

ಬೆಂಗಳೂರು: ಕರೊನಾ ಜನರನ್ನಷ್ಟೇ ಗಾಬರಿ ಬೀಳಿಸಿಲ್ಲ, ಸರ್ಕಾರದ ಬೊಕ್ಕಸವನ್ನೂ ಖಾಲಿ ಮಾಡುತ್ತಿದೆ. ಆಳುವವರಿಗೆ ದಿನೇದಿನೆ ಆತಂಕ ಹೆಚ್ಚಿಸುತ್ತಿದೆ. ಇಂಥ ಸಂದರ್ಭದಲ್ಲಿ ಬೊಕ್ಕಸ ತುಂಬಿಕೊಳ್ಳಲು ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ವಿಶೇಷ ಪ್ರಯತ್ನಕ್ಕೆ ಕೈಹಾಕಿವೆ.
ಇದೇ ವೇಳೆ ಕಾಪೋರೇಟ್ ಕಂಪನಿಗಳ ಸಾಂಸ್ಥಿಕ ಸಾಮಾಜಿಕ ಜವಾಬ್ದಾರಿ ನಿಧಿಯನ್ನು ಕರೊನಾ ನಿರ್ವಹಣೆಗೆ ಬಳಸಿಕೊಳ್ಳಲು ಕೇಂದ್ರ ಸರ್ಕಾರ ಆಸಕ್ತಿ ತೋರಿಸಿದೆ. ಜತೆಗೆ ರಾಜ್ಯ ಸರ್ಕಾರದ ಮುಖ್ಯಮಂತ್ರಿ ಪರಿಹಾರ ನಿಧಿಗೆ ಸಿಎಸ್ಆರ್ ಬಳಸಿಕೊಳ್ಳಲು ಬರಲ್ಲ ಎಂದು ಏ.10ರಂದು ಸ್ಪಷ್ಟವಾಗಿ ತಿಳಿಸಿದೆ. ಕೇಂದ್ರದ ಈ ತೀರ್ವನದ ಬಗ್ಗೆ ಕರ್ನಾಟಕ ಸೇರಿ ವಿವಿಧ ರಾಜ್ಯಗಳಲ್ಲಿ ವ್ಯತಿರಿಕ್ತ ಅಭಿಪ್ರಾಯ ವ್ಯಕ್ತವಾಗಿದೆ ಎಂದು ಉನ್ನತ ಮೂಲಗಳು ತಿಳಿಸಿವೆ.
‘ವಿಜಯವಾಣಿ’ ಜತೆ ಅನಿಸಿಕೆ ಹಂಚಿಕೊಂಡ ರಾಜ್ಯದ ಹಿರಿಯ ಅಧಿಕಾರಿಯೊಬ್ಬರು, ಸಿಎಸ್ಆರ್ ನಿಧಿಯನ್ನು ರಾಜ್ಯವೂ ಬಳಸಿಕೊಳ್ಳಲು ಅವಕಾಶವಿದ್ದರೆ ಚೆನ್ನಾಗಿತ್ತು. ಈ ಬಗ್ಗೆ ಕೇಂದ್ರದೊಂದಿಗೆ ಚರ್ಚೆ ಮಾಡಲಾಗುತ್ತದೆ ಎಂದಿದ್ದಾರೆ.
ಲಾಭ-ನಷ್ಟ ಲೆಕ್ಕಾಚಾರ: ಕಾಯ್ದೆ ಪ್ರಕಾರ, ನಿರ್ದಿಷ್ಟ ಉದ್ದೇಶಕ್ಕೆ ಮೀಸಲಿಟ್ಟ ಹಣವನ್ನು ತುರ್ತು ಸಂದರ್ಭದಲ್ಲಿ ಕೇಂದ್ರ ಸರ್ಕಾರಕ್ಕೆ ನೀಡಲು ಅವಕಾಶ ಮಾಡಿಕೊಡಲಾಗಿದೆ. ಹಲವು ಕಂಪನಿಗಳು ಸಿಎಸ್ಆರ್ ನಿಧಿಯನ್ನು ಸಮರ್ಪಕವಾಗಿ ಬಳಸಿಕೊಂಡಿಲ್ಲ. ಅದನ್ನೆಲ್ಲ ಜಾಲಾಡುತ್ತಿದ್ದು, ಬಾಕಿ ಉಳಿದಿರುವ ನಿಧಿಯನ್ನು ಪ್ರಧಾನಿ ಕೇರ್ಸ್ ನಿಧಿಗೆ ನೀಡುವ ಮೂಲಕ ಸದ್ಬಳಕೆ ಮಾಡಿಕೊಳ್ಳಬಹುದು ಎಂಬುದು ಕೇಂದ್ರದ ಆಶಯ. ಜತೆಗೆ ಈ ನಿಧಿಗೆ ಕಾಪೋರೇಟ್ ಕಂಪನಿಗಳು ನೀಡುವ ಸಹಾಯವನ್ನು ಸಿಎಸ್ಆರ್ ಎಂದೇ ಪರಿಗಣಿಸಲು ನಿರ್ಧರಿಸಲಾಗಿದೆ.
ಕನಿಷ್ಠ 500 ಕೋಟಿ ರೂ. ನಿವ್ವಳ ಸಂಪತ್ತು ಹೊಂದಿದ, ವಾರ್ಷಿಕ 1 ಸಾವಿರ ಕೋಟಿ ರೂ. ಮತ್ತು ಅದಕ್ಕಿಂತ ಹೆಚ್ಚು ವಹಿವಾಟು ನಡೆಸಿ 5 ಕೋಟಿ ರೂ. ನಿವ್ವಳ ಲಾಭ ಮಾಡುವ ಕಂಪನಿಗಳು ಸಿಎಸ್ಆರ್ ನಿಧಿ ಖರ್ಚು ಮಾಡಬೇಕು. ಒಂದು ಅಂದಾಜಿನ ಪ್ರಕಾರ ದೇಶದಲ್ಲಿ ಕಳೆದ ಐದು ವರ್ಷದಲ್ಲಿ 77 ಸಾವಿರ ಕೋಟಿ ರೂ. ಸಿಎಸ್ಆರ್ ನಿಧಿ ವೆಚ್ಚ ಮಾಡಬೇಕಿತ್ತು. ಆದರೆ, 55 ಸಾವಿರ ಕೋಟಿ ರೂ. ಮಾತ್ರ ಖರ್ಚು ಮಾಡಲಾಗಿದೆ. ಈ ವ್ಯತ್ಯಾಸದ ಹಣವನ್ನು ಬಳಸಿ ವೈಯಕ್ತಿಕ ರಕ್ಷಣಾ ಕಿಟ್, ವೆಂಟಿಲೇಟರ್ ಸೇರಿ ವಿವಿಧ ಅಗತ್ಯತೆ ನೀಗಿಸಿಕೊಳ್ಳಲು ಕೇಂದ್ರ ಸರ್ಕಾರ ಉದ್ದೇಶಿಸಿದೆ. ಇದೇ ವೇಳೆ ರಾಜ್ಯದ ಆಶಯ ಬೇರೆ ರೀತಿಯದ್ದಾಗಿದೆ. ಈಗ ರಾಜ್ಯ ಸರ್ಕಾರಗಳು ಕಾಪೋರೇಟ್ ಕಂಪನಿಗಳಿಗೆ ದೇಣಿಗೆ ಕೇಳಿದಾಗ ಅವು ನಿರಾಕರಿಸದೆ ಕೆಲವು ಲಕ್ಷ ಅಥವಾ ಒಂದೆರೆಡು ಕೋಟಿ ನೀಡಿ ಜವಾಬ್ದಾರಿ ಮೆರೆಯುತ್ತಿವೆ. ನಿರ್ದಿಷ್ಟ ತೆರಿಗೆ ವಿನಾಯಿತಿ ಪಡೆಯುತ್ತಿವೆ. ಒಂದು ವೇಳೆ ರಾಜ್ಯ ಸರ್ಕಾರವೂ ಸಿಎಸ್ಆರ್ ನಿಧಿ ಬಳಸಿಕೊಳ್ಳಲು ಅವಕಾಶ ಸಿಕ್ಕರೆ ಹೆಚ್ಚಿನ ಅನುಕೂಲವಾಗುತ್ತದೆ ಎಂಬ ಅಭಿಪ್ರಾಯವಿದೆ.