

ಶಿವಮೊಗ್ಗ: ಸರ್ಕಾರಿ ಶಾಲೆಗಳ ಮೂಲ ಸೌಕರ್ಯಗಳ ಅಭಿವೃದ್ಧಿ, ಆಧುನಿಕ ಪಠ್ಯ ಹಾಗೂ ಪಠ್ಯೇತರ ವಸ್ತುಗಳ ಪೂರೈಕೆಗೆ ಆ ಶಾಲೆಗಳ ಹಳೆಯ ವಿದ್ಯಾರ್ಥಿಗಳು, ಸಂಘ ಸಂಸ್ಥೆಗಳು, ಕಾರ್ಪೋರೇಟ್ ಕಂಪನಿಗಳು ಕೈ ಜೋಡಿಸಬೇಕು ಎಂಬ ಉದ್ದೇಶದಿಂದ ನಮ್ಮ ಶಾಲೆ ನಮ್ಮ ಜವಾಬ್ದಾರಿ ಕಾರ್ಯಕ್ರಮ ರೂಪಿಸಲಾಗಿದೆ ಎಂದು ಪ್ರಾಥಮಿಕ ಶಿಕ್ಷಣ ಸಚಿವ ಮಧು ಬಂಗಾರಪ್ಪ ತಿಳಿಸಿದರು.
ಕೆಲವು ಕಾರ್ಪೋರೇಟ್ ಕಂಪನಿಗಳು ನಮ್ಮ ರಾಜ್ಯದಲ್ಲಿ ಹೆಚ್ಚಿನ ವಹಿವಾಟು ನಡೆಸುತ್ತಿದ್ದರೂ ಸಿಎಸ್‌ಆರ್ ನಿಧಿಯನ್ನು ಬೇರೆ ರಾಜ್ಯಗಳಲ್ಲಿ ಖರ್ಚು ಮಾಡುತ್ತಿರುವುದು ಬೇಸರದ ಸಂಗತಿ. ರಾಜ್ಯದಲ್ಲಿರುವ ಕಂಪನಿಗಳು ಅವುಗಳ ಪಾಲಿನ ಸಿಎಸ್‌ಆರ್ ನಿಧಿಯನ್ನು ಇಲ್ಲಿಯ ಶಾಲೆಗಳ ಅಭಿವೃದ್ಧಿಗೆ ಬಳಸಲಿ ಎಂದು ಒತ್ತಾಯಿಸಿದರು.
ಕೈಗಾರಿಕೋದ್ಯಮಿಗಳು, ಸಂಘ ಸಂಸ್ಥೆಗಳ ಪದಾಧಿಕಾರಿಗಳು, ವಿವಿಧ ಸಂಘಟನೆಗಳ ಪ್ರಮುಖರೊಂದಿಗೆ ಸೋಮವಾರ ನಮ್ಮ ಶಾಲೆ ನಮ್ಮ ಜವಾಬ್ದಾರಿ ಹಾಗೂ ಸಿಎಸ್‌ಆರ್ ನಿಧಿ ಬಳಕೆ ಕುರಿತು ಸಭೆ ನಡೆಸಿದ ಅವರು, ರಾಜ್ಯದಲ್ಲಿ ಸುಮಾರು ಎರಡು ಸಾವಿರ ಕೋಟಿ ರೂ. ಸಿಎಸ್‌ಆರ್ ನಿಧಿಯನ್ನು ಸರ್ಕಾರಿ ಶಾಲೆಗಳ ಅಭಿವೃದ್ಧಿಗೆ ಪಡೆಯುವ ಪ್ರಯತ್ನ ನಡೆಸಲಾಗುತ್ತಿದೆ ಎಂದು ಹೇಳಿದರು.
ರಾಜ್ಯದಲ್ಲಿ ಒಟ್ಟು 76 ಸಾವಿರ ಸರ್ಕಾರಿ, ಅನುದಾನಿತ ಹಾಗೂ ಖಾಸಗಿ ಶಾಲಾ ಕಾಲೇಜುಗಳಿವೆ. ಒಟ್ಟು 1.8 ಕೋಟಿ ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ. ಸರ್ಕಾರಿ ಶಾಲೆಗಳ ಅಭಿವೃದ್ಧಿಗೆ ಎಲ್ಲರೂ ಒಗ್ಗೂಡಲು ಹಳೆಯ ವಿದ್ಯಾರ್ಥಿಗಳ 36 ಸಾವಿರ ವಾಟ್ಸಾಪ್ ಗಂಪುಗಳನ್ನು ರಚಿಸಲಾಗಿದೆ ಎಂದು ಮಾಹಿತಿ ನೀಡಿದರು.
ಸಿಎಂ ಸಿದ್ದರಾಮಯ್ಯ ತಮ್ಮ ವೇತನದಲ್ಲಿ 10 ಲಕ್ಷ ರೂ. ನೀಡಿದ್ದಾರೆ. ಅವರು ಓದಿದ ಶಾಲೆಯನ್ನು ಅಭಿವೃದ್ಧಿಪಡಿಸಲಾಗಿದೆ. ನನ್ನ ವೇತನದಲ್ಲಿ 10 ಲಕ್ಷ ರೂ. ದೇಣಿಗೆ ನೀಡಿ, ಮಾಜಿ ಸಿಎಂ ಬಂಗಾರಪ್ಪ ವ್ಯಾಸಂಗ ಮಾಡಿದ್ದ ಕುಬಟೂರು ಶಾಲೆ ಅಭಿವೃದ್ಧಿಪಡಿಸಲಾಗಿದೆ. ಅಜೀಂ ಪ್ರೇಂಜೀ ಫೌಂಡೇಶನ್‌ನಿಂದ 1,591 ಕೋಟಿ ರೂ. ನೀಡಲಾಗಿದೆ. ಇದರಲ್ಲಿ ಸರ್ಕಾರಿ ಶಾಲೆ ಮಕ್ಕಳಿಗೆ ಉಚಿತವಾಗಿ ಮೊಟ್ಟೆ ವಿತರಿಸಲಾಗುತ್ತಿದೆ ಎಂದರು.
ರಾಜ್ಯ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ವರ್ಗ, ಅಲೆಮಾರಿಗಳ ಅಭಿವೃದ್ಧಿ ನಿಗಮದ ಅಧ್ಯಕ್ಷೆ ಪಲ್ಲವಿ, ಕಾಡಾ ಅಧ್ಯಕ್ಷ ಡಾ.ಅಂಶುಮಂತ್, ಎಂಎಡಿಬಿ ಅಧ್ಯಕ್ಷ ಆರ್.ಎಂ.ಮಂಜುನಾಥ ಗೌಡ, ಜಿಲ್ಲಾ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ಚಂದ್ರಭೂಪಾಲ್, ಜಿಲ್ಲಾಧಿಕಾರಿ ಗುರುದತ್ತ ಹೆಗಡೆ, ಜಿಪಂ ಸಿಇಒ ಎನ್.ಹೇಮಂತ್ ಮುಂತಾದವರು ಉಪಸ್ಥಿತರಿದ್ದರು.