

ಮಡಿಕೇರಿ: ಮಕ್ಕಳು ಓದಿನೊಂದಿಗೆ ಕ್ರೀಯಾಶೀಲಾತ್ಮಕ ಮನೋಭಾವನೆ ಬೆಳಸಿಕೊಳ್ಳಬೇಕು ಎಂದು ಸೋಮವಾರಪೇಟೆ ಶಿಶು ಅಭಿವೃದ್ಧಿ ಯೋಜನಾಧಿಕಾರಿ ಶ್ರೀದೇವಿ ಮುದೋಳ್ ಹೇಳಿದರು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆ, ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ, ಸಾರ್ವಜನಿಕ ಶಿಕ್ಷಣ ಇಲಾಖೆ, ಜಿಲ್ಲಾ ಮಕ್ಕಳ ರಕ್ಷಣಾ ಘಟಕ, ಹಾಗೂ ಜಿಲ್ಲಾ ಮಹಿಳಾ ಸಹಾಯವಾಣಿ ಇವರ ಸಹಯೋಗದೊಂದಿಗೆ ಶಾಲಾ ಮತ್ತು ಕಾಲೇಜುಗಳಲ್ಲಿ ಹೆಣ್ಣು ಮಕ್ಕಳ ಹಕ್ಕುಗಳ ಕುರಿತು ಪೊಲೀಸ್ ಅಧಿಕಾರಿಗಳೊಂದಿಗೆ ಪದವಿ ಪೂರ್ವ ಹಾಗೂ ಪ್ರೌಢಶಾಲಾ ಮಕ್ಕಳಿಗೆ ಗುರುವಾರ ಆಯೋಜಿಸಿದ್ದ ಸಂವಹನ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು.
ಮಕ್ಕಳು ಪಠ್ಯದೊಂದಿಗೆ ಪಠ್ಯೇತರ ಚಟುವಟಿಕೆಯಲ್ಲಿಯೂ ತೊಡಗಿಸಿಕೊಳ್ಳಬೇಕು. ಅಲ್ಲದೇ, ಪ್ರತಿಯೊಂದು ಸಂದರ್ಭದಲ್ಲೂ ಚಟುವಟಿಕೆಯಿಂದ ಕೂಡಿರಬೇಕು. ಓದಿಗೆ ಮಹತ್ವವನ್ನು ಕೊಡಬೇಕು ಎಂದು ತಿಳಿಸಿದರು.
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಮಹಿಳಾ ಸಬಲೀಕರಣ ಘಟಕದ ಜೆಂಡರ್ ಸ್ಪೆಷಲಿಸ್ಟ್ ಎಸ್.ಆರ್.ಕೇಶಿನಿ ಮಾತನಾಡಿ, ಹೆಣ್ಣು ಭ್ರೂಣ ಹತ್ಯೆ, ಗರ್ಭದಲ್ಲಿರುವ ಮಗುವಿಗೆ ಸಾಮಾಜಿಕ ದೋರಣೆ, ಮಕ್ಕಳ ರಕ್ಷಣೆ, ಬಾಲ್ಯವಿವಾಹ, ಗರ್ಭದಲ್ಲಿರುವ ಮಗುವಿನಿಂದ ೧೮ ವರ್ಷ ತುಂಬುವವರೆಗೂ ಮಕ್ಕಳಿಗೆ ಬದುಕುವ ಹಕ್ಕಿದೆ. ಮಕ್ಕಳಿಗೆ ಮಾನಸಿಕ ಮತ್ತು ದೈಹಿಕ ಹಿಂಸೆ ನೀಡುವುದು ಅಪರಾಧ. ಹೆಣ್ಣು ಮಕ್ಕಳು ಶಿಕ್ಷಣದಿಂದ ವಂಚಿತರಾಗಕೂಡದು ಸೂಕ್ತ ರೀತಿಯಲ್ಲಿ ಮಕ್ಕಳು ಮಾಹಿತಿಯನ್ನರಿತು ಸದುಪಯೋಗ ಪಡಿಸಿಕೊಳ್ಳಬೇಕು ಎಂದು ತಿಳಿಸಿದರು.
ಸೋಮವಾರಪೇಟೆ ಪೊಲೀಸ್ ಠಾಣೆ ಪೋಲೀಸ್ ನಿರೀಕ್ಷಕ ಮುದ್ದು ಮಾದೇವ ಮಾತನಾಡಿ, ಮಕ್ಕಳು ಶಿಕ್ಷಣಕ್ಕೆ ಹೆಚ್ಚಿನ ಪ್ರಾಮುಖ್ಯತೆಯನ್ನು ನೀಡಬೇಕಾಗಿದೆ. ಹದಿಹರೆಯದ ವಯಸ್ಸಿನಲ್ಲಿ ಹೆಣ್ಣು ಮಕ್ಕಳು ಏಕಾಗ್ರತೆಯನ್ನು ಬೆಳಸಿಕೊಳ್ಳುವುದು ಅತೀ ಅವಶ್ಯವಾಗಿದ್ದು, ಆಲೋಚನೆಗಳನ್ನು ಬೇರೆಡೆಗೆ ಆಕರ್ಷಿತರಾಗದೆ ಓದಿನಲ್ಲಿ ಆಸಕ್ತಿ ಬೆಳಸಿಕೊಳ್ಳಬೇಕು. ಅಲ್ಲದೆ ಇತ್ತೀಚಿಗೆ ಪೋಕ್ಸೊ ಪ್ರಕರಣಗಳು ಹೆಚ್ಚಾಗುತ್ತಿದ್ದು ಅವುಗಳಿಂದ ಮಕ್ಕಳ ಮೇಲಾಗುವ ಪರಿಣಾಮಗಳ ಕುರಿತಂತೆ ಮಕ್ಕಳಿಗೆ ತಿಳಿಸಿ ಹೇಳಿದರು.
ಮಕ್ಕಳ ಸಹಾಯವಾಣಿ-೧೦೯೮ ಹಾಗೂ ತುರ್ತು ಸಹಾಯವಾಣಿ ೧೧೨ ಕುರಿತಂತೆ ಮಾಹಿತಿ ನೀಡಿದರು. ಮಕ್ಕಳಿಗೆ ಸಂಬಂಧಿಸಿದ ಹಲವಾರು ಸಮಸ್ಯೆಗಳಿಗೆ ತುರ್ತು ಸಂದರ್ಭದಲ್ಲಿ ನೆರವನ್ನು ನೀಡಲಾಗುವುದು ಹಾಗೂ ಕಾಲೇಜಿನ, ಶಾಲಾ ವಿದ್ಯಾರ್ಥಿಗಳು ಹೆಚ್ಚಿನ ಜಾಗ್ರತೆಯಿಂದ ಇರಬೇಕು ಎಂದು ಮಕ್ಕಳಿಗೆ ಧೈರ್ಯದ ನುಡಿಗಳನ್ನು ತಿಳಿಸಿದರು.
ಕಾರ್ಯಕ್ರಮದಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಮಹಿಳಾ ಸಬಲೀಕರಣ ಘಟಕದ ಮಿಷನ್ ಜಿಲ್ಲಾ ಮಿಷನ್ ಸಂಯೋಜಕಿ ಬಿ.ಎಸ್.ಮಮತ, ಸೋಮವಾರಪೇಟೆ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಬೆಳ್ಳಿಯಪ್ಪ, ಪೋಲೀಸ್ ಇಲಾಖೆಯ ಲೊಕೇಶ್, ಸೋಮವಾರಪೇಟೆ ಸರ್ಕಾರಿ ಪ್ರೌಢಶಾಲೆಯ ದೈಹಿಕ ಶಿಕ್ಷಕ ಬಸವರಾಜು, ಮಹಿಳಾ ಸಾಂತ್ವನದ ಸಿಬ್ಬಂದಿಗಳಾದ ಶ್ವೇತ ಮತ್ತು ಮನ್ವಿತ ಹಾಗೂ ಪೋಷಣಾ ಅಭಿಯಾನದ ತಾಲೂಕು ಸಂಯೋಜಕಿ ರಂಜಿತ ಮತ್ತು ಶಾಲಾ ವಿದ್ಯಾರ್ಥಿಗಳು ಹಾಜರಿದ್ದರು. ಶಾಲಾ ಮತ್ತು ಕಾಲೇಜಿನ ಮಕ್ಕಳಿಗೆ ಬೇಟಿ ಬಚಾವೋ ಬೇಟಿ ಪಡಾವೋ ಯೋಜನೆಯ ಪ್ರತಿಜ್ಞಾ ವಿಧಿಯನ್ನು ಸ್ವೀಕರಿಸಲಾಯಿತು.