ವೃತ್ತಿಗೆ ಗೌರವ ತರುವ ಪ್ರವೃತ್ತಿ ರೂಢಿಸಿಕೊಳ್ಳಿ

4 vikram 4
Published on

ವಿಜಯವಾಣಿ ಸುದ್ದಿಜಾಲ ಧಾರವಾಡ
ಸಾಮಾಜಿಕ ಜವಾಬ್ದಾರಿ ಹಾಗೂ ವಕೀಲ ವೃತ್ತಿ ಎರಡು ಬೇರೆ ಬೇರೆ ಅಲ್ಲ. ಒಂದಕ್ಕೊಂದು ಪೂರಕವಾಗಿವೆ. ಪ್ರತಿ ಕ್ಷೇತ್ರದಲ್ಲೂ ಕಾನೂನು ಇರುತ್ತದೆ. ಸಾಮಾಜಿಕ ಕ್ಷೇತ್ರಗಳಲ್ಲಿ ವಕೀಲರ ಪಾತ್ರ ಮುಖ್ಯ. ತುರ್ತು ಸಂದರ್ಭಗಳಲ್ಲಿ ವಕೀಲರ ಮಾರ್ಗದರ್ಶನ ಅಗತ್ಯವಾಗಿದೆ ಎಂದು ಹೈಕೋರ್ಟ್ ವಕೀಲರ ಸಂಘದ ಅಧ್ಯಕ್ಷ ವಿ.ಎಂ. ಶೀಲವಂತ ಹೇಳಿದರು.
ನಗರದ ಕರ್ನಾಟಕ ವಿದ್ಯಾವರ್ಧಕ ಸಂಘದಲ್ಲಿ ವಕೀಲರ ದಿನ ಹಿರಿಯ ನ್ಯಾಯವಾದಿ ಎಂ.ಜಿ. ಅಗಡಿ ಸಂಸ್ಮರಣೆ ದತ್ತಿ ನಿಮಿತ್ತ ಶನಿವಾರ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ‘ಕಾನೂನು ವೃತ್ತಿ: ಸಾಮಾಜಿಕ ಜವಾಬ್ದಾರಿ’ ಕುರಿತು ಉಪನ್ಯಾಸ ನೀಡಿದರು.
ಸಿ.ಎಸ್. ಪೊಲೀಸ್‌ಪಾಟೀಲ ಮಾತನಾಡಿ, ರಾಜೇಂದ್ರ ಪ್ರಸಾದರ ಜನ್ಮದಿನವನ್ನು ವಕೀಲರ ದಿನವಾಗಿ ಆಚರಿಸಲಾಗುತ್ತಿದೆ. ವಕೀಲರಿಗೆ ಅಗಾಧ ಜ್ಞಾನವಿರಬೇಕು. ನೊಂದವರ, ಕಕ್ಷಿದಾರರ ಕಣ್ಣೀರು ಒರೆಸುವ ಸಾಮರ್ಥ್ಯ ಇರಬೇಕು. ಸಾಮಾಜಿಕ ಕಳಕಳಿಯೊಂದಿಗೆ ಪಾಪಪ್ರಜ್ಞೆ ಕಾಡುವಂತಿರಬೇಕು. ವೃತ್ತಿಗೆ ಗೌರವ ತಂದುಕೊಡುವ ನಿಟ್ಟಿನಲ್ಲಿ ಸಾಮಾಜಿಕ ಕಾರ್ಯ ಮಾಡುವ ಪ್ರವೃತ್ತಿ ರೂಢಿಸಿಕೊಳ್ಳಬೇಕು ಎಂದರು.
ಅಧ್ಯಕ್ಷತೆ ವಹಿಸಿದ್ದ ಅರುಣ ಚರಂತಿಮಠ ಮಾತನಾಡಿ, 18 ವರ್ಷ ಪಬ್ಲಿಕ್ ಪ್ರಾಸಿಕ್ಯೂಟರ್ ಆಗಿ ಸೇವೆ ಸಲ್ಲಿಸಿದ ಎಂ.ಜಿ. ಅಗಡಿಯವರು ಕಳಂಕರಹಿತ ವ್ಯಕ್ತಿತ್ವ ಹೊಂದಿದವರಾಗಿದ್ದರು. ಧಾರವಾಡ ವಕೀಲರ ಕೀರ್ತಿಯನ್ನು ಮೆರೆದ ವ್ಯಕ್ತಿತ್ವ ಅವರದ್ದಾಗಿತ್ತು.
ಬಾಬಣ್ಣ ಅಗಡಿ, ಚಂದ್ರಕಾಂತ ಬೆಲ್ಲದ, ಶಿವಾನಂದ ಭಾವಿಕಟ್ಟಿ, ಬಿ.ಡಿ. ಪಾಟೀಲ, ಸಿ.ಎಸ್. ಪಾಟೀಲ, ಎಚ್.ಎಸ್. ಮಿಟ್ಟಲಕೋಡ, ಡಾ. ಎನ್.ಆರ್.ಬಾಳಿಕಾಯಿ, ಸುರೇಶ ನಾಯಕ, ಸರಸ್ವತಿ ಪೂಜಾರ, ಪ್ರಭಾವತಿ ದೇಸಾಯಿ, ಎಚ್.ಜಿ. ದೇಸಾಯಿ, ಬಿ.ಎಲ್. ಶಿವಳ್ಳಿ, ಶಾಂತವೀರ ಬೆಟಗೇರಿ, ಇತರರು ಇದ್ದರು.
ಶಂಕರ ಕುಂಬಿ ಸ್ವಾಗತಿಸಿದರು. ಬಸವಪ್ರಭು ಹೊಸಕೇರಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಡಾ. ಜಿನದತ್ತ ಹಡಗಲಿ ನಿರೂಪಿಸಿದರು. ಗುರು ಹಿರೇಮಠ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net