ಸಿ.ಟಿ.ರವಿ ಬಂಧನ ಕಾನೂನು ಬಾಹಿರ

bjp
Published on

ಕೋಲಾರ: ಎಂಎಲ್ಸಿ ಸಿ.ಟಿ.ರವಿ ಅವರ ಮೇಲೆ ಕಾಂಗ್ರೆಸ್​ ಗೂಂಡಾಗಳು ಹಲ್ಲೆ ನಡೆಸಲು ಯತ್ನಿಸಿದ್ದು, ಸೂಕ್ತ ಕ್ರಮ ಜರುಗಿಸಬೇಕು ಎಂದು ಒತ್ತಾಯಿಸಿ ಬಿಜೆಪಿ ಕಾರ್ಯಕರ್ತರು ನಗರದ ಬಸ್​ ನಿಲ್ದಾಣದ ವೃತ್ತದಲ್ಲಿ ಶುಕ್ರವಾರ ಪ್ರತಿಭಟನೆ ನಡೆಸಿದರು.

ಬಿಜೆಪಿ ಜಿಲ್ಲಾಧ್ಯಕ್ಷ ಡಾ.ಕೆ.ಎನ್​.ವೇಣುಗೋಪಾಲ್​ ಮಾತನಾಡಿ, ರಾಜ್ಯದಲ್ಲಿ ಕಾಂಗ್ರೆಸ್​ ಸರ್ಕಾರ ಅಧಿಕಾರಕ್ಕೆ ಬಂದಾಗಿನಿಂದ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ. ಸಾಮಾನ್ಯ ಜನರ ಮೇಲೆ ದೌರ್ಜನ್ಯಗಳು ಹೆಚ್ಚಾಗಿವೆ. ಜತೆಗೆ ಸುವರ್ಣ ಸೌಧದಲ್ಲೇ ಎಂಎಲ್ಸಿ ವಿರುದ್ಧ ಹಲ್ಲೆಗೆ ಯತ್ನ ನಡೆದಿದೆ ಎಂದರೆ ಸರ್ಕಾರ ಎಷ್ಟರ ಮಟ್ಟಿಗೆ ಇದೆ ಎಂದು ಪ್ರಶ್ನಿಸಿದರು.

ಸುವರ್ಣ ಸೌಧದೊಳಗೆ ಗುಂಡಾಗಳನ್ನು ಕರೆಸಿ, ಮಾಜಿ ಸಚಿವ ರವಿ ಅವರ ಮೇಲೆ ಹಲ್ಲೆ ಮಾಡಿಸಿದ್ದಲ್ಲದೆ ಸುಳ್ಳು ಆರೋಪ ಹೊರಿಸಿ ಬಂಧನ ಮಾಡಿ ರಾತ್ರಿಯಿಡೀ ಠಾಣೆಯಿಂದ ಠಾಣೆಗೆ ಸುತ್ತಾಡಿಸಿದ್ದೇ ಕಾಂಗ್ರೆಸ್​ ಸಂಸ್ಕತಿ. ಸಚಿವರು ಅಧಿಕಾರಿವನ್ನು ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ ಎಂಬುದಕ್ಕೆ ಇದೇ ನಿದರ್ಶನವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಒಂದೇ ರಾತ್ರಿಯಲ್ಲಿ 4-5 ಪೊಲೀಸ್​ ಠಾಣೆ ಸುತ್ತಾಡಿಸಿದ್ದಾರೆ. ಭಯೋತ್ಪದಕರ ರೀತಿ ಅನುಚಿತವಾಗಿ ಪೊಲೀಸರು ನಡೆದುಕೊಂಡಿದ್ದಾರೆ. ಗುಂಡಾಗಳ ಹಲ್ಲೆಯಿಂದ ಗಾಯಗೊಂಡಿದ್ದ ಮಾಜಿ ಸಚಿವ ಸಿ.ಟಿ.ರವಿಗೆ ಕನಿಷ್ಠ ಚಿಕಿತ್ಸೆ ಕೊಡಿಸುವಲ್ಲೂ ಮಾನವೀಯತೆ ತೋರಿಸಿಲ್ಲ ಎಂದು ಆರೋಪಿಸಿದರು.

ಸಂವಿಧಾನದ ಶಿಲ್ಪಿ ಡಾ.ಬಿ.ಆರ್​.ಅಂಬೇಡ್ಕರ್​ ಅವರ ವಿರುದ್ಧ ಚುನಾವಣೆಯಲ್ಲಿ ಅಪಮಾನ ಮಾಡಿ ಅಪಪ್ರಚಾರ ಮಾಡಿದರು ಸತ್ತಾಗ ಸಮಾಧಿಗೆ ಜಾಗವೂ ಕೊಡಲಿಲ್ಲ, ಸಂವಿಧಾನ ರಚಿಸಿದ್ದಕ್ಕೆ ಭಾರತರತ್ನ ಪ್ರಶಸ್ತಿ ನೀಡಲಿಲ್ಲ. ಇದು ಕಾಂಗ್ರೆಸ್​ಗೆ ಶೋಭೆ ತರುವಂತಹದ್ದಲ್ಲ ಎಂದು ದೂರಿದರು.

ಸಿ.ಟಿ.ರವಿ ಬಂಧನ ಹಿನ್ನೆಲೆಯಲ್ಲಿ ಕಾರ್ಯಕರ್ತರು, ಮುಖಂಡರು ಪ್ರತಿಭಟನೆ ಒಂದೆಡೆಯಾದರೆ, ಕಾನೂನು ಸಮರದಲ್ಲಿ ಸಂಜೆ ಹೈಕೋರ್ಟ್​ನಿಂದ ಬಿಡುಗಡೆ ಮಾಡಲು ಆದೇಶ ಹೊರಡಿಸಿದ್ದು, ಪೊಲೀಸ್​ ಸುಪರ್ದಿಯಲ್ಲಿ ಬೆಂಗಳೂರಿಗೆ ಕರೆತರುತಿದ್ದಾಗ ದಾವಣಗೆರೆಯಲ್ಲಿ ಸಿ.ಟಿ.ರವಿ ಅವರನ್ನು ಬಿಡುಗಡೆ ಮಾಡಲಾಯಿತು.

ಪ್ರತಿಭಟನೆಯಲ್ಲಿ ಬಿಜೆಪಿ ಪ್ರಧಾನ ಕಾರ್ಯದರ್ಶಿ ಓಂಶಕ್ತಿ ಚಲಪತಿ, ಕೆಯುಡಿಎ ಮಾಜಿ ಅಧ್ಯಕ್ಷ ವಿಜಯಕುಮಾರ್​, ಮುಖಂಡರಾದ ಎನ್​.ಮಂಜುನಾಥ್​, ಎ.ಸಿ. ವೆಂಕಟೇಶ್​, ಕೆಂಬೋಡಿ ನಾರಾಯಣಸ್ವಾಮಿ, ಮಹೇಶ್​, ಓಹಿಲೇಶ್​, ಮಂಜು, ಸಾಮಾ ಅನಿಲ್​ ಬಾಬು, ರವಿ, ತಿಮ್ಮರಾಯಪ್ಪ, ಮಮತಮ್ಮ, ಶ್ರೀನಾಥ್​ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net