

ಹುಬ್ಬಳ್ಳಿ: ಸಂಸದ ಪ್ರಜ್ವಲ್ ರೇವಣ್ಣ ಅವರದೆನ್ನಲಾದ ಅಶ್ಲೀಲ ವಿಡಿಯೋ ವಿಚಾರದಲ್ಲಿ ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಹೇಳಿದಕ್ಕೆ ನನ್ನ ಸಹಮತವಿದೆ ಎಂದು ಮಾಜಿ ಸಚಿವ ಸಿ.ಟಿ. ರವಿ ಹೇಳಿದರು.
ನಗರದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಚುನಾವಣೆಯಲ್ಲಿ ಒಳ್ಳೆಯ ವಿಚಾರಗಳು ಪರಿಣಾಮ ಬೀರಿದಂತೆ ಕೆಟ್ಟ ಘಟನೆಗಳೂ ಪರಿಣಾಮ ಬೀರಲಿವೆ ಎಂದು ಸ್ಪಷ್ಟವಾಗಿ ಹೇಳದೇ ಜಾರಿಕೊಂಡರು. ಈ ಘಟನೆ ಕುರಿತು ಹೆಚ್ಚಿಗೆ ಮಾತನಾಡುವುದಿಲ್ಲವೆಂದರು.
ಗ್ಯಾರಂಟಿಗಳ ಬಗ್ಗೆ ಕಾಂಗ್ರೆಸ್ ಪೇಟೆಂಟ್ ತೆಗೆದುಕೊಂಡಂತೆ ವರ್ತಿಸುತ್ತಿವೆ. ಈ ಶಬ್ದಕ್ಕೆ ಅಪ್ಪ-ಅಮ್ಮ ತಾನೇ ಎಂಬಂತೆ ವರ್ತಿಸುತ್ತಿವೆ. ಈ ಗ್ಯಾರಂಟಿಗಳು ಉದ್ಧರಣೆಯಲ್ಲಿ ತೀರ್ಥ ಕೊಟ್ಟಂತೆ ಎಂದರು.
ಮುಸ್ಲಿಮರ ಮೀಸಲಾತಿಯನ್ನು ಒಬಿಸಿ ಪಟ್ಟಿಗೆ ಸೇರಿಸುವ ಕೆಲಸ ಮಾಡಿದ್ದರಲ್ಲ ಇದು ಸಮಂಜಸವೇ? ಮತಾಧಾರಿತ ಮೀಸಲಾತಿಯನ್ನು ಸಂವಿಧಾನ ಶಿಲ್ಪಿ ಡಾ. ಅಂಬೇಡ್ಕರ್ ವಿರೋಧಿಸಿದ್ದರು. ಇಡೀ ಮತವನ್ನೇ ಒಬಿಸಿಗೆ ಸೇರಿಸಿ ಎರಡೂ ಕಡೆಗೆ ಅನ್ಯಾಯ ಮಾಡಲು ಮುಖ್ಯಮಂತ್ರಿ ಸಿದ್ದರಾಮಯ್ಯ ಹೊರಟಿದ್ದಾರೆ ಎಂದು ಆರೋಪಿಸಿದರು.
ನೇಹಾ ಹಿರೇಮಠ ಪ್ರಕರಣದಲ್ಲಿ ಸಿಎಂ ಸಿದ್ದರಾಮಯ್ಯ ಅವರು ಡ್ಯಾಮೇಜ್ ಕಂಟ್ರೋಲ್ ಮಾಡಲು ಪ್ರಯತ್ನಿಸುತ್ತಿದ್ದಾರೆ. ಆದರೆ, ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಮಾದರಿಯಲ್ಲಿ ನ್ಯಾಯ ಬೇಕು. ಆದರೆ, ಸಿದ್ದರಾಮಯ್ಯ ಅವರ ಟ್ರಾೃಕ್ ರೆಕಾರ್ಡ್ ನೋಡಿದರೆ ಕ್ರಿಮಿನಲ್, ಕಮ್ಯುನಲ್ ಕಡೆಗೆ ಇರುವುದು ಸ್ಪಷ್ಟವಾಗಿದೆ ಎಂದರು.
ಶಾಸಕ ಮಹೇಶ ಟೆಂಗಿನಕಾಯಿ, ಪ್ರಮುಖರಾದ ಗುರು ಪಾಟೀಲ, ದತ್ತಮೂರ್ತಿ ಕುಲಕರ್ಣಿ ಇತರರು ಇದ್ದರು.