

ಬೈಲಹೊಂಗಲ: ಮಲಪ್ರಭಾ ಯೋಜನೆಯಡಿ ಸ್ವಂತ ಸಾಗುವಳಿ ಜಮೀನು ಕಳೆದುಕೊಂಡ ಸವದತ್ತಿ ತಾಲೂಕಿನ ರೈತರಿಗೆ ಜಮೀನು ಮರಳಿ ನೀಡಬೇಕೆಂದು ಆಗ್ರಹಿಸಿ ಅಖಂಡ ಕರ್ನಾಟಕ ರಾಜ್ಯ ರೈತ ಸಂ ವತಿಯಿಂದ ನಗರದಲ್ಲಿ ಶುಕ್ರವಾರ ಪ್ರತಿಭಟಿಸಿ, ಉಪವಿಭಾಗಾಧಿಕಾರಿಗೆ ಮನವಿ ಸಲ್ಲಿಸಲಾಯಿತು.
1974ರಲ್ಲಿ ಮಲಪ್ರಭಾ ನದಿಗೆ ಅಡ್ಡಲಾಗಿ ನವಿಲುತೀರ್ಥ ಡ್ಯಾಂ ನಿರ್ಮಾಣ ಉದ್ದೇಶಕ್ಕಾಗಿ ವಿವಿಧ ಹಳ್ಳಿಗಳಲ್ಲಿ ನೀರು ಸಂಗ್ರಹವಾಗುವುದರಿಂದ ಮಲಪ್ರಭಾ ಯೋಜನೆಯಲ್ಲಿ ಸವದತ್ತಿ ತಾಲೂಕಿನ ಗ್ರಾಮಗಳ ರೈತರು ಸ್ವಂತ ಸಾಗುವಳಿ ಜಮೀನು, ಮನೆಗಳನ್ನು ಕಳೆದುಕೊಂಡು ನಿರಾಶ್ರಿತರಾಗಿದ್ದೇವೆ ಎಂದು ಅಳಲು ತೋಡಿಕೊಂಡಿದ್ದಾರೆ.
ಜಮೀನು ಕಳೆದುಕೊಂಡ ರೈತರಿಗೆ ಸರ್ಕಾರ 1,020 ಎಕರೆ ಜಮೀನನ್ನು ಕಂದಾಯ ಇಲಾಖೆಗೆ ಹಸ್ತಾಂತರಿಸಿತ್ತು. ಅದರಲ್ಲಿ ಭೂಸ್ವಾಧಿನಾಧಿಕಾರಿಗಳು ನಿರಾಶ್ರಿತರಿಗೆ 250 ಎಕರೆ ಜಮೀನು ಮಂಜೂರು ಮಾಡಿದ್ದರು. ಬಾಕಿ 770 ಎಕರೆ ಜಮೀನನ್ನು ಹಂಚಿಕೆ ಮಾಡದೆ ಗೋಕಾಕ ಅರಣ್ಯ ಇಲಾಖೆ ಕಬ್ಜಾ ನೀಡಿದ್ದಾರೆ. ಹೀಗಾಗಿ, ರೈತ ಕುಟುಂಬಗಳು 1973ರಲ್ಲಿ ಗುಡ್ಡದಲ್ಲಿನ ಗಿಡಗಂಟಿ ತೆರವುಗೊಳಿಸಿ ಕೃಷಿ ಭೂಮಿಯನ್ನಾಗಿಸಿ ಸಾಗುವಳಿ ಮಾಡುತ್ತ ಬಂದಿದ್ದರು. ಆದರೆ, ಅರಣ್ಯ ಇಲಾಖೆ ಈ ಜಮೀನುಗಳನ್ನು ಒತ್ತಾಯಪೂರ್ವಕವಾಗಿ ಕಸಿದುಕೊಂಡಿದ್ದಾರೆ. ಈ ಕುರಿತು ಪ್ರತಿಭಟನೆ ಮಾಡಿದರೂ ಪ್ರಯೋಜನವಾಗಿಲ್ಲ ಎಂದು ಆರೋಪಿಸಿದರು.
ಈಗಲಾದರೂ ಎಚ್ಚೆತ್ತು ಸರ್ಕಾರ ರೈತರ ಸಾಗುವಳಿ ಜಮೀನು ನೀಡಬೇಕು. ಇಲ್ಲವಾದಲ್ಲಿ ಹೋರಾಟ ತೀವ್ರಗೊಳಿಸಲಾಗುವುದು ಎಂದು ಮನವಿಯಲ್ಲಿ ಎಚ್ಚರಿಸಿದ್ದಾರೆ. ಅಖಂಡ ಕರ್ನಾಟಕ ರಾಜ್ಯ ರೆತ ಸಂ ಜಿಲ್ಲಾಧ್ಯ ಮಲ್ಲಿಕಾರ್ಜುನ ಹುಂಬಿ ನೇತೃತ್ವ ವಹಿಸಿದ್ದರು. ರುದ್ರಪ್ಪ ಆರೇರ, ಬಸವರಾಜ ಡೊಂಗರಗಾಂವಿ, ಬಸವರಾಜ ಹಣ್ಣಿಗೇರಿ, ಮಹೇಶ ಕಾದ್ರೊಳ್ಳಿ, ಶಂಕರ ಸುಣಗಾರ, ಶಂಕರಪ್ಪ ಕಡಕೋಳ, ವಿಠ್ಠಲ ಯಾಸಣ್ಣವರ, ಬಸವರಾಜ ಹಿತ್ತಲಮನಿ, ಅಖಿಲಸಾಬ್ ಮುನವಳ್ಳಿ, ಜಗದೀಶ ಹಡಪದ, ಸಾಬವ್ವ ಹುಡೇದ, ಆನಂದಗೌಡ ಪಾಟೀಲ, ಬಸಯ್ಯ ಹಿರೇಮಠ, ಶಂಕರಯ್ಯ ಕುಲಕರ್ಣಿ, ಶಿವಬಸಪ್ಪ ಮಗ್ನಳ್ಳಿ, ಅಶೋಕ ಮತ್ತಿಕೊಪ್ಪ, ಅಣ್ಣಪ್ಪ ಗುಮ, ಶ್ರೀಶೈಲ ಬೋರಕನವರ, ರಾಜೇಸಾಬ್ ಇಂಚಲ ಇತರರಿದ್ದರು.