

ಮುಧೋಳ: ಭವಿಷ್ಯದ ಶಿಕ್ಷಕರು ಗುರಿ, ಸಾಧನೆಯೆಡೆಗೆ ಸಾಗಬೇಕಾದರೆ ಬೋಧನೆಯ ವಿಷಯವನ್ನು ಪ್ರೀತಿಸುವ ಜತೆಗೆ ವೃತ್ತಿ ಗೌರವಿಸುವ ಗುಣ ಹೊಂದಬೇಕೆಂದು ಪತ್ರಕರ್ತ ವೆಂಕಟೇಶ ಗುಡೆಪ್ಪನವರ ಹೇಳಿದರು.
ನಗರದ ಎಸ್‌ಕೆಟಿಎಸ್ ಸಂಸ್ಥೆಯ ಅಂಗ ಸಂಸ್ಥೆಯಾದ ಶ್ರೀ ಸದಾಶಿವ ಶಿಕ್ಷಣ ಮಹಾವಿದ್ಯಾಲಯದ ಅಂತಿಮ ವರ್ಷದ ಬಿ.ಇಡಿ ವಿದ್ಯಾರ್ಥಿಗಳ ದೀಪದಾನ, ಬೀಳ್ಕೊಡುಗೆ ಸಮಾರಂಭದಲ್ಲಿ ಅವರು ಮಾತನಾಡಿದರು.
ವಿದ್ಯಾರ್ಥಿಗಳು ಸದಾ ಗುರಿಯತ್ತ ತಮ್ಮ ಚಿತ್ತ ನೀಡಬೇಕು. ವಿದ್ಯಾರ್ಥಿಗಳು ಬುದ್ಧಿವಂತಿಕೆ ಹಾಗೂ ಕೌಶಲ ಹೆಚ್ಚಿಸುವ ಜೀವನದ ಹಾದಿಯಲ್ಲಿ ಸಾಗಬೇಕಲ್ಲದೆ, ಪೋಷಕರು, ಗುರು ಹಿರಿಯರಿಗೆ ಗೌರವ ನೀಡಬೇಕೆಂದು ತಿಳಿಸಿದರು.
ಕಾಲೇಜಿನ ಪ್ರಾಚಾರ್ಯ ಡಾ.ವೈ.ಎಸ್. ಸವನೂರ ಅಧ್ಯಕ್ಷತೆ ವಹಿಸಿ ಮಾತನಾಡಿ, ಶೈಕ್ಷಣಿಕ ಕ್ಷೇತ್ರದಲ್ಲಿ ಶಿಕ್ಷಕರು ಸಾಧನೆ ಮಾಡಬೇಕು. ವಿದ್ಯಾರ್ಥಿಗಳು ಶಾಲೆಯ ದೀಪವಿದ್ದಂತೆ. ಅವರು ಜಗತ್ತನ್ನು ಬೆಳಗುವ ನಂದಾದೀಪಗಳಾಗಬೇಕು. ಉತ್ತಮ ಆಲೋಚನೆ, ಒಳ್ಳೆಯ ಹೃದಯ ಗಳಿಸುತ್ತದೆ. ಸಂಬಂಧ ಉಳಿಸಿ, ಬೆಳೆಸಬೇಕು. ಶಿಕ್ಷಕರಲ್ಲಿ ಸಮಾಜ ಕಟ್ಟುವ ಸಾಮರ್ಥ್ಯವಿದೆ. ಕನ್ನಡ ನಾಡು ಇಡಿ ಇತಿಹಾಸ, ಬದುಕಿನ ಸುಂದರ ಚಿತ್ರಣಗಳನ್ನು ಕಟ್ಟಿಕೊಡುತ್ತದೆ. ವಿದ್ಯಾರ್ಥಿಗಳು ಜಗತ್ತನ್ನು ಬೆಳಗುವ ನಂದಾದೀಪಗಳಾಗಲಿ ಎಂದರು.
ಕಾಂಗ್ರೆಸ್ ಒಬಿಸಿ ಘಟಕದ ಜಿಲ್ಲಾಧ್ಯಕ್ಷ ಮುದಕಣ್ಣ ಅಂಬಿಗೇರ, ಸಿದ್ದು ತುಂಗಳ, ಜ್ಯೋತಿ ಹಿರೇಮಠ ಮಾತನಾಡಿದರು.
ಸಮಾಜ ಸೇವಕ ಹಿರಿಯರಾದ ಶಂಕರ ತಿಮ್ಮಾಪುರ, ವಿಜಯಲಕ್ಷ್ಮೀ ತಳೇವಾಡ, ಆಸ್ಮಾ ಗಣಿ, ವಾಣಿಶ್ರೀ ಗೌಡರ, ಅಶ್ವಿನಿ ಬಿರಾದಾರ, ದುರಗಪ್ಪ ಕಾಳಮ್ಮನವರ ಇದ್ದರು.
ನಂತರ ಕಿರಿಯ ವಿದ್ಯಾರ್ಥಿಗಳು, ಹಿರಿಯ ವಿದ್ಯಾರ್ಥಿಗಳಿಗೆ ನೆನಪಿನ ಕಾಣಿಕೆ ನೀಡಿ ಶುಭ ಹಾರೈಸಿದರು. ಕಿರಿಯ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು.