

ಚಿಕ್ಕಮಗಳೂರು: ಲಕ್ಯಾ ಭಾಗದಲ್ಲಿ ನೀರಾವರಿ ಯೋಜನೆಗೆ 28 ಕೋಟಿ ರೂ. ಮಂಜೂರಾಗಿದ್ದು, ಡಿಸೆಂಬರ್ ಅಂತ್ಯದೊಳಗೆ ಟೆಂಡರ್ ಪ್ರಕ್ರಿಯೆ ಪೂರ್ಣಗೊಳ್ಳಲಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಸಿ.ಟಿ.ರವಿ ಹೇಳಿದರು.
ತಾಲೂಕಿನ ವಿವಿಧೆಡೆ 3 ಕೋಟಿ ರೂ. ವೆಚ್ಚದಲ್ಲಿ ಅಭಿವೃದ್ಧಿಪಡಿಸುತ್ತಿರುವ ಕಾಮಗಾರಿಗೆ ಮಂಗಳವಾರ ಶಂಕುಸ್ಥಾಪನೆ ನೆರವೇರಿಸಿ ಮಾತನಾಡಿದ ಅವರು, ಭೈರಾಪುರ ಪಿಕಪ್ನಿಂದ ಲಕ್ಯಾ ಮಾದರಸನ ಕೆರೆ ಹಾಗೂ ದಾಸರಹಳ್ಳಿ ಕೆರೆ ಸೇರಿ ಚೆಕ್ಡ್ಯಾಮ್ಳಿಗೆ ನೀರು ತುಂಬಿಸುವ ಯೋಜನೆ ಕುರಿತು ರೈತರ ಜತೆ ಸಮಾಲೋಚನೆ ನಡೆಸಲಾಗುತ್ತಿದೆ. ಜನವರಿ ನಂತರ ಕಾಮಗಾರಿ ಆರಂಭಿಸಲಾಗುವುದು ಎಂದರು.
3 ಕೋಟಿ ರೂ.ವೆಚ್ಚದಲ್ಲಿ ಉದ್ದೇಬೋರನಹಳ್ಳಿ-ಸಿರಬಡಿಗೆ ರಸ್ತೆ, ಈಶ್ವರಹಳ್ಳಿ ರಸ್ತೆ, ಬಿಸಿಎಂ ಹಾಸ್ಟೆಲ್ ಕಟ್ಟಡ ಕಾಮಗಾರಿಗೆ ಶಂಕುಸ್ಥಾಪನೆ ನೆರವೇರಿಸಲಾಗಿದೆ. ಲಕ್ಯಾ, ಕಳಸಾಪುರ ರಸ್ತೆಗೆ 4 ಕೋಟಿ ರೂ, ಉದ್ದೇಬೋರನಹಳ್ಳಿ ರಸ್ತೆಗೆ 7 ಕೋಟಿ ರೂ.ಮಂಜೂರಾಗಿದೆ. ನಗರದ ತಾಲೂಕು ಕಚೇರಿ ಆವರಣದಲ್ಲಿ ಗೋಪುರ, ಕಲ್ಲು ಜೋಡಣೆ, ಗರ್ಭಗುಡಿ ಸೇರಿ ಗಣಪತಿ ದೇವಾಲಯದ ಕಾಮಗಾರಿ ಪೂರ್ಣಗೊಳಿಸಲು 15 ಲಕ್ಷ ರೂ. ಅನುದಾನ ನೀಡಲಾಗಿದೆ. ಕ್ಷೇತ್ರದಲ್ಲಿ ಟೀಕೆ ಮಾಡುವವರಿಗೆ ಅಭಿವೃದ್ಧಿ ಮೂಲಕ ಉತ್ತರ ನೀಡಲಾಗುತ್ತಿದೆ ಎಂದರು.