

ಕಲಘಟಗಿ: ಮನುಷ್ಯನಲ್ಲಿ ಉತ್ತಮ ಸಂಸ್ಕಾರ ಬೆಳೆಸುವ ಶಕ್ತಿ ಸಾಹಿತ್ಯಕ್ಕಿದ್ದು, ಪ್ರತಿಯೊಬ್ಬರೂ ಪುಸ್ತಕ ಓದುವ ಹವ್ಯಾಸ ಬೆಳೆಸಿಕೊಳ್ಳಬೇಕು ಎಂದು ಕೇಂದ್ರ ಸಾಹಿತ್ಯ ಅಕಾಡೆಮಿ ಸದಸ್ಯ ಡಾ. ಬಸವರಾಜ ಸಾದರ ಹೇಳಿದರು.
ಕೇಂದ್ರ ಸಾಹಿತ್ಯ ಆಕಾಡೆಮಿ, ಕೃಷಿ ಜ್ಯೋತಿ ರೈತ ಉತ್ಪಾದಕರ ಸಂಘ ಹಾಗೂ ಬೇಗೂರು ಗ್ರಾಮ ಪಂಚಾಯಿತಿ ಆಶ್ರಯದಲ್ಲಿ ತಾಲೂಕಿನ ಹುಲ್ಲಂಬಿ ಗ್ರಾಮದ ಶ್ರೀ ಗ್ರಾಮದೇವಿ ದೇವಸ್ಥಾನದಲ್ಲಿ ಸೋಮವಾರ ಆಯೋಜಿಸಿದ್ದ ಗ್ರಾಮಲೋಕ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ನಮ್ಮ ಪರಂಪರೆಯಲ್ಲಿನ ಶರಣರು, ಸಂತರು, ದಾಸರು, ಸಮಾಜ ಸುಧಾರಕರೆಲ್ಲರೂ ಒಂದಲ್ಲ ಒಂದು ರೀತಿಯಲ್ಲಿ ಸಾಹಿತ್ಯ ಆಶ್ರಯಿಸಿ ಮನಕುಲದ ಕಲ್ಯಾಣಕ್ಕೆ ಶ್ರಮಿಸಿದ್ದಾರೆ ಎಂದರು.
ತಂದೆ-ತಾಯಿಯವರ ಹೆಸರಿನಲ್ಲಿ ಹುಲ್ಲಂಬಿ ಸರ್ಕಾರಿ ಶಾಲೆಯ ಏಳನೇ ತರಗತಿಯಲ್ಲಿ ಅತಿ ಹೆಚ್ಚು ಅಂಕ ಗಳಿಸುವ ಇಬ್ಬರು ವಿದ್ಯಾರ್ಥಿಗಳಿಗೆ 25 ಸಾವಿರ ರೂಪಾಯಿಯ ಪ್ರೋತ್ಸಾಹಧನ ನೀಡಲು ಶಾಶ್ವತ ಠೇವಣಿಯನ್ನು ಮುಖ್ಯೋಪಾಧ್ಯಾಯರಿಗೆ ಡಾ. ಬಸವರಾಜ ಸಾದರ ಹಸ್ತಾಂತರಿಸಿದರು.
‘ಕಾವ್ಯದಲ್ಲಿ ಜನಪದ ಸೊಗಸು’ ವಿಷಯ ಕುರಿತಾಗಿ ಡಾ. ಬಸು ಬೇವಿನಗಿಡದ, ‘ಸಾಹಿತ್ಯದಲ್ಲಿ ಮಹಿಳಾ ಸಂವೇದನೆ’ ಮೇಲೆ ನಿರ್ಮಲಾ ಶೆಟ್ಟರ್ ಹಾಗೂ ‘ಸಾಹಿತ್ಯ ಮತ್ತು ವ್ಯಕ್ತಿತ್ವ ವಿಕಸನ’ದ ಮೇಲೆ ಡಾ. ಮಲ್ಲಿಕಾರ್ಜುನ ಗುಮ್ಮಗೋಳ ಉಪನ್ಯಾಸ ನೀಡಿದರು.
ಸಾಹಿತ್ಯ ಅಕಾಡೆಮಿ ಸದಸ್ಯ ಚನ್ನಪ್ಪ ಅಂಗಡಿ, ಬೇಗೂರು ಗ್ರಾಪಂ ಅಧ್ಯಕ್ಷೆ ನಾಗವ್ವ ಅಂಗಡಿ, ಶಿವಪ್ಪ ಮನಗುಂಡಿ, ಯಲ್ಲಪ್ಪ ಸುಳ್ಳದ, ಶಿವಪ್ಪ ಕುಡಬಾಯಿ, ಶಂಕ್ರಪ್ಪ ಸಾದರ, ಗುರುನಾಥ ಹರಿಜನ, ಶಿವಪ್ಪ ನೀರಲಕಟ್ಟೆ, ರಾಚಪ್ಪ ಬಿಸರಳ್ಳಿ, ಸ್ಕೋಪ್ ಸಂಸ್ಥೆಯ ಬಂಡೇರಾವ್ ಪಟವಾರಿ, ಬಸಪ್ಪ ಶೀಗಿಗಟ್ಟಿ, ಸಾವಕ್ಕ ಮನೆಗುಂಡಿ, ನಾಗಲಿಂಗ ಸಾದರ, ಇತರರಿದ್ದರು.