

ವಿಜಯವಾಣಿ ಸುದ್ದಿಜಾಲ ನರೇಗಲ್ಲ
ವಿದ್ಯಾರ್ಥಿಗಳಲ್ಲಿ ನಾಡು, ನುಡಿ, ಸಂಸ್ಕೃತಿ ಹಾಗೂ ಸಾಹಿತ್ಯದ ಬಗ್ಗೆ ಅಭಿರುಚಿ ಮತ್ತು ಚಿಂತನಾಶೀಲ ಮನೋಭಾವ ಬೆಳೆಸಿದರೆ ಕನ್ನಡ ಭಾಷೆಯ ಅಭಿವೃದ್ಧಿಗೆ ಇನ್ನಷ್ಟು ಸಹಕಾರಿಯಾಗಲಿದೆ ಎಂದು ಹಿರಿಯ ಸಾಹಿತಿ ವಿ.ಕೆ. ಪಾಟೀಲ ಹೇಳಿದರು.
ಸಮೀಪದ ಜಕ್ಕಲಿ ಗ್ರಾಮದ ಶ್ರೀ ಅಂದಾನಪ್ಪ ಜ್ಞಾನಪ್ಪ ದೊಡ್ಡಮೇಟಿ ಸರ್ಕಾರಿ ಪ್ರೌಢಶಾಲೆಯಲ್ಲಿ ರೋಣ ಕನ್ನಡ ಸಾಹಿತ್ಯ ಪರಿಷತ್ತು ವತಿಯಿಂದ ಇತ್ತೀಚೆಗೆ ಹಮ್ಮಿಕೊಂಡಿದ್ದ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಕನ್ನಡ ನಾಡು-ನುಡಿ, ಇತಿಹಾಸಕ್ಕೆ ತನ್ನದೇ ಆದ ಮಹತ್ವದ ಇದೆ. ಬೇರೆ ಭಾಷೆಗಳಿಗೆ ಹೋಲಿಸಿದರೆ ಕನ್ನಡವೇ ಶ್ರೇಷ್ಠ. ಕನ್ನಡ ನುಡಿಯೇ ಚೆಂದ. ಕನ್ನಡ ಸಂಸ್ಕೃತಿ ಪರಂಪರೆಯೇ ಅಂದ. ಇಂಥ ಮಹೋನ್ನತ ಇತಿಹಾಸ ಹೊಂದಿರುವ ಕನ್ನಡ ಭಾಷೆಯನ್ನು ಉಳಿಸಬೇಕಾಗಿದೆ. ಕನ್ನಡ ಭಾಷೆಯ ಮೇಲೆ ಎಲ್ಲರಿಗೂ ಅಭಿಮಾನ ಬೆಳೆಯಬೇಕು. ಮಾತೃಭಾಷೆಯನ್ನು ಪ್ರೀತಿಸುವ, ಗೌರವಿಸುವ ಮನೋಭಾವ ನಮಗಷ್ಟೇ ಅಲ್ಲ ಮಕ್ಕಳಿಗೂ ಕಲಿಸಿಕೊಡಬೇಕಾಗಿದೆ ಎಂದರು.
ರಾಜ್ಯ ಪ್ರಶಸ್ತಿ ಪುರಸ್ಕೃತ ಪಿ.ಆರ್. ಹಿರೇಮಠ ಮಾತನಾಡಿ, ಶತಮಾನಗಳ ಇತಿಹಾಸ ಮತ್ತು ಸಾಂಸ್ಕೃತಿಕ ಪರಂಪರೆ ಹೊಂದಿರುವ ಕನ್ನಡ ನಾಡು-ನುಡಿ, ಇತಿಹಾಸದ ಯಾವ ಕಾಲಘಟ್ಟದಲ್ಲಿಯೂ ಒಂದೇ ಪ್ರಭುತ್ವಕ್ಕೆ ಒಳಪಟ್ಟಿರಲಿಲ್ಲ. 22 ಪ್ರಭುತ್ವಗಳಲ್ಲಿ ಹಂಚಿ ಹೋಗಿತ್ತು. ಹೋರಾಟದ ಪ್ರತಿಫಲವಾಗಿ ಹರಿದು-ಹಂಚಿ ಹೋಗಿದ್ದ ಕನ್ನಡ ನಾಡು ಏಕೀಕರಣ ಸಾಧಿಸಿ, 1956ರ ನವೆಂಬರ್ 1ರಂದು ಮೈಸೂರು ರಾಜ್ಯ ಉದಯವಾಯಿತು. ಆನಂತರ ಕನ್ನಡಿಗರ ಮನದಾಳದ ಅಪೇಕ್ಷೆಯಂತೆ 1973ರ ನವೆಂಬರ್ 1ರಂದೇ ಮೈಸೂರು ರಾಜ್ಯಕ್ಕೆ ಕರ್ನಾಟಕ ಎಂದು ನಾಮಕರಣ ಮಾಡಲಾಯಿತು. ಅಂದಿನಿಂದ ರಾಜ್ಯೋತ್ಸವವನ್ನು ಜನತೆ ಸಂಭ್ರಮದಿಂದ ಆಚರಿಸುತ್ತಿದ್ದಾರೆ ಎಂದರು.
ರೋಣ ಕಸಾಪ ಅಧ್ಯಕ್ಷ ರಮಾಕಾಂತ ಕಮತಗಿ ಮಾತನಾಡಿದರು. ಜಾನಪದ ಅಕಾಡೆಮಿ ಸದಸ್ಯ ಕೊತಬಾಳದ ಕಲಾವಿದ ಶಂಕ್ರಣ್ಣ ಸಂಕಣ್ಣವರಿಂದ ಕನ್ನಡ ನಾಡು ನುಡಿ ಗೀತಗಾಯನ ಜರುಗಿತು. ಶಿಕ್ಷಕಿ ಯು.ಎಸ್. ಕಣವಿ ಅಧ್ಯಕ್ಷತೆ ವಹಿಸಿದ್ದರು. ಕಸಾಪ ಗ್ರಾಮ ಘಟಕದ ಅಧ್ಯಕ್ಷ ಪ್ರಕಾಶ ವಾಲಿ. ಸಂಗಮೇಶ ಮೆಣಸಗಿ, ಶಿವಾನಂದ ಗೋಗೇರಿ, ಅಮೃತಾ ಕಬ್ಬೇರ, ಸುನೀತಾ ಪಾಟೀಲ ಉಪಸ್ಥಿತರಿದ್ದರು. ಶಿಕ್ಷಕ ವಿ.ವಿ. ಅಣ್ಣಿಗೇರಿ ಸ್ವಾಗತಿಸಿ, ನಿರೂಪಿಸಿದರು. ನೆಹರೂ ಮನೋಳಿ ವಂದಿಸಿದರು.