ವನ್ಯಜೀವಿಗಳ ದಾಹ ತಣಿಸಲು ಕ್ರಮ

IMG-20250220-WA0001
Published on

ಎಚ್.ಡಿ.ಕೋಟೆ: ಬೇಸಿಗೆ ಆರಂಭದ ಹಿನ್ನೆಲೆಯಲ್ಲಿ ಕಾಡು ಪ್ರಾಣಿಗಳ ದಾಹ ತಣಿಸಲು ಅರಣ್ಯ ಇಲಾಖೆ ಕಾಡಿನ ಕೆರೆ -ಕಟ್ಟೆಗಳನ್ನು ತುಂಬಿಸಲು ಕ್ರಮ ಕೈಗೊಂಡಿದೆ.

ಬೇಸಿಗೆಯಲ್ಲಿ ಪ್ರಾಣಿಗಳಿಗೆ ಕುಡಿಯುವ ನೀರಿಗೆ ಹಾಹಾಕಾರ ಎದುರಾಗುವ ಸಾಧ್ಯತೆ ಹೆಚ್ಚಿರುತ್ತದೆ. ಇದು ಕಾಡಿನ ಪ್ರಾಣಿಗಳನ್ನು ತೀವ್ರವಾಗಿ ಕಾಡಲಿದೆ. ಇಂತಹ ಸಂದರ್ಭದಲ್ಲಿ ಕಾಡುಪ್ರಾಣಿಗಳು ನೀರಿಗಾಗಿ ಅಲೆದಾಡುತ್ತಾ ಕಾಡಿನಿಂದ ನಾಡಿನತ್ತು ಬಂದು ಅವಾಂತರ ಸೃಷ್ಟಿಸುವ ಸಾಧ್ಯತೆ ಅಲ್ಲಗಳೆಯುವಂತಿಲ್ಲ. ಈ ವೇಳೆ ಮಾನವರೊಂದಿಗೆ ಸಂಘರ್ಷಕ್ಕೆ ನಿಲ್ಲುತ್ತವೆ. ಇದನ್ನು ತಪ್ಪಿಸಲು ಸಲುವಾಗಿಯೇ ನಾಗರಹೊಳೆ ಹುಲಿ ಸಂರಕ್ಷಿತ ಪ್ರದೇಶದ ಸಿಬ್ಬಂದಿ ಕಾಡಿನ ಕೆರೆಕಟ್ಟೆಗಳಿಗೆ ನೀರು ತುಂಬಿಸುವ ಕೆಲಸ ಮಾಡುತ್ತಿದ್ದಾರೆ.

ಬೇಸಿಗೆ ಸಂದರ್ಭದಲ್ಲಿ ಪ್ರಾಣಿ-ಪಕ್ಷಿಗಳ ಪಾಡಂತೂ ಹೇಳತೀರದು. ಕಾಡಿನ ಕೆರೆ-ಕಟ್ಟೆಗಳಲ್ಲೇ ನೀರು ಬತ್ತಿ ಹೋಗುತ್ತಿದ್ದಂತೆ ಅವು ನೀರಿಗಾಗಿ ಅಲೆದಾಟ ಆರಂಭಿಸುತ್ತಿವೆ. ನೂರಾರು ಕಿ.ಮೀ. ಪ್ರಯಾಣಿಸುತ್ತಾ ಕಾಡಿನಿಂದ ಹೊರ ಬೀಳುವ ಸಾಧ್ಯತೆಗಳೂ ಹೆಚ್ಚಾಗಿರುತ್ತವೆ. ಸಣ್ಣಪುಟ್ಟ ಪ್ರಾಣಿ ಪಕ್ಷಿಗಳಿಗೇನೋ ಅಲ್ಪ ನೀರು ಸಾಕು. ಆದರೆ ಆನೆ, ಹುಲಿ, ಕಾಡುಕೋಣದಂತಹ ದೈತ್ಯ ಜೀವಿಗಳಿಗಂತೂ ಬೇಸಿಗೆ ಅಕ್ಷರಶಃ ಪ್ರಾಣಕ್ಕೆ ಸಂಚಕಾರವೇ ಸರಿ.

ಕಾಡಿನ ಪ್ರಾಣಿ-ಪಕ್ಷಿಗಳಿಗೆ ಕೆರೆ-ಕಟ್ಟೆಗಳೇ ನೀರಿನ ಮೂಲ. ನಾಗರಹೊಳೆ ಮಧ್ಯ ಭಾಗದಿಂದ ಕೆಲವು ನದಿಗಳು ಹಾದು ಹೋಗಿದ್ದು, ಕಾಡುಪ್ರಾಣಿಗಳ ನೀರಿನ ಮೂಲವಾಗಿದೆ. ಅದರಲ್ಲಿಯೂ ಕಪಿಲಾ ನದಿ ನಾಗರಹೊಳೆ ಮತ್ತು ಬಂಡೀಪುರ ಅರಣ್ಯ ಪ್ರದೇಶದ ಜೀವಿಗಳಿಗೆ ಪ್ರಮುಖ ನೀರಿನ ಮೂಲ. ಆದರೆ ಎಲ್ಲ ಜೀವಿಗಳೂ ನದಿಗಳ ಸಮೀಪ ಬಂದು ಹೋಗುತ್ತವೆ ಎನ್ನಲಾಗದು. ಆದ್ದರಿಂದ ಅವುಗಳ ಆವಾಸಸ್ಥಾನಗಳಲ್ಲಿರುವ ಕೆರೆಕಟ್ಟೆಗಳನ್ನು ತುಂಬಿಸಬೇಕು. ಹೀಗಾಗಿ ನಾಗರಹೊಳೆ ಹುಲಿ ಸಂರಕ್ಷಿತ ಪ್ರದೇಶದ ಎಲ್ಲ ಕೆರೆಗಳಿಗೆ ಪ್ರತಿಬಾರಿಯಂತೆಯೇ ಈ ಬಾರಿಯೂ ಟ್ಯಾಂಕರ್‌ಗಳ ಮೂಲಕ ನೀರನ್ನು ತುಂಬಿಸಲಾಗುತ್ತಿದೆ ಎನ್ನುತ್ತಾರೆ ಅಧಿಕಾರಿಗಳು.

ಕಾಡಿನ ಕೆಲ ಕೆರೆಗಳ ಸಮೀಪ ಈ ಹಿಂದೆಯೇ ಕೊಳವೆ ಬಾವಿಗಳನ್ನು ತೆಗೆಯಲಾಗಿದ್ದು, ಅವುಗಳ ಮೂಲಕವೂ ಸ್ಥಳೀಯ ಕೆರೆಗಳಿಗೆ ನೀರಿನ ಪೂರೈಕೆ ಮಾಡಲಾಗುತ್ತಿದೆ. ಅಲ್ಲದೆ ಕಾಡಂಚಿನಲ್ಲಿರುವ ಕೆರೆಗಳಿಗೆ ಸ್ಥಳೀಯರು ಜಮೀನುಗಳ ಕೊಳವೆಬಾವಿಗಳಿಂದ ನೀರು ತುಂಬಿಸಲಾಗುತ್ತಿದೆ. ಬೇಸಿಗೆಯಲ್ಲಿ ಕಾಡನ್ನು ಕಾಳ್ಗಿಚ್ಚಿನಿಂದ ರಕ್ಷಿಸಿಕೊಳ್ಳುವ ಜತೆಗೆ ಪ್ರಾಣಿಗಳ ನೀರಿನ ಮೂಲವನ್ನು ನಿರ್ವಹಣೆ ಮಾಡುವ ಜವಾಬ್ದಾರಿಯೂ ಇಲಾಖೆ ಮೇಲಿದೆ. ಈ ಎರಡನ್ನೂ ಎಚ್ಚರಿಕೆಯಿಂದ ನಿರ್ವಹಿಸಿಕೊಂಡು ಕಾಡಿನ ಮೇಲೆ ಹದ್ದಿನ ಕಣ್ಣಿಡಬೇಕು.

ನಾಗರಹೊಳೆಗೆ ಆಸರೆ ತಾರಕ, ಕಬಿನಿ: ಎಂತಹ ಬೇಸಿಗೆಯಾದರೂ ಸಂಪೂರ್ಣವಾಗಿ ಬತ್ತದ ತಾರಕ ಮತ್ತು ಕಬಿನಿ ಜಲಾಶಯಗಳೇ ನಾಗರಹೊಳೆ ಹುಲಿ ಸಂರಕ್ಷಿತ ಪ್ರದೇಶದ ಪ್ರಮುಖ ನೀರಿನ ಮೂಲವಾಗಿವೆ. ನಾಗರಹೊಳೆಯ ಶೇ.60ರಷ್ಟು ಜೀವಿಗಳ ಕಬಿನಿ ಮತ್ತು ತಾರಕ ಜಲಾಶಯದ ನೀರನ್ನೇ ಅವಲಂಭಿಸಿವೆ. ಇದು ನಾಗರಹೊಳೆಗೆ ಒಂದು ವರದಾನ ಕೊಡ. ಬೀಸಿಲಿನ ತಾಪ ಏರಿಕೆಯಾಗುತ್ತಿದ್ದಂತೆ ಕಬಿನಿ ಹಿನ್ನೀರಿನಲ್ಲಿ ಆನೆಗಳ ಹಿಂಡು ಬೀಡುಬಿಡುತ್ತವೆ. ಸಮೃದ್ಧವಾದ ಹಿನ್ನೀರಿನಲ್ಲಿ ವಿಶ್ರಾಂತಿ ಪಡೆಯುತ್ತಾ ಬೇಸಿಗೆಯ ಬಿಸಿಲಿನಿಂದ ರಕ್ಷಿಸಿಕೊಳ್ಳುತ್ತವೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net