ಮಕ್ಕಳಿಗೆ ಸಂಸ್ಕಾರ, ಮಾನವೀಯ ಗುಣಗಳನ್ನು ಬೆಳೆಸಿ

07M.D.R.3
ಮದ್ದೂರು ತಾಲೂಕಿನ ಕೆಸ್ತೂರು ವಲಯದ ಚಿಕ್ಕಂಕನಹಳ್ಳಿಯ ನಂದಿ ಬಸವೇಶ್ವರ ಸಮುದಾಯ ಭವನದಲ್ಲಿ ಆಯೋಜಿಸಿದ್ದ ಸಹಸ್ರ ಬಿಲ್ವಾರ್ಚನೆ ಪೂಜಾ ಕಾರ್ಯಕ್ರಮವನ್ನು ತುಮಕೂರು ತಪೋವನ ಹಿರೇಮಠದ ಶ್ರೀ ಶಿವಾನಂದ ಶಿವಾಚಾರ್ಯ ಸ್ವಾಮೀಜಿ ಉದ್ಘಾಟಿಸಿದರು. ಗೌರಿಶಂಕರ್, ಶಾರದಾ, ಯೋಗೇಶ್, ಲೋಕೇಶ್ ಇದ್ದರು.
Published on

ಮದ್ದೂರು: ಮಕ್ಕಳಿಗಾಗಿ ಆಸ್ತಿ ಮಾಡದೆ ಮಕ್ಕಳನ್ನೇ ಆಸ್ತಿಯನ್ನಾಗಿ ಮಾಡಿ. ಮಕ್ಕಳಿಗೆ ಸಂಸ್ಕಾರ, ಮಾನವೀಯ ಗುಣಗಳನ್ನು ಬೆಳೆಸಬೇಕು ಎಂದು ತುಮಕೂರು ತಪೋವನ ಹಿರೇಮಠದ ಶ್ರೀ ಶಿವಾನಂದ ಶಿವಾಚಾರ್ಯ ಸ್ವಾಮೀಜಿ ಹೇಳಿದರು.

ತಾಲೂಕಿನ ಕೆಸ್ತೂರು ವಲಯದ ಚಿಕ್ಕಂಕನಹಳ್ಳಿಯ ನಂದಿ ಬಸವೇಶ್ವರ ಸಮುದಾಯ ಭವನದಲ್ಲಿ ಸೋಮವಾರ ಆಯೋಜಿಸಿದ್ದ ಸಹಸ್ರ ಬಿಲ್ವಾರ್ಚನೆ ಪೂಜಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಹಳ್ಳಿಗಳಲ್ಲಿ ಧಾರ್ಮಿಕ ಮತ್ತು ಸಾಮಾಜಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಮೂಲಕ ಜಾಗೃತಿ ಮೂಡಿಸುತ್ತಿದೆ. ಡಾ.ವೀರೇಂದ್ರ ಹೆಗ್ಗಡೆ ಅವರ ಧಾರ್ಮಿಕ ಮತ್ತು ಸಾಮಾಜಿಕ ಚಿಂತನೆ ಹಾಗೂ ಹಳ್ಳಿಗಳ ಅಭಿವೃದ್ಧಿಯ ಚಿಂತನೆ ಇಟ್ಟುಕೊಂಡಿರುವುದರಿಂದ ಅವರ ಆಲೋಚನೆಗಳು ಧನಾತ್ಮಕವಾಗಿ ಸಮಾಜದ ಮೇಲೆ ಪರಿಣಾಮ ಬೀರುತ್ತಿವೆ. ಸಮಾಜವನ್ನು ಬದಲಾವಣೆ ಮಾಡುವಲ್ಲಿ ವೀರೇಂದ್ರ ಹೆಗ್ಗಡೆ ಅವರ ತಂಡ ಅವಿರತವಾಗಿ ಶ್ರಮಿಸುತ್ತಿದೆ ಎಂದರು.

ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಜಿಲ್ಲಾ ನಿರ್ದೇಶಕಿ ಚೇತನಾ ಮಾತನಾಡಿ, ಕ್ಷೇತ್ರದ ಹಿನ್ನೆಲೆ, ಗ್ರಾಮಾಭಿವೃದ್ಧಿ ಯೋಜನೆಯಿಂದ ಸಿಗುವ ಸೌಲಭ್ಯಗಳು, ಸ್ವ-ಸಹಾಯ ಸಂಘಗಳ ಬಲವರ್ಧನೆ, ವಿವಿಧ ಧಾರ್ಮಿಕ ಕಾರ್ಯಕ್ರಮ, ಸಮುದಾಯ ಅಭಿವೃದ್ಧಿ ಕಾರ್ಯಕ್ರಮಗಳ ಮಹತ್ವವನ್ನು ತಿಳಿಸಿದರು
ಧರ್ಮಸ್ಥಳ ಯೋಜನೆಯ ಪ್ರಾದೇಶಿಕ ನಿರ್ದೇಶಕ ಜಯರಾಮ ನೆಲ್ಲಿತ್ತಾಯ ಮಾತನಾಡಿ, ಡಾ.ಡಿ.ವೀರೇಂದ್ರ ಹೆಗ್ಗಡೆ ಹಾಗೂ ಡಾ.ವಿ.ಹೇಮಾವತಿ ಹೆಗ್ಗಡೆ ಅವರು ಕೈಗೊಂಡಿರುವ ಸಮಾಜ ಅಭಿವೃದ್ಧಿ ಕಾರ್ಯಕ್ರಮಗಳು, ಸಮಾಜದ ಪರಿವರ್ತನೆಗೆ ಕಾರಣವಾಗಿವೆ. ಸಮಾಜದಲ್ಲಿ ಉತ್ತಮ ಬದುಕು ಕಟ್ಟಿಕೊಂಡು ದುಶ್ಚಟಗಳಿಂದ ಮುಕ್ತರಾಗುವಂತ ಕಾರ್ಯಕ್ರಮಗಳನ್ನು ರೂಪಿಸುತ್ತಿದ್ದಾರೆ. ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಧಾರ್ಮಿಕ, ಶೈಕ್ಷಣಿಕ, ಆರ್ಥಿಕ ಹಾಗೂ ಸಾಮಾಜಿಕ ಪರಿವರ್ತನೆಯಲ್ಲಿ ಮೈಲುಗಲ್ಲನ್ನು ಇಡುತ್ತಿದ್ದು, ಅಸಕ್ತರು, ಬಡವರು, ಹಿಂದುಳಿದವರ ಬೆಳವಣಿಗೆಗಾಗಿ ನಿರಂತರವಾಗಿ ಶ್ರಮಿಸುತ್ತಿದ್ದಾರೆ ಎಂದರು.

ಅರ್ಚಕರಾದ ಗೌರಿಶಂಕರ್, ಹೂತಗೆರೆ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಶಾರದಾ, ತಾಲೂಕಿನ ಯೋಜನಾಧಿಕಾರಿ ಬಿ.ಆರ್. ಯೋಗೀಶ್ ಕನ್ಯಾಡಿ, ಜಿಪಂ ಇಂಜಿನಿಯರ್ ಲೋಕೇಶ್, ವಲಯದ ಮೇಲ್ವಿಚಾರಕ ಚಂದ್ರಶೇಖರ್, ಒಕ್ಕೂಟದ ಅಧ್ಯಕ್ಷರು, ಪದಾಧಿಕಾರಿಗಳು, ವಲಯದ ಎಲ್ಲ ಸೇವಾ ಪ್ರತಿನಿಧಿಗಳು, ಸಂಘದ ಸದಸ್ಯರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net