

ಇಳಕಲ್ಲ(ಗ್ರಾ): ನಗರದ ಮೌಲಾನಾ ಆಜಾದ ಆಂಗ್ಲ ಮಾಧ್ಯಮ ಮಾದರಿ ಶಾಲೆಯಲ್ಲಿ ವಿಜ್ಞಾನ, ಕಲೆ ವಸ್ತು ಪ್ರದರ್ಶನ ಯಶಸ್ವಿಯಾಗಿ ಗುರುವಾರ ನಡೆಯಿತು.
ನಗರಸಭೆ ಅಧ್ಯಕ್ಷೆ ಸುಧಾರಾಣಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಮಕ್ಕಳಲ್ಲಿ ವೈಜ್ಞಾನಿಕ ಮನೋಭಾವ ಬೆಳೆಸಿಕೊಳ್ಳಲು ಇಂತಹ ರಚನಾತ್ಮಕ ಕಾರ್ಯಚಟುವಟಿಕೆ ಸಹಕಾರಿಯಾಗಿವೆ ಎಂದರು.
ಎಸ್‌ವಿಎಂ ಬಿಬಿಎ ಕಾಲೇಜಿನ ಉಪನ್ಯಾಸಕ ಬಸವರಾಜ ಕಾಳಗಿ, ಸರ್ಕಾರಿ ಬಾಲಕಿಯರ ಪ್ರೌಢಶಾಲೆ ಶಿಕ್ಷಕಿ ಭಾಗ್ಯಲಕ್ಷ್ಮೀ ಗುರುಂ, ಹಾಗೂ ಎಸ್. ಆರ್. ಕಂಠಿ ಬಿ.ಇಡಿ ಕಾಲೇಜಿನ ಉಪನ್ಯಾಸಕ ಶ್ರೀಕಾಂತ ಚಿತ್ತರಗಿ ಮಾತನಾಡಿದರು.
ಮುಖ್ಯಶಿಕ್ಷಕ ಶ್ರೀಧರ ಜೋಗಿನ ಅಧ್ಯಕ್ಷತೆ ವಹಿಸಿ ಮಾತನಾಡಿ, ಖಾಸಗಿ ಶಾಲೆಗಳಿಗೆ ಕಡಿಮೆ ಇಲ್ಲದಂತೆ ಈ ಶಾಲೆಯ ಶಿಕ್ಷಕರು ಕಡಿಮೆ ಅವಧಿಯಲ್ಲಿ ಮಕ್ಕಳಲ್ಲಿ ಅಡಗಿರುವ ಪ್ರತಿಭೆಗಳನ್ನು ಹೊರತರುವ ಪ್ರಯತ್ನ ಮಾಡಿದ್ದಾರೆ ಎಂದರು.
ಬಾಲಕಿಯರ ವಸತಿ ನಿಲಯ ಪಾಲಕಿ ಎಚ್. ವೈ. ಕಾರಕೂರ, ನಗರಸಭೆ ನಾಮನಿರ್ದೇಶನ ಸದಸ್ಯ ಯಲ್ಲಪ್ಪ ರಾಜಾಪೂರ ಇತರರಿದ್ದರು. ಕಲೆ ಹಾಗೂ ವಿಜ್ಞಾನದಲ್ಲಿ ಹಲವು ರಚನಾತ್ಮಕ ಮಾದರಿ ಪ್ರದರ್ಶಿಸಿದರು.
ಈರಮ್ಮ ಜುಂಜಾ ಹಾಗೂ ಶ್ರೀನಿಧಿ ಪ್ರಾರ್ಥಿಸಿದರು. ಮೆಹೆಬೂಬ ಗಂಜಿಕೋಟಿ ಸ್ವಾಗತಿಸಿದರು. ಅತಾರಸೂಲ ಕರ್ನೂಲ್ ಪರಿಚಯಿಸಿದರು. ಕೆ. ಎಚ್. ಸೋಲಾಪೂರ ಪ್ರಾಸ್ತಾವಿಕವಾಗಿ ಮಾತನಾಡಿದರು. ಅಮರೇಶ ಬಿಜ್ಜಳ ನಿರೂಪಿಸಿದರು. ರಜಾನ ಸೋಲಾಪೂರ ವಂದಿಸಿದರು.