ರೈತರ ಪ್ರಗತಿಗೆ ಕುಕ್ಕುಟೋದ್ಯಮ ಪೂರಕ: ಡಾ.ಬಿ.ಎಸ್.ನಂಜೇಶ್ ಸಲಹೆ

12
Published on

ಮೈಸೂರು: ಭಾರತದಲ್ಲಿ ಆಹಾರ ಉದ್ಯಮ ಎಂದಿಗೂ ಕುಸಿಯುವುದಿಲ್ಲ. ಹಾಗಾಗಿ ಕೃಷಿ ಜತೆಗೆ ಕುಕ್ಕುಟೋದ್ಯಮ, ಆಹಾರ ಸಂಸ್ಕರಣೆ ಸೇರಿದಂತೆ ಇನ್ನಿತರ ಕ್ಷೇತ್ರದಲ್ಲಿ ರೈತರು ತೊಡಗಿಸಿಕೊಳ್ಳಬೇಕು ಎಂದು ಕರ್ನಾಟಕ ಸಹಕಾರ ಕುಕ್ಕಟ ಮಹಾಮಂಡಳಿ ನಿಯಮಿತ ಸಹಾಯಕ ನಿರ್ದೇಶಕ ಡಾ.ಬಿ.ಎಸ್.ನಂಜೇಶ್ ಸಲಹೆ ನೀಡಿದರು.
ಕರ್ನಾಟಕ ಸಹಕಾರ ಕುಕ್ಕಟ ಮಹಾಮಂಡಳಿ ನಿಯಮಿತ, ಶ್ರೀಗಂಗಾ ಚಾರಿಟಬಲ್ ಟ್ರಸ್ಟ್‌ನಿಂದ ನಗರದಲ್ಲಿ ಆಯೋಜಿಸಿರುವ ಎರಡು ದಿನಗಳ ಕೋಳಿ ಸಾಕಣೆ ಉಚಿತ ತರಬೇತಿ ಕಾರ್ಯಾಗಾರಕ್ಕೆ ಮಂಗಳವಾರ ಚಾಲನೆ ನೀಡಿ ಮಾತನಾಡಿದರು.
ದೇಶದಲ್ಲಿ 140 ಕೋಟಿ ಜನಸಂಖ್ಯೆ ಇದ್ದು, ಆಹಾರ ಉದ್ಯಮ ಎಂದಿಗೂ ಕುಸಿಯುವುದಿಲ್ಲ. ಆದರೆ ರೈತರು ಕೃಷಿಯನ್ನೇ ಪೂರ್ಣ ಪ್ರಮಾಣವಾಗಿ ನೆಚ್ಚಿಕೊಳ್ಳದೆ ಹೈನುಗಾರಿಕೆ, ಕೋಳಿ ಸಾಕಣೆ, ಆಹಾರ ಸಂಸ್ಕರಣೆಯಲ್ಲಿ ತೊಡಗಿಸಿಕೊಳ್ಳುವಂತೆ ತಿಳಿಸಿದರು.
ಇತ್ತೀಚಿನ ದಿನಗಳಲ್ಲಿ ಕೋಳಿ ಸಾಕಣೆಯೂ ಪ್ರಮುಖವಾಗಿದ್ದು, ಕರ್ನಾಟಕ ರಾಜ್ಯ ಮೊಟ್ಟೆ ಉತ್ಪಾದನೆಯಲ್ಲಿ ದೇಶದಲ್ಲಿಯೇ ಮೂರನೇ ಸ್ಥಾನದಲ್ಲಿದೆ. ದೇಶಕ್ಕೆ ಅಗತ್ಯವಿರುವ ಮೊಟ್ಟೆಯು ಕರ್ನಾಟಕ, ಆಂಧ್ರ ಪ್ರದೇಶ, ತಮಿಳುನಾಡು, ತೆಲಂಗಾಣ ಹಾಗೂ ಮಹಾರಾಷ್ಟ್ರದಿಂದಲೇ ಪೂರೈಕೆಯಾಗುತ್ತದೆ. ನಾಟಿ ಕೋಳಿ ವರ್ಷದಲ್ಲಿ ಸುಮಾರು 60 ಮೊಟ್ಟೆಗಳನ್ನಿಟ್ಟರೆ, ಗಿರಿರಾಜ ತಳಿ ಹಾಗೂ ಬಾಯ್ಲರ್ ಕೋಳಿ ವರ್ಷಕ್ಕೆ 300ಕ್ಕೂ ಹೆಚ್ಚು ಮೊಟ್ಟೆಗಳನ್ನಿಡಲಿವೆ ಎಂದು ಮಾಹಿತಿ ನೀಡಿದರು.
ಮಾಂಸ ಉತ್ಪಾದನೆಯಲ್ಲಿ ಕೋಳಿ ಸಾಕಣೆಯಿಂದ ಶೇ.50ರಷ್ಟು ಕೊಡುಗೆ ನೀಡಲಾಗುತ್ತಿದೆ. ಗಿರಿರಾಜ ಹಾಗೂ ಬಾಯ್ಲರ್ ಕೋಳಿಗಳು ಕೇವಲ 40 ದಿನಗಳಲ್ಲಿ 2 ಕೆಜಿಗೂ ಹೆಚ್ಚು ತೂಕದಷ್ಟು ದಪ್ಪವಾಗುತ್ತವೆ. ಇದಕ್ಕೆ ಜೆನೆಟಿಕ್ಸೃ್ ಹಾಗೂ ಗುಣಮಟ್ಟದ ಆಹಾರ ನೀಡುವುದು ಮುಖ್ಯ ಕಾರಣವಾಗಿದೆ. ಕೋಳಿ ಮಾಂಸ ಉತ್ಪಾದನೆಯಲ್ಲಿ ಪಶ್ಚಿಮ ಬಂಗಾಳ ಮೊದಲ ಸ್ಥಾನದಲ್ಲಿದೆ ಎಂದು ಹೇಳಿದರು.
ಕೋಳಿ ಉದ್ಯಮ ಆರಂಭಿಸಲು ಸಾಕಷ್ಟು ಅವಕಾಶಗಳಿದ್ದು, ಸುಮಾರು 10 ಸಾವಿರ ಕೋಳಿಗಳ ಫಾರಂ ಮಾಡಲು ಸುಮಾರು 80 ಲಕ್ಷ ರೂ. ಖರ್ಚಾಗಲಿದೆ. ಅಲ್ಲದೆ ಕೋಳಿ ಸಾಕಣೆಗೆ ರಾಷ್ಟ್ರೀಯ ಜಾನುವಾರು ಯೋಜನೆಯಡಿ ಶೇ.50 ರಷ್ಟು ಸಬ್ಸಿಡಿ ನೀಡಲಾಗುವುದು. 50 ಲಕ್ಷ ರೂ. ಸಾಲ ಪಡೆದರೆ, 25 ಲಕ್ಷ ರೂ. ಸಬ್ಸಿಡಿಯಾಗಿರುತ್ತದೆ. ಲಾಭದಾಯಕವಾದ ಕೋಳಿ ಸಾಕಣೆಯಿಂದ ಉದ್ಯಮಿಗಳಾಗಿ ಆರ್ಥಿಕವಾಗಿ ಸಬಲಾಗಬಹುದು ಎಂದು ಹೇಳಿದರು.
ಸಡಾಕ್ ಮೈಸೂರು ತರಬೇತಿ ಅಧಿಕಾರಿ ಮಿಥುನ್, ಕೃಷಿ ಇಲಾಖೆ ನಿವೃತ್ತ ಸಹಾಯಕ ನಿರ್ದೇಶಕ ಶಿವರಾಮೇಗೌಡ, ಬೆಮೆಲ್ ನಿವೃತ್ತ ಕಾರ್ಯಪಾಲಕ ಇಂಜಿನಿಯರ್ ವಿ.ಶಂಕರ್, ರೈತ ಮುಖಂಡರಾದ ಮರೀಗೌಡ, ವರಕೋಡು ಕೃಷ್ಣೇಗೌಡ, ಕುಣಗಳ್ಳಿ ರಂಗಸ್ವಾಮಿ, ಅಖಿಲ ಭಾರತ ಮಹಿಳಾ ಉದ್ಯಮಿ ಮತ್ತು ತರಬೇತುದಾರರ ಸಂಘದ ಅಧ್ಯಕ್ಷೆ ದಿವ್ಯಶ್ರೀ, ಶ್ರೀಗಂಗಾ ಚಾರಿಟಬಲ್ ಟ್ರಸ್ಟ್ ಅಧ್ಯಕ್ಷ ರಾಜ್ ಕಾಮಯ್ಯ, ನಿರ್ದೇಶಕ ಚಿಕ್ಕಲಿಂಗೇಗೌಡ, ಸಂಚಾಲಕರಾದ ಎಲ್.ರಾಜಣ್ಣ, ಚಾಂದಿನಿ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net