ಪೌರಕಾರ್ಮಿಕರನ್ನು ಗೌರವಿಸುವ ಅಭಿಮಾನ ಬೆಳೆಸಿಕೊಳ್ಳಿ

22blrp3
ಪೌರ ಕಾರ್ಮಿಕರ ದಿನಾಚರಣೆ ಅಂಗವಾಗಿ ಬೇಲೂರಿನಲ್ಲಿ ಶುಕ್ರವಾರ ಆಯೋಜಿಸಿದ್ದ ಕಾರ್ಯಕ್ರಮದ ವೇದಿಕೆಯಲ್ಲಿ ಹಿರಿಯ ಕಾರ್ಮಿಕರನ್ನು ಗಣ್ಯರು ಸನ್ಮಾನಿಸಿದರು. ಬಿ.ಶಿವರಾಂ, ಎಂ.ಆರ್.ವೆಂಕಟೇಶ್, ತೀರ್ಥಕುಮಾರಿ ವೆಂಕಟೇಶ್, ಸಯ್ಯದ್ ತೌಫಿಕ್, ಸೌಮ್ಯಾ, ಬಿ.ಗಿರೀಶ್, ಜಗದೀಶ್, ಫಯಾಜ್, ಅಕ್ರಂಪಾಷ, ರತ್ನಾ, ಶ್ರೀನಿವಾಸ್ ಇತರರಿದ್ದರು.
Published on

ಬೇಲೂರು: ನಗರದ ನಾಗರಿಕರು ಆರೋಗ್ಯವಂತರಾಗಿ ಓಡಾಡಿಕೊಂಡು ಇದ್ದೇವೆ ಎಂದರೆ ಅದಕ್ಕೆ ಪೌಕ ಕಾರ್ಮಿಕರ ಶ್ರಮ ಕಾರಣ. ಆದ್ದರಿಂದ ಪ್ರತಿಯೊಬ್ಬರೂ ಪೌರ ಕಾರ್ಮಿಕರನ್ನು ಗೌರವಿಸುವ ಅಭಿಮಾನ ಬೆಳೆಸಿಕೊಳ್ಳಬೇಕು ಎಂದು ಮಾಜಿ ಸಚಿವ ಬಿ.ಶಿವರಾಂ ಹೇಳಿದರು.

ಪೌರ ಕಾರ್ಮಿಕರ ದಿನಾಚರಣೆ ಅಂಗವಾಗಿ ಪುರಸಭೆಯಿಂದ ಪಟ್ಟಣದ ಡಾ.ಅಂಬೇಡ್ಕರ್ ಭವನದಲ್ಲಿ ಶುಕ್ರವಾರ ಆಯೋಜಿಸಿದ್ದ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಪ್ರತಿಯೊಂದು ನಗರ ಪ್ರದೇಶಗಳಲ್ಲಿ ದಿನನಿತ್ಯ ನಡೆಯುವ ಪೌರ ಕಾರ್ಮಿಕರ ಕಾಯಕದಿಂದ ನಾವೆಲ್ಲ ಉತ್ತಮ ಆರೋಗ್ಯಭರಿತರಾಗಿದ್ದೇವೆ. ಪೌರ ಕಾರ್ಮಿಕರ ಮತ್ತು ಅವರ ಕಾಯಕದ ಬಗ್ಗೆ ದೇಶದ ಪ್ರತಿಯೊಬ್ಬ ವ್ಯಕ್ತಿಯೂ ಅಭಿಮಾನ ಹೆಚ್ಚಿಸಿಕೊಳ್ಳಬೇಕು. ಅಲ್ಲದೆ 2013ರಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ಸಂದರ್ಭ ಮುಖ್ಯಮಂತ್ರಿಯಾಗಿದ್ದ ಸಿದ್ದರಾಮಯ್ಯ ಅವರು ಪೌರ ಕಾರ್ಮಿಕರ ಹಲವಾರು ಬೇಡಿಕೆಗಳನ್ನು ಈಡೇರಿಸಿದ್ದಾರೆ. ಈ ಬಾರಿಯೂ ಚುನಾವಣೆಗೂ ಮುನ್ನ ಪ್ರಣಾಳಿಕೆಯಲ್ಲಿ ಘೋಷಿಸಿದಂತೆ ಹೊರಗುತ್ತಿಗೆ ಪೌರ ಕಾರ್ಮಿಕರನ್ನು ಕಾಯಂ ಮಾಡುತ್ತೇನೆ ಎಂದು ಹೇಳಿದ್ದಾರೆ. ಅದರಂತೆ ನಡೆಯಲಿದ್ದಾರೆ. ಜತೆಗೆ ಪೌರಕಾರ್ಮಿಕರ ಕುಟುಂಬಗಳ ಎಲ್ಲ ಬೇಡಿಕೆಗಳನ್ನು ಈಡೇರಿಸುವ ನಿಟ್ಟಿನಲ್ಲಿ ಜನಪರ ಕೆಲಸ ಮಾಡಲಿದ್ದಾರೆ. ಜತೆಗೆ ಸರ್ಕಾರ ಉಚಿತವಾಗಿ ಪೌರ ಕಾರ್ಮಿಕರ ಮಕ್ಕಳ ವಿದ್ಯಾಭ್ಯಾಸಕ್ಕೆ ಅವಕಾಶ ಕಲ್ಪಿಸಿದ್ದು, ಸದ್ಬಳಕೆ ಮಾಡಿಕೊಳ್ಳಬೇಕು ಎಂದರು.

ಸಫಾಯಿ ಕರ್ಮಚಾರಿ ಆಯೋಗದ ಮಾಜಿ ಅಧ್ಯಕ್ಷ ಎಂ.ಆರ್.ವೆಂಕಟೇಶ್ ಮಾತನಾಡಿ, ಪೌರ ಕಾರ್ಮಿಕರ ಕೆಲಸ ಒಂದು ಜನಾಂಗಕ್ಕೆ ಸೀಮಿತವಾಗಿಲ್ಲ. ರಾಜ್ಯದಲ್ಲಿ ಪೌರಕಾರ್ಮಿಕರು ಸವಲತ್ತು ಪಡೆಯುವಲ್ಲಿ ಹಿಂದುಳಿದಿದ್ದಾರೆ. ನೀವು ಹೋರಾಟ ಮಾಡಿದರೆ ಸಿಗಬೇಕಾದ ಸವಲತ್ತು ಸಿಗುತ್ತದೆ. ನಾನು ಒಬ್ಬ ಪೌರ ಕಾರ್ಮಿಕರ ಮಗನಾಗಿ ಬೆಳೆದು ಇಂದು ನಾನು ಮತ್ತು ನನ್ನ ಪತಿ ಇಂತಹ ವೇದಿಕೆ ಹಂಚಿಕೊಂಡಿದ್ದೇವೆ. ಆದ್ದರಿಂದ ನಿಮ್ಮ ಮಕ್ಕಳನ್ನು ಇದೇ ವೃತ್ತಿಗೆ ತಾರದೆ ತಮ್ಮಲ್ಲಿರುವ ಕೀಳರಿಮೆ ಬಿಟ್ಟು ಅವರನ್ನು ವಿದ್ಯಾವಂತರನ್ನಾಗಿ ಉನ್ನತ ಹುದ್ದೆಯೊಂದಿಗೆ ಸಮಾಜದ ಮುಖ್ಯವಾಹಿನಿಗೆ ತರುವಂತಾಗಬೇಕು ಎಂದರು.

ಅಧ್ಯಕ್ಷತೆ ವಹಿಸಿದ್ದ ಪುರಸಭೆ ಅಧ್ಯಕ್ಷೆ ತೀರ್ಥಕುಮಾರಿ ವೆಂಕಟೇಶ್ ಮಾತನಾಡಿ, ಪೌರ ಕಾರ್ಮಿಕರ ಸೇವೆ ನಿಜಕ್ಕೂ ಶ್ಲಾಘನೀಯವಾಗಿದೆ. ನಾವು ಮನೆ ಮುಂಭಾಗ ಸ್ವಚ್ಛಗೊಳಿಸಲು ಹಿಂದೇಟು ಹಾಕುತ್ತೇವೆ. ಆದರೆ ಪೌರ ಕಾರ್ಮಿಕರು ತಮ್ಮ ಆರೋಗ್ಯವನ್ನು ಲೆಕ್ಕಿಸದೇ ಪಟ್ಟಣವನ್ನು ಸ್ವಚ್ಛಗೊಳಿಸಿ ಜನರ ಆರೋಗ್ಯ ಕಾಪಾಡುತ್ತಾರೆ. ಬೇಲೂರು ಪ್ರವಾಸಿ ತಾಣ. ಇಲ್ಲಿ ಸ್ವಚ್ಛತೆಗೆ ಹೆಚ್ಚಿನ ಆದ್ಯತೆ ನಿಡಬೇಕಿರುವುದರಿಂದ ನಮ್ಮ ಕಾರ್ಮಿಕರ ಶ್ರಮ ಹೇಳತೀರದಾಗಿದೆ. ಅವರೇ ನಮ್ಮ ಆರೋಗ್ಯ ರಕ್ಷಕರು. ಇವರಲ್ಲಿ ಕೆಲವರಿಗೆ ಮನೆ ಇಲ್ಲ. ಕ್ವಾಟ್ರಸ್‌ನಲ್ಲಿರುವವರ ಮನೆಗಳು ಶಿಥಿಲಾವಸ್ಥೆ ತಲುಪಿವೆ. ಆ ಮನೆಗಳನ್ನು ಅವರಿಗೆ ಕೊಡಿಸುವುದಕ್ಕೆ ಕ್ರಮ ಕೈಗೊಳ್ಳಲಾಗುವುದು. ನಿವೇಶನರಹಿತರಿಗೆ ಆದ್ಯತೆ ಮೇಲೆ ನಿವೇಶನ ವಿತರಿಲಾಗುವುದು ಎಂದರು.

ಜಿಪಂ ಮಾಜಿ ಸದಸ್ಯ ಸಯ್ಯದ್ ತೌಫಿಕ್, ಪುರಸಭೆ ಉಪಾಧ್ಯಕ್ಷೆ ಸೌಮ್ಯಾ, ಸದಸ್ಯರಾದ ಬಿ.ಗಿರೀಶ್, ಜಗದೀಶ್, ಫಯಾಜ್. ಅಕ್ರಂಪಾಷ, ರತ್ನಾ, ಶ್ರೀನಿವಾಸ್, ಪ್ರಭಾಕರ್. ಅಶೋಕ್‌ನಾಯಕ್, ಆಶಾರಾಣಿ. ಮೀನಾಕ್ಷಿ, ಮಣಿ, ಆರೋಗ್ಯಾಧಿಕಾರಿ ಜ್ಯೋತಿ, ಲೋಹಿತ್ ಸೇರಿದಂತೆ ಇತರರಿದ್ದರು.
ಪೌರ ಕಾರ್ಮಿಕರ ದಿನಾಚರಣೆ ಅಂಗವಾಗಿ ಕಾರ್ಮಿಕರೆಲ್ಲ ಅಧ್ಯಕ್ಷೆ ತೀರ್ಥಕುಮಾರಿ ವೆಂಕಟೇಶ್ ನೇತೃತ್ವದಲ್ಲಿ ಮೆರವಣಿಗೆ ಮೂಲಕ ಕಾರ್ಯಕ್ರಮದ ಸ್ಥಳಕ್ಕೆ ಆಗಮಿಸಿದರು. ಕ್ರೀಡಾಕೂಟದಲ್ಲಿ ವಿಜೇತರಾದ ಪೌರ ಕಾರ್ಮಿಕರಿಗೆ ಬಹುಮಾನ ವಿತರಿಸಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net