲಕ್ಷ್ಮೀ, ವಿದ್ಯಾರ್ಥಿನಿ ಅದಿತಿ ನಿರೂಪಿಸಿದರು. ಸಭಾ ಕಾರ್ಯಕ್ರಮದ ನಂತರ ಸಂಪನ್ಮೂಲ ಶಿಕ್ಷಕರು ಹಾಗೂ ಸಂಸ್ಥೆಗೆ ಹೊಸದಾಗಿ ದಾಖಲಾದ ವಿದ್ಯಾರ್ಥಿಗಳ ಸಾಂಸ್ಕೃತಿಕ ಪ್ರತಿಭಾ ಪ್ರದರ್ಶನ ನಡೆಯಿತು.