

ಬಾಳೆಹೊನ್ನೂರು: ಮಕ್ಕಳು ಕೇವಲ ಜ್ಞಾನಾರ್ಜನೆ ಮಾಡಿದರೆ ಸಾಲದು. ಉತ್ತಮ ಸಂಸ್ಕೃತಿ ಬೆಳೆಸಿಕೊಂಡು ಸುಸಂಸ್ಕತ ವ್ಯಕ್ತಿಗಳಾಗಬೇಕು ಎಂದು ಎಂಎಡಿಬಿ ಮಾಜಿ ಅಧ್ಯಕ್ಷೆ ಬಿ.ಸಿ.ಗೀತಾ ಹೇಳಿದರು.
ಸೀಗೋಡು ಜವಾಹರ ನವೋದಯ ವಿದ್ಯಾಲಯದಲ್ಲಿ ನಡೆದ 36ನೇ ವಾರ್ಷಿಕೋತ್ಸವ ಸಮಾರಂಭ ಉದ್ಘಾಟಿಸಿ ಮಾತನಾಡಿ, ಮಕ್ಕಳಲ್ಲಿ ಉತ್ತಮ ವ್ಯಕ್ತಿತ್ವ ಬೆಳೆಸುವ ಜವಾಬ್ದಾರಿ ಪಾಲಕರು ಮತ್ತು ಶಿಕ್ಷಕರ ಮೇಲಿದೆ. ಶಿಕ್ಷಕರು ಉತ್ತಮ ಮಕ್ಕಳನ್ನು ರೂಪಿಸಿದರೆ ದೇಶಕ್ಕೆ ಒಬ್ಬ ಸತ್ಪ್ರಜೆ ದೊರೆಯಲು ಸಾಧ್ಯ. ಈ ನಿಟ್ಟಿನಲ್ಲಿ ಶಿಕ್ಷಕರು ಶ್ರಮಿಸಬೇಕಿದೆ ಎಂದರು.
ನವೋದಯ ವಿದ್ಯಾಲಯ ಸಮಿತಿ ಸದಸ್ಯ ಕೆ.ಟಿ.ವೆಂಕಟೇಶ್ ಮಾತನಾಡಿ, ನವೋದಯ ವಿದ್ಯಾಲಯ ರಾಷ್ಟ್ರದ ಅತ್ಯುತ್ತಮ ವಿದ್ಯಾಲಯಗಳಲ್ಲಿ ಒಂದಾಗಿದೆ. ಇಲ್ಲಿ ಓದುವ ಮಕ್ಕಳು ತುಂಬಾ ಭಾಗ್ಯವಂತರು. ಇಂತಹ ಅವಕಾಶವನ್ನು ಎಲ್ಲರೂ ಸದುಪಯೋಗಪಡಿಸಿಕೊಳ್ಳಬೇಕು ಎಂದರು.
ವಿದ್ಯಾಲಯದ ಪ್ರಭಾರಿ ಪ್ರಾಚಾರ್ಯ ಶಶಿಕುಮಾರ್ ಮಾತನಾಡಿ, ವಿದ್ಯಾಲಯ ಎಲ್ಲ ರಂಗಗಳಲ್ಲಿ ಉತ್ತಮ ಸಾಧನೆ ಮಾಡಿದ್ದು, ಕಳೆದ ಸಾಲಿನಲ್ಲಿ 10ನೇ ತರಗತಿಯ ಸಿಬಿಎಸ್‌ಇ ಬೋರ್ಡ್ ಪರೀಕ್ಷೆಯಲ್ಲಿ ಹೈದರಬಾದ್ ವಲಯದ 77 ನವೋದಯ ವಿದ್ಯಾಲಯಗಳಲ್ಲಿ ತತೀಯ ಸ್ಥಾನ ಪಡೆದುಕೊಂಡಿದೆ ಎಂದರು.
ವಾರ್ಷಿಕೋತ್ಸವದಲ್ಲಿ ಸಂಗೀತ ಶಿಕ್ಷಕಿ ಗಾಯತ್ರಿ ಕೆ ಥೀಟೆ ಅವರ ಮಾರ್ಗದರ್ಶನದಲ್ಲಿ ಪ್ರದರ್ಶಿಸಿದ ಮಕ್ಕಳ ಕೃಷ್ಣ ್ಣ- ಕುಚೇಲ, ದ್ರೋಣ- ಏಕಲವ್ಯ, ಶಿವಾಜಿ-ತಾನಾಜಿ ನೃತ್ಯ ರೂಪಕಗಳು, ಪೂಜಾಕುಣಿತ, ಕಾಶ್ಮೀರಿ ನೃತ್ಯ, ಮೂಕಾಭಿನಯ, ಶಿವ ತಾಂಡವ, ರಾಮಲೀಲಾ, ಕೇರಳದ ತಯ್ಯಮ್, ತುಳುನಾಡು ವೈಭವ ಮತ್ತು ಸಿನಿಮಾ ನೃತ್ಯಗಳು ಪ್ರೇಕ್ಷಕರ ಮನಸೂರೆಗೊಂಡವು.
ವಿದ್ಯಾರ್ಥಿಗಳಾದ ಸಾತ್ವಿಕ್, ನಯನ, ಹಿತೈಷಿ, ಪ್ರೀತಿ, ದೀಪಕ್ ಮತ್ತು ಆದಿತ್ಯ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಿರ್ವಹಿಸಿದರು.