

ತರೀಕೆರೆ: ಪಟ್ಟಣ ಸುತ್ತಮುತ್ತಲ ಪ್ರದೇಶದಲ್ಲಿ ಸರ್ಕಾರಿ ಜಾಗ ಗುರುತಿಸಿ ಕೊಟ್ಟರೆ ಅಧಿಕಾರಿಗಳೊಂದಿಗೆ ಸಾಧಕ ಬಾಧಕ ಚರ್ಚಿಸಿ ಅರ್ಹ ಪತ್ರಕರ್ತರಿಗೆ ನಿವೇಶನ ಹಂಚಲು ವ್ಯವಸ್ಥೆ ಮಾಡಲಾಗುವುದು ಎಂದು ಶಾಸಕ ಜಿ.ಎಚ್.ಶ್ರೀನಿವಾಸ್ ಭರವಸೆ ನೀಡಿದರು.
ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ತಾಲೂಕು ಘಟಕ ಶನಿವಾರ ಏರ್ಪಡಿಸಿದ್ದ ಪತ್ರಿಕಾ ದಿನಾಚರಣೆ ಉದ್ಘಾಟಿಸಿ ಮಾತನಾಡಿ, ಪತ್ರಿಕೆಗಳು ತಪ್ಪು ನಡೆಯುವ ಕಡೆ ಎಚ್ಚರಿಸುವ ಕೆಲಸ ನಿರಂತರ ಮಾಡುತ್ತಿದೆ. ಸಾಮಾಜಿಕ ಜಾಲತಾಣ, ದೃಶ್ಯ ಮಾಧ್ಯಮಗಳ ಭರಾಟೆ ನಡುವೆಯೂ ಮುದ್ರಣ ಮಾಧ್ಯಮ ನೈಜ, ನಿಖರ ಸುದ್ದಿ ಪ್ರಕಟಿಸಿ ಓದುಗರ ವಿಶ್ವಾಸಗಳಿಸುತ್ತಿದೆ. ಎಲ್ಲರೂ ಓದುವ ಅಭಿರುಚಿ ರೂಢಿಸಿಕೊಳ್ಳಬೇಕು. ಈ ಮೂಲಕ ದೈನಂದಿನ ವಿದ್ಯಮಾನಗಳನ್ನು ತಿಳಿದುಕೊಳ್ಳಬೇಕು ಎಂದರು.
ದೃಶ್ಯ ಮಾಧ್ಯಮಗಳು ಬಿತ್ತರಿಸುತ್ತಿರುವ ಸುದ್ದಿಗಳಲ್ಲಿ ತಾರತಮ್ಯ ಹೆಚ್ಚಾಗುತ್ತಿದ್ದು, ಕೆಲ ಪತ್ರಕರ್ತರು ಬ್ಲಾಕ್‌ಮೇಲ್ ಸಂಸ್ಕೃತಿ ಬೆಳೆಸಿಕೊಂಡು ವಿಶ್ವಾಸ ಕಳೆದುಕೊಳ್ಳುತ್ತಿದ್ದಾರೆ. ಸಿಎಂ ಸಿದ್ದರಾಮಯ್ಯ ಸರ್ಕಾರ ಪತ್ರಕರ್ತರಿಗೆ ಉಚಿತ ಬಸ್‌ಪಾಸ್ ಸೌಲಭ್ಯ ಕಲ್ಪಿಸಿದ್ದು, ಶೀಘ್ರದಲ್ಲೇ ಅರ್ಹರಿಗೆ ವಿತರಣೆಯಾಗಲಿದೆ ಎಂದು ತಿಳಿಸಿದರು.
ಪತ್ರಕರ್ತರ ಸಂಘದ ಜಿಲ್ಲಾಧ್ಯಕ್ಷ ಟಿ.ಎನ್.ಮೊದಲಿಯಾರ್, ಕೆಪಿಸಿಸಿ ಸದಸ್ಯ ಎಚ್.ವಿಶ್ವನಾಥ್, ತಾಲೂಕು ಆರೋಗ್ಯಾಧಿಕಾರಿ ಡಾ.ಬಿ.ಜಿ.ಚಂದ್ರಶೇಖರ್, ಕೆಡಿಪಿ ಸಮಿತಿ ಸದಸ್ಯ ಎಚ್.ಎನ್.ಮಂಜುನಾಥ್, ಪತ್ರಕರ್ತರ ಸಂಘದ ರಾಜ್ಯ ಸಮಿತಿ ಸದಸ್ಯ ಎಸ್.ಸುರೇಶ್‌ಚಂದ್ರ, ಎನ್.ಗಿರೀಶ್, ಕೆ.ನಾಗರಾಜ್ ಮತ್ತಿತರರಿದ್ದರು.