

ಉಡುಪಿ: ಕೋವಿಡ್ ಲಸಿಕೆ ಬಗ್ಗೆ ಕೆಲವು ಪ್ರತಿಪಕ್ಷ ನಾಯಕರು ಅಪಪ್ರಚಾರ ಮಾಡುತ್ತಿರುವುದು ದುರ್ದೈವ ಸಂಗತಿ. ದೇಶದಲ್ಲಿ ತಯಾರಾದ ಔಷಧದ ಬಗ್ಗೆ ಅಪಪ್ರಚಾರ ಮಾಡುವುದು ಷಡ್ಯಂತ್ರದ ಭಾಗವಾಗಿದೆ. ತಾವು ಮಾಡೋದಿಲ್ಲ, ಮಾಡುವವರಿಗೆ ಬಿಡುವುದಿಲ್ಲ ಎಂಬ ಮನಸ್ಥಿತಿ ಬದಲಾಯಿಸಿಕೊಳ್ಳುವ ಅಗತ್ಯವಿದೆ. ಇಲ್ಲದಿದ್ದರೆ ಇಂಥ ಪಕ್ಷವನ್ನು ಜನ ದೇಶದ ರಾಜಕಾರಣದಿಂದ ಅಳಿಸಿ ಹಾಕಲಿದ್ದಾರೆ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಹೇಳಿದರು.
ನಗರದಲ್ಲಿ ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇಟಲಿ ಅಥವಾ ಚೀನಾದಿಂದ ಬಂದರೆ ಮಾತ್ರ ಔಷಧ ಒಳ್ಳೆಯದು ಎಂಬ ಭಾವನೆ ಅವರಿಗಿದೆ. ಆದರೆ ಜನರು ನಮ್ಮ ಮೇಲೆ ವಿಶ್ವಾಸ ಇಟ್ಟಿದ್ದಾರೆ. ದೇಸೀ ಲಸಿಕೆಯ ಬಗ್ಗೆ ಅವರಿಗೆ ನಂಬಿಕೆ ಇಲ್ಲ. ಈ ದೇಶದ ಜನರ ಓಟು ಬೇಕು. ದೇಶದ ವಿಜ್ಞಾನಿಗಳ ಬಗ್ಗೆಯೂ ಅವರಿಗೆ ಗೌರವ ಇದ್ದಂತಿಲ್ಲ ಎಂದು ಕುಟುಕಿದರು.
ಸಚಿವ ಸಂಪುಟ ವಿಸ್ತರಣೆ: ಬುಧವಾರ ಸಚಿವ ಸಂಪುಟ ವಿಸ್ತರಣೆ ಆಗಲಿದೆ. ಸಚಿವರಾಗಲು ಯೋಗ್ಯತೆ ಇರುವವರು ಪಕ್ಷದಲ್ಲಿ ಬಹಳ ಜನ ಇದ್ದಾರೆ. ಆದರೆ ಯಾರಿಗೆ ಯೋಗ ಇದೆ ಎಂಬುದು ಪ್ರಮಾಣ ವಚನ ಸಮಯದಲ್ಲಿ ತಿಳಿಯಲಿದೆ ಎಂದರು.