

ದೇವದುರ್ಗ: ತಾಲೂಕಿನ ಕೃಷ್ಣಾ ನದಿ ದಂಡೆ ಗ್ರಾಮಗಳ ರೈತರು ಪ್ರವಾಹದಿಂದಾಗಿ ಸಂಕಷ್ಟಕ್ಕೆ ಸಿಲುಕಿದ್ದಾರೆ. ನದಿಯಲ್ಲಿ ನೀರಿನ ಪ್ರಮಾಣ ದಿನೇ ದಿನೆ ಹೆಚ್ಚಾಗುತ್ತಿರುವುದು ರೈತರಲ್ಲಿ ಕಳವಳಕ್ಕೆ ಕಾರಣವಾಗಿದೆ.
ಇದನ್ನೂ ಓದಿ: ಕೃಷ್ಣಾ ನದಿ ಅಬ್ಬರ; ಕಂಗಾಲಾದ ರೈತರು
ನಾರಾಯಣಪುರದ ಬಸವಸಾಗರ ಜಲಾಶಯದಿಂದ ಕೃಷ್ಣಾ ನದಿಗೆ ಭಾನುವಾರ 3,27,366 ಕ್ಯೂಸೆಕ್ ನೀರು ಹರಿಸಲಾಗಿದೆ.
ಬಸವಸಾಗರ ಜಲಾಶಯಕ್ಕೆ ಭಾನುವಾರ ಬೆಳಗ್ಗೆ 3.2 ಲಕ್ಷ ಕ್ಯೂಸೆಕ್ ಒಳಹರಿವು ಇದ್ದು, 30 ಕ್ರಸ್ಟ್‌ಗೇಟ್‌ಗಳ ಮೂಲಕ ನದಿಗೆ 3,27,366 ಕ್ಯೂಸೆಕ್ ನೀರು ಹರಿಸಲಾಗಿದೆ. ಮುಂಜಾಗ್ರತೆ ಕ್ರಮವಾಗಿ ಜಲಾಶಯದಲ್ಲಿ ನೀರಿನ ಸಂಗ್ರಹ ಪ್ರಮಾಣ ತಗ್ಗಿಸಲಾಗಿದೆ.
ಶನಿವಾರಕ್ಕೆ ಹೋಲಿಸಿದರೆ ಭಾನುವಾರ ನದಿಗೆ ಹೆಚ್ಚುವರಿಯಾಗಿ 27,366 ಕ್ಯೂಸೆಕ್ ಹರಿದು ಬಂದಿದ್ದರಿಂದ ನದಿದಂಡೆಯಲ್ಲಿ ಮತ್ತಷ್ಟು ಜಮೀನಿಗೆ ನೀರುನುಗ್ಗಿದೆ. ಲಿಂಗದಹಳ್ಳಿ, ಬಾಗೂರು, ಅಂಜಳ, ಗೋಪಳಾಪುರ, ಹೂವಿನಹೆಡಗಿ, ಕೊಪ್ಪರ, ಹೇರೂರು ಗ್ರಾಮದಲ್ಲಿ ಹಾನಿಯಾಗಿದೆ.
ಕೊಪ್ಪರದಲ್ಲಿ ಅತಿ ಹೆಚ್ಚು ರೈತರ ಜಮೀನಿಗೆ ನೀರುನುಗ್ಗಿದೆ. ಅಧಿಕಾರಿಗಳು ನದಿದಂಡೆ ಗ್ರಾಮಗಳಿಗೆ ಭೇಟಿ ನೀಡಿ ರೈತರಿಗೆ ಧೈರ್ಯ ತುಂಬವ ಕೆಲಸ ಮಾಡುತ್ತಿದ್ದಾರೆ. ಹೂವಿನಹೆಡಗಿ ಸೇತುವೆ ಸಂಪೂರ್ಣ ಮುಳುಗಡೆಯಾಗಿದ್ದು, ನದಿದಂಡೆ ಮೇಲಿರುವ ಹೋಟೆಲ್, ಮನೆಗಳ ಮುಂದೆ ನೀರುಬಂದಿವೆ.
ಗಡ್ಡೆಗೂಳಿಬಸವೇಶ್ವರ ದೇವಸ್ಥಾನ ಒಂದು ವಾರದಿಂದ ಮುಳುಗಡೆಯಾಗಿದೆ. ವೀರಗೋಟದ ಮೌನಲಿಂಗೇಶ್ವರ ದೇವಸ್ಥಾನದ ಮೆಟ್ಟಿಲು ಹಲವು ದಿನಗಳಿಂದ ನೀರಲ್ಲಿ ಮುಳುಗಿವೆ. ಅಂಜಳ ಗ್ರಾಮದ ಬಸವೇಶ್ವರ ದೇವಸ್ಥಾನ, ಕೊಪ್ಪರದ ಶ್ರೀ ಲಕ್ಷ್ಮೀ ನರಸಿಂಹ ದೇವಸ್ಥಾನ, ಬಸವೇಶ್ವರ ದೇವಸ್ಥಾನ, ಶ್ರೀ ಆಂಜನೇಯ ದೇವಸ್ಥಾನ ಜಲಾವೃತಗೊಂಡಿದ್ದು ಪೂಜಾಕಾರ್ಯ, ಭಕ್ತರ ದರ್ಶನಕ್ಕೆ ಸಮಸ್ಯೆಯಾಗಿದೆ. ಅರಸಿಣಿಗಿ ಅಣೆಮಲ್ಲೇಶ್ವರ ದೇವಸ್ಥಾನ ಹಾಗೂ ಗೂಗಲ್ ಅಲ್ಲಪ್ರಭು ದೇವಸ್ಥಾನದ ಗೋಡೆಗೆ ನೀರು ತಾಗುತ್ತಿದೆ.
ಊರಿಗೆ ಜಲ ಕಂಟಕದ ಆತಂಕ
ಕೃಷ್ಣಾ ನದಿಯಲ್ಲಿ ನೀರಿನ ಪ್ರಮಾಣ 4 ಲಕ್ಷ ಕ್ಯೂಸೆಕ್‌ಗೆ ಹೆಚ್ಚಳವಾದರೆ ಊರಿಗೆ ನುಗ್ಗುವ ಭೀತಿ ತೀರದ ಗ್ರಾಮಸ್ಥರನ್ನು ಕಾಡುತ್ತಿದೆ. 2009, 2019ರಲ್ಲಿ ನೆರೆಬಂದು ಹಲವರು ಮನೆಗಳನ್ನು ಕಳೆದುಕೊಂಡಿದ್ದರು. ನದಿಯಲ್ಲಿ ನೀರಿನ ಪ್ರಮಾಣ ಹೆಚ್ಚಾದರೆ ಬಾಗೂರು, ಗೋಪಳಾಪುರ, ಅಂಜಳ, ಹೂವಿನಹೆಡಗಿ, ಕೊಪ್ಪರ, ಕೋಣಚಪ್ಪಳಿ, ವಗಡಂಬಳಿ, ಬೆಂಡಬೆಂಬಳಿ, ಕರ್ಕಿಹಳ್ಳಿ, ಗೂಗಲ್ ಸೇರಿ ಹಲವು ಗ್ರಾಮಗಳ ಒಳಗೆ ನೀರು ನುಗ್ಗುವ ಆತಂಕವಿದೆ. ಕೃಷ್ಣಾ ನದಿ ತಾಲೂಕಿನಲ್ಲಿ 57 ಕಿಮೀ ಹರಿಯುತ್ತಿದ್ದು, 25 ಹಳ್ಳಿಗಳನ್ನು ತಾಗಿಕೊಂಡಿದೆ. ಇಲ್ಲಿನ ಜನರಿಗೆ ನೆರೆಯ ಕಾರ್ಮೋಡ ದಿನೇ ದಿನೆ ಹೆಚ್ಚಾಗುತ್ತಿದೆ.ಕೃಷ್ಣಾ ನದಿಗೆ 3 ಲಕ್ಷ ಕ್ಯೂಸೆಕ್ ನೀರು ಹರಿಸಿದ್ದರಿಂದ ನದಿದಂಡೆಯ ಬಹುತೇಕ ರೈತರ ಜಮೀನಿಗೆ ನೀರು ನುಗ್ಗಿದೆ. ರೈತರು ಭತ್ತ, ತೊಗರಿ, ಹತ್ತಿ ಬಿತ್ತನೆ ಮಾಡಿದ್ದಾರೆ. ನೆರೆಯಿಂದ ಬಹುತೇಕ ಬೆಳೆಗಳು ಹಾಳಾಗುವ ಜತೆಗೆ ಮಣ್ಣು ಕೂಡ ಕೊಚ್ಚಿಹೋಗಲಿದೆ. ಸರ್ಕಾರದ ಪರಿಹಾರ ರೈತರಿಗೆ ಯಾವುದಕ್ಕೂ ಸಾಲಲ್ಲ.ಮಹಾದೇವಪ್ಪಗೌಡರೈತ, ಕೊಪ್ಪರ
ಬಸವಸಾಗರ ಜಲಾಶಯಕ್ಕೆ ಒಳಹರಿವು 3.20 ಲಕ್ಷ ಕ್ಯೂಸೆಕ್‌ಗೆ ಹೆಚ್ಚಳವಾಗಿದ್ದರಿಂದ ನದಿಗೆ 3.27ಸಾವಿರ ಕ್ಯೂಸೆಕ್ ನೀರು ಹರಿಸಲಾಗಿದೆ. ನದಿದಂಡೆ ಹಲವು ಗ್ರಾಮಗಳ ರೈತರ ಜಮೀನಿಗೆ ನೀರು ನುಗ್ಗಲಿದೆ. ಸದ್ಯಕ್ಕೆ ಊರಿಗೆ ನೀರು ಬರುವ ಆತಂಕವಿಲ್ಲ. 4 ಲಕ್ಷ ಕ್ಯೂಸೆಕ್‌ಗೆ ಹೆಚ್ಚಿಸಿದರೆ ಕೆಲ ಗ್ರಾಮಗಳಿಗೆ ನೀರು ಬರಲಿದೆೆ. ತಾಲೂಕು ಆಡಳಿತ ನೆರೆ ಎದುರಿಸಲು ಸಿದ್ಧತೆ ಕೈಗೊಂಡಿದೆ.ಚನ್ನಮಲ್ಲಪ್ಪ ಘಂಟಿತಹಸೀಲ್ದಾರ್, ದೇವದುರ್ಗ