

ಹುಬ್ಬಳ್ಳಿ : ವಿಧಾನ ಪರಿಷತ್ ಸದಸ್ಯ ಸಿ.ಟಿ. ರವಿ ಹಾಗೂ ಸಚಿವೆ ಲಕ್ಷ್ಮೀ ಹೆಬ್ಬಾಳಕರ ಮಧ್ಯದ ಜಟಾಪಟಿ ಪ್ರಕರಣ ಬಜೆಟ್ ಅಧಿವೇಶನದ ಒಳಗಾಗಿ ಬಗೆಹರಿಯಲಿದೆ ಎಂದು ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಹೇಳಿದರು.
ನಗರದಲ್ಲಿ ಗುರುವಾರ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಸಿ.ಟಿ. ರವಿ ಅವರು ಸಚಿವೆ ಲಕ್ಷ್ಮೀ ಹೆಬ್ಬಾಳಕರ ಅವರಿಗೆ ಅಸಂವಿಧಾನಿಕ ಪದ ಬಳಸಿದ್ದಾರೆಂಬ ಆರೋಪದ ತನಿಖೆ ನೀತಿ ನಿರೂಪಣಾ ಸಮಿತಿ ಮುಂದಿದೆ. ಇದುವರೆಗೆ ಅಲ್ಲಿಂದ ಯಾವುದೇ ಮಾಹಿತಿ ಬಂದಿಲ್ಲ ಎಂದರು.
ಈ ಪ್ರಕರಣ ಬಗೆಹರಿಸುವ ಜವಾಬ್ದಾರಿ ನನ್ನ ಮೇಲಿದೆ. ನಾನು ಸಚಿವೆ ಲಕ್ಷ್ಮೀ ಹೆಬ್ಬಾಳಕರ ಅವರೊಂದಿಗೆ ಮಾತನಾಡಲು ಎರಡು ಬಾರಿ ಮೊಬೈಲ್ ಫೋನ್ಗೆ ಕರೆ ಮಾಡಿದ್ದೆ. ಆದರೆ, ಅವರು ಕರೆ ಸ್ವೀಕರಿಸಲಿಲ್ಲ ಎಂದ ಬಸವರಾಜ ಹೊರಟ್ಟಿ ಅವರು ತಾವು ಕರೆ ಮಾಡಿರುವ ಮೊಬೈಲ್ ಫೋನ್ಅನ್ನು ಮಾಧ್ಯಮ ಪ್ರತಿನಿಧಿಗಳಿಗೆ ತೋರಿಸಿದರು.
ಈ ಪ್ರಕರಣವನ್ನು ಬಗೆಹರಿಸಬೇಕು. ಬಗೆಹರಿಯದಿದ್ದರೆ ಇತಿಹಾಸದಲ್ಲಿ ಹಾಗೆಯೇ ಉಳಿಯುತ್ತದೆ. ಈ ಜಟಾಪಟಿ ಸದನ ಮುಗಿದ ಮೇಲೆ ಆಗಿದೆ. ಒಂದು ವೇಳೆ ಸದನದಲ್ಲಿಯೇ ಆಗಿದ್ದರೆ ಅಲ್ಲಿಯೇ ಬಗೆಹರಿಸುತ್ತಿದ್ದೆ ಎಂದು ತಿಳಿಸಿದರು.