ಅಧಿಕಾರದಲ್ಲಿ ಉಳಿಯಲು ಕಪ್ಪ ನೀಡುವುದು ಕಾಂಗ್ರೆಸ್​ ಪದ್ಧತಿ

udp-30-ravi
Published on

ಉಡುಪಿ: ಕಾಂಗ್ರೆಸ್​ ಹೈಕಮಾಂಡ್​ ಪ್ರತಿನಿಧಿ ರಣದೀಪ್​ ಸಿಂಗ್​ ಸುರ್ಜೇವಾಲಾ ಜನರ ಕಷ್ಟ ಕೇಳಲು ರಾಜ್ಯಕ್ಕೆ ಬಂದಿಲ್ಲ. ಅವರು ಕಪ್ಪ ಕೇಳೋದಕ್ಕೆ ಬಂದಿದ್ದಾರೆ. ಕಪ್ಪ ಕೊಡೋದು ಕಾಂಗ್ರೆಸ್​ ವಾಡಿಕೆ ಎಂದು ವಿಪ ಸದಸ್ಯ ಸಿ.ಟಿ.ರವಿ ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮೊಘಲರ ಆಳ್ವಿಕೆಯಲ್ಲಿ ಕಪ್ಪ ನೀಡುವ ಪದ್ಧತಿ ಇತ್ತು. ಅದೀಗಲೂ ಮುಂದುವರಿದಿದೆ. ಕಾಂಗ್ರೆಸ್​ ಹೈಕಮಾಂಡ್​ಗೆ ಕಪ್ಪಕೊಡದಿದ್ದರೆ ಅಧಿಕಾರದಲ್ಲಿದ್ದವರು ಪದಚ್ಯುತಿ ಆಗುತ್ತಾರೆ. ವೀರೇಂದ್ರ ಪಾಟೀಲ್​ ಕಪ್ಪಕೊಡದೆ ಅಧಿಕಾರ ಕಳೆದುಕೊಂಡರು. ಅಧಿಕಾರದಲ್ಲಿ ಉಳಿದುಕೊಳ್ಳಲು ಕಪ್ಪ ಕೊಡಬೇಕು ಎಂದು ವ್ಯಂಗ್ಯವಾಡಿದರು.

ಎನ್​ಡಿಎ ಸರ್ಕಾರದ ಗಮನಾರ್ಹ ಸಾಧನೆ

ಕಳೆದ 11 ವರ್ಷಗಳಲ್ಲಿ ಕೇಂದ್ರದಲ್ಲಿ ಅಧಿಕಾರದಲ್ಲಿರುವ ಮೋದಿ ನೇತೃತ್ವದ ಎನ್​ಡಿಎ ಸರ್ಕಾರ ಆತ್ಮನಿರ್ಭರ ಭಾರತಕ್ಕೆ ಮುನ್ನುಡಿ ಬರೆದಿದ್ದು, ಪ್ರತಿ ಕ್ಷೇತ್ರದಲ್ಲಿ ಗಮನಾರ್ಹ ಸಾಧನೆ ಮಾಡಿದೆ. ದೇಶದ ಸಂಪತ್ತಿನಲ್ಲಿ ಮುಸ್ಲಿಮರಿಗೆ ಮೊದಲ ಹಕ್ಕು ಎಂದ ಮಾಜಿ ಪ್ರಧಾನಿ ಮನಮೋಹನ್​ ಸಿಂಗ್​ ಜಾತ್ಯತಿತರಾಗಿದ್ದಾರೆ. ದೇಶ ಸಂಪತ್ತಿನಲ್ಲಿ ಬಡವರಿಗೆ ಮೊದಲ ಹಕ್ಕು ಎಂದ ಮೋದಿ ಕೋಮುವಾದಿ ಎಂಬುದಾಗಿ ಬಿಂಬಿತವಾಗಿರುವುದು ದುರ್ದೈವದ ಸಂಗತಿ ಎಂದರು.

ಯುಪಿಎ ಅವಧಿಯಲ್ಲಿ ರೈತರ ಕಲ್ಯಾಣಕ್ಕೆ 27,663 ಕೋಟಿ ರೂ. ನೀಡಲಾಗಿತ್ತು. ಎನ್​ಡಿಎ ಸರ್ಕಾರ 1.77 ಲಕ್ಷ ಕೋಟಿ ರೂ. ಕೃಷಿಗೆ ಮೀಸಲಿಟ್ಟಿದೆ. 5 ಪಟ್ಟು ಹಣ ಹೆಚ್ಚಳವಾಗಿದೆ. ಇದೇ ರೀತಿ 2014ರಲ್ಲಿ 74 ವಿಮಾನ ನಿಲ್ದಾಣಗಳಿತ್ತು. 11 ವರ್ಷದಲ್ಲಿ 80ಕ್ಕೂ ಹೆಚ್ಚು ಹೊಸ ನಿಲ್ದಾಣ ನಿರ್ಮಿಸಲಾಗಿದೆ. ಎಂಬಿಬಿಎಸ್​ ಸೀಟ್​ ಸಂಖ್ಯೆ 50 ಸಾವಿರದಿಂದ 1.10 ಲಕ್ಷಕ್ಕೆ ಏರಿಕೆಯಾಗಿದೆ. ರಕ್ಷಣಾ ಬಜೆಟ್​ 2,000 ಕೋಟಿ ರೂ.ನಿಂದ 23,000 ಕೋಟಿ ರೂ.ಗೆ ಜಿಗಿದೆ. ಹೀಗೆ ಭಾರತವನ್ನು ಅಭಿವೃದ್ಧಿ ಹೊಂದಿದ ರಾಷ್ಟ್ರವಾಗಿಸಲು ಕೇಂದ್ರಸರ್ಕಾರ ಪಣತೊಟ್ಟಿದೆ ಎಂದರು.

ಜಿಲ್ಲಾಧ್ಯಕ್ಷ ನವೀನ್​ ಶೆಟ್ಟಿ , ಸಂಸದ ಕೋಟ ಶ್ರೀನಿವಾಸ ಪೂಜಾರಿ, ಶಾಸಕರಾದ ಗುರ್ಮೆ ಸುರೇಶ್​ ಶೆಟ್ಟಿ, ಯಶ್ಪಾಲ್​ ಸುವರ್ಣ, ಗುರುರಾಜ್​ ಗಂಟಿಹೊಳೆ, ಪ್ರಮುಖರಾದ ಮಟ್ಟಾರು ರತ್ನಾಕರ ಹೆಗ್ಡೆ, ಸುರೇಶ್​ ನಾಯಕ್​, ಉದಯ್​ ಕುಮಾರ್​ ಶೆಟ್ಟಿ, ರಾಜೇಶ್​ ಕಾವೇರಿ, ದಿನಕರ ಶೆಟ್ಟಿ ಹೆರ್ಗ, ರೇಶ್ಮಾ ಶೆಟ್ಟಿ ಮೊದಲಾದವರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net