

ಚಿಕ್ಕಮಗಳೂರು: ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಯಾಗಿ ನೇಮಕಗೊಂಡಿರುವ ಸಿ.ಟಿ. ರವಿ ಸಚಿವ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದು, ಈವರೆಗೆ ಅಂಗೀಕಾರವಾಗಿಲ್ಲ. ಆದರೆ ಜಿಲ್ಲೆಯಲ್ಲಿ ಪ್ರವಾಸ ಕೈಗೊಂಡಿರುವ ಸಚಿವರು ಖಾಸಗಿ ಕಾರು ಬಳಸುತ್ತಿದ್ದಾರೆ. ಜಿಲ್ಲೆಯಲ್ಲಿ 2 ದಿನ ವಿವಿಧ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡಿದ್ದ ಅವರು ಸರ್ಕಾರದ ಸೌಲಭ್ಯ ಬಳಸಿಕೊಳ್ಳುತ್ತಿಲ್ಲ. ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ವೈ ಕೆಟಗರಿಯಲ್ಲಿ ಬರುವ ಕಾರಣ ಎಸ್ಕಾರ್ಟ್ ಇದೆ.
ಈಗಾಗಲೆ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದು, ಸರ್ಕಾರದ ಎಲ್ಲ ಸೌಲಭ್ಯ ವಾಪಸ್ ಮಾಡಿದ್ದೇನೆ. ಖಾಸಗಿ ವಾಹನದಲ್ಲಿ ಓಡಾಡುತ್ತಿದ್ದೇನೆ. ಈಗ ನಾನು ಮಂತ್ರಿಯಲ್ಲ ಮಹಾಮಂತ್ರಿ. | ಸಿ.ಟಿ.ರವಿ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ
ಶಾಸಕರಿಗೆ ದೀಪಾವಳಿ ಕೊಡುಗೆ
ಬೆಂಗಳೂರು: ದೀರ್ಘಾವಧಿಯಿಂದ ನಿರೀಕ್ಷೆ, ಅಸಮಾಧಾನದಿಂದ ಚಡಪಡಿಸುತ್ತಿದ್ದ ಶಾಸಕರಿಗೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ದೀಪಾವಳಿಗೆ ಮುನ್ನವೇ ಕೊಡುಗೆ ನೀಡಿದ್ದು, ಅನುದಾನ ಬಿಡುಗಡೆಗೆ ಅನುಮೋದನೆ ನೀಡಿದ್ದಾರೆ. ಪ್ರಸಕ್ತ ಆರ್ಥಿಕ ವರ್ಷದ 2ನೇ ಕಂತಿನ ಅನುದಾನವಾಗಿ ಒಟ್ಟು 150 ಕೋಟಿ ರೂ. ಬಿಡುಗಡೆಗೆ ಬಿಎಸ್ವೈ ಅನುಮೋದಿಸಿದ್ದು, ಆರ್ಥಿಕ ಇಲಾಖೆ ಸಹಮತಿಸಿದೆ. ಶಾಸಕರ ಸ್ಥಳೀಯ ಪ್ರದೇಶಾಭಿವೃದ್ಧಿ ಯೋಜನೆಯಡಿ ಹಿಂದಿನ ಸಾಲಿನಲ್ಲಿ ಅನುಮೋದಿಸಿದ ಕಾಮಗಾರಿಗಳನ್ನು ಮೊದಲಿಗೆ ಪೂರ್ಣಗೊಳಿಸಬೇಕು ಎಂದು ಇಲಾಖೆ ಅನಧಿಕೃತ ಟಿಪ್ಪಣಿಯಲ್ಲಿ ತಿಳಿಸಿದೆ. 2019-20ರ ಬಾಕಿ ಕಾಮಗಾರಿಗಳನ್ನು 2 ಕೋಟಿ ರೂ.ಗಳವರೆಗೆ ಮುಂದುವರಿಸುವ ಪ್ರಸ್ತಾವನೆಯಂತೆ 2020ರ ಜು.8ರಲ್ಲಿ ಈಗಾಗಲೇ ಪ್ರಾರಂಭವಾಗಿರುವ ಹಾಗೂ ಮುಂದುವರಿದ ಕಾಮಗಾರಿಗಳಿಗೂ ಹಣಕಾಸಿನ ಸಮಸ್ಯೆಯಾಗದಂತೆ ಬಿಎಸ್ವೈ ನೋಡಿಕೊಂಡಿದ್ದಾರೆ.