

ಗೋಕರ್ಣ: ಪ್ರವಾಸೋದ್ಯಮ ಅಭಿವೃದ್ಧಿಗೆ ಸಾರ್ವಜನಿಕವಾಗಿ ವ್ಯಾಪಿಸಿರುವ ಕಸ-ಕೊಳಚೆ ಮತ್ತು ಹೊಲಸುಗಳು ಬಹು ದೊಡ್ಡ ವೇಗ ನಿಯಂತ್ರಕಗಳಾಗಿವೆ. ಪ್ರವಾಸಿ ತಾಣದಲ್ಲಿನ ಹಾಳಾದ ರಸ್ತೆಗಳು, ಕಲುಷಿತವಾದ ಜಲಮೂಲ ಮತ್ತು ಇವೆರಡಕ್ಕಿಂತ ಮುಖ್ಯವಾಗಿ ಎಲ್ಲೆಡೆ ವ್ಯಾಪಿಸಿಕೊಂಡಿರುವ ಬಗೆ ಬಗೆಯ ಅನೈರ್ಮಲ್ಯ ಆಕರ್ಷಿತ ಮತ್ತು ನೈಸರ್ಗಿಕ ಎನ್ನಲಾಗುವ ತಾಣಗಳು ಕೂಡ ಪ್ರವಾಸಿಗರಿಂದ ದೂರಾಗುವ ವಿಪತ್ತಿಗೆ ಬಲಿಯಾಗುವ ಸಾಧ್ಯತೆಗಳು ದಟ್ಟವಾಗುತ್ತವೆ.
ಕಳೆದ ಮೂರು ದಶಕಗಳಲ್ಲಿ ಗೋಕರ್ಣದ ಪ್ರಮುಖ ಸ್ಥಳಗಳಲ್ಲಿ ಬೆಳೆಯುತ್ತ ಸಾಗಿರುವ ನಾನಾ ರೂಪದ ಮಾಲಿನ್ಯಗಳು ನಿಧಾನ ಗತಿಯಲ್ಲಿ ಇಲ್ಲಿನ ಪ್ರವಾಸೋದ್ಯಮ ಬೆಳವಣಿಗೆಗೆ ಕಂಟಕಪ್ರಾಯವಾಗುವ ಸಾಧ್ಯತೆಯ ಬಗ್ಗೆ ಈಗಾಗಲೇ ಆತಂಕಗಳು ಕೇಳಿ ಬರುತ್ತಿವೆ.
90ರ ದಶಕದಿಂದ ಏರುಗತಿಯಲ್ಲಿ ಬೆಳೆಯುತ್ತ ಸಾಗಿದ ಪ್ರವಾಸಿಗರ ಆಗಮನ ಅದೇ ಗತಿಯಲ್ಲಿ ಅಸ್ವಚ್ಛತೆಗೂ ಮೂಲವಾಯಿತು.ಬೆಳೆಯುತ್ತ ಬಂದ ಇಲ್ಲಿನ ಮಾಲಿನ್ಯ ನಿಗ್ರಹಕ್ಕೆ 2020ರವರೆಗೂ ಸರ್ಕಾರದಿಂದ ಗಮನಾರ್ಹವಾದ ಯಾವ ಯೋಜನೆ ಅಥವಾ ಕ್ರಮಗಳ ಪ್ರಯತ್ನವಾಗಲಿಲ್ಲ.
90ರ ದಶಕದಲ್ಲಿ ಅಂದಿನ ಸಂಸದರಾಗಿದ್ದ ಮಾರ್ಗರೇಟ್ ಆಳ್ವಾ ಅವರು ಪ್ರವಾಸಿಗರು ಮತ್ತು ಯಾತ್ರಿಕರು ಮುಖ್ಯವಾಗಿ ಭೇಟಿ ಕೊಡುವ ರಥಬೀದಿಯಲ್ಲಿ 20 ಲಕ್ಷರೂ. ವೆಚ್ಚದ ಯೋಜನೆ ಮೂಲಕ ತ್ಯಾಜ್ಯಗಳನ್ನು ಸಮುದ್ರದ ಸಂಗಮ ನಾಲೆಗೆ ಮುಟ್ಟಿಸಲು ಕೊಳವೆ ವ್ಯವಸ್ಥೆ ಮಾಡಿಕೊಟ್ಟಿದ್ದರು. ಇದರ ತರುವಾಯ ನೈರ್ಮಲ್ಯೀಕರಣದ ಯಾವ ಪ್ರಯತ್ನವೂ ಗೋಕರ್ಣದಲ್ಲಿ ನಡೆಯಲಿಲ್ಲ.
ಯೋಜನೆಗಳ ರೂವಾರಿಗಳಿವರು: ಸಮಗ್ರ ಗೋಕರ್ಣ ನೈರ್ಮಲ್ಯೀಕರಣದ ಬಗ್ಗೆ ಮೊಟ್ಟ ಮೊದಲು ಗಂಭೀರವಾದ ಪ್ರಯತ್ನಕ್ಕೆ ಕಾರಣರಾದವರು 2020ರಲ್ಲಿ ಅಂದಿನ ಜಿಪಂ ಮುಖ್ಯ ಕಾರ್ಯ ನಿರ್ವಹಣಾಧಿಕಾರಿಗಳಾಗಿದ್ದ ಎಂ.ರೋಷನ್. ಇಲ್ಲಿನ ಎಲ್ಲ ರಾಜಕಾಲುವೆಗಳು ಮತ್ತು ಸಮುದ್ರದ ಸಂಗಮ ನಾಲೆಗಳಿಗೆ ಹಲವು ಬಾರಿ ಭೇಟಿಯಿತ್ತು ಸರ್ಕಾರದ ಸ್ತರದಲ್ಲಿ ಇದರ ಬಗ್ಗೆ ಗಮನ ಸೆಳೆದು ಇವುಗಳ ಸ್ವಚ್ಛತೆಗಾಗಿ ಪ್ರಪ್ರಥಮ ರೂಪುರೇಷೆಯ ಸಿದ್ಧತೆ ಮಾಡಿದ್ದರು.
ಆ ನಂತರ ಈಗಿನ ಜಿಪಂ ಸಿಇಒ ಈಶ್ವರ ಕಾಂದೂ ಅವರು ಹಳೇ ಯೋಜನೆಯನ್ನು ಮುಂದುವರಿಸಿ, ಖ್ಯಾತ ಖಾಸಗಿ ಸಿಡಿಡಿ ಸಂಸ್ಥೆಯಿಂದ ಇಲ್ಲಿನ ಎಲ್ಲ ರಾಜಕಾಲುವೆ ಮತ್ತು ಸಂಗಮ ನಾಲೆಯ ಶುದ್ಧೀಕರಣಕ್ಕೆ ಸಾರ್ವಕಾಲಿಕವಾಗಿ ಉಳಿಯ ಬಹುದಾದಂತಹ ವಿಸõತವಾದ ಸರ್ವೆ ಮೂಲಕ ಯೋಜನೆಯ ನೀಲನಕ್ಷೆಯನ್ನು ಸಿದ್ಧಗೊಳಿಸಿದರು.
ಗೋಕರ್ಣದ ಸಂಪೂರ್ಣ ಸ್ವಚ್ಛತೆಯ ‘ಗ್ರೀನ್ ಗೋಕರ್ಣ’ ಯೋಜನೆ ಈಶ್ವರ ಕಾಂದು ಅವರ ಪರಿಕಲ್ಪನೆಯ ಸಾಧನೆಯಾಗಿದೆ.
ಗ್ರೀನ್ ಗೋಕರ್ಣ ಅಂತರ್ಗತ ಮೂರು ಬೃಹತ್ ಯೋಜನೆಗೆ ರೂಪುರೇಷೆ ಸಿದ್ಧಪಡಿಸಲಾಯಿತು. ಪಂಚಾಯಿತಿ ವತಿಯಿಂದ ಘನ ತ್ಯಾಜ್ಯ ನಿರ್ವಹಣಾ ಘಟಕ, ಮಲತ್ಯಾಜ್ಯ ಸಂಸ್ಕರಣೆ ಮತ್ತು ರಾಜಕಾಲುವೆಗಳ ಸ್ವಚ್ಛತೆಗಾಗಿ ಪ್ರತ್ಯೇಕ ಯೋಜನೆಗಳನ್ನು ಜಿಪಂ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯೀಕರಣ ಇಲಾಖೆ ಮೂಲಕ ಜಾರಿಗೆ ತರುವ ಪ್ರಯತ್ನ ಮೊದಲ ಬಾರಿಗೆ ನಡೆಯಿತು.
ಇದೇ ವೇಳೆ ಸ್ಥಳೀಯ ಶಾಸಕ ದಿನಕರ ಶೆಟ್ಟಿ ಅವರ ಪ್ರಯತ್ನದಿಂದ ಸರ್ಕಾರದ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಪ್ರಧಾನ ಕಾರ್ಯದರ್ಶಿ ಎಲ್.ಕೆ. ಅತೀಕ್ ಅವರನ್ನು ಎಲ್ಲ ಯೋಜನಾ ಸ್ಥಳಗಳ ಭೇಟಿಗೆ ಆಹ್ವಾನಿಸಲಾಯಿತು. ಇವರ ಭೇಟಿಯಿಂದಾಗಿ ತ್ಯಾಜ್ಯ ಘಟಕಗಳಿಗೆ ಅಗತ್ಯವಿದ್ದ ಅಂದಾಜು ಒಂದು ಹೆಕ್ಟೇರ್ ಭೂಮಿ ಅರಣ್ಯ ಇಲಾಖೆಯಿಂದ ತ್ವರಿತವಾಗಿ ಹಸ್ತಾಂತರವಾಗುವಂತಾಯಿತು. ಇದರ ಜತೆಗೆ ಈ ಎಲ್ಲ ಗ್ರೀನ್ ಗೋಕರ್ಣ ಯೋಜನೆಗೆ ವಿಶ್ವ ಬ್ಯಾಂಕ್ನಿಂದ 8 ಕೋಟಿ ರೂ.ಗೂ ಅಧಿಕ ಅನುದಾನ ಪಡೆಯುವಲ್ಲಿ ಜಿಪಂ ಸಿಇಒ ಅವರ ಪ್ರಯತ್ನ ಸಫಲವಾಯಿತು. ಈ ಅನುದಾನದ ಪೈಕಿ 5 ಕೋಟಿ ರೂ. ಜಿಲ್ಲೆಯಲ್ಲಿ ಮೊಟ್ಟ ಮೊದಲ ಆಧುನಿಕ ಯಾಂತ್ರೀಕೃತ ಘನ ತ್ಯಾಜ್ಯ ಮತ್ತು ಮಲತ್ಯಾಜ್ಯ ಘಟಕ ನಿರ್ವಣಕ್ಕೆ ಒದಗಿಸಲಾಗಿದೆ. ಇದಕ್ಕಾಗಿ ಈಗಾಗಲೇ ಯೋಜನೆ ಪೂರ್ಣಗೊಂಡಿದ್ದು ಘಟಕ ನಿರ್ವಣಕ್ಕಾಗಿ ಟೆಂಡರ್ ಪ್ರಕ್ರಿಯೆ ಜಾರಿಯಲ್ಲಿದೆ.
ಇಲ್ಲಿನ 5.5 ವ್ಯಾಪ್ತಿಯಲ್ಲಿನ ವಿವಿಧ ಹಳ್ಳ(ರಾಜಕಾಲುವೆ) ನೈರ್ಮಲ್ಯೀಕರಣಕ್ಕಾಗಿ ಮೂರು ಹಂತದ ಕ್ರಿಯಾ ಯೋಜನೆಯನ್ನು ರೂಪಿಸಲಾಗಿದ್ದು ಇದಕ್ಕಾಗಿ ವಿಶ್ವ ಬ್ಯಾಂಕ್ ನೆರವಿನ 3 ಕೋಟಿ 9 ಸಾವಿರ ರೂ. ಅಂದಾಜು ವೆಚ್ಚ ನಿಗದಿಸಲಾಗಿದೆ. ಈ ಯೋಜನೆ ಪ್ರಕಾರ ರಾಜಕಾಲುವೆ ಆರು ಆಯಕಟ್ಟಿನ ಜಾಗದಲ್ಲಿ ಸದೃಢವಾದ ಫೈಬರ್ ನೆಟ್ಗಳನ್ನು ಅಳವಡಿಸಿ ಘನ ತ್ಯಾಜ್ಯಗಳನ್ನು ಅಲ್ಲಿಯೇ ನಿಯಂತ್ರಿಸಿ ಅವುಗಳನ್ನು ಸಂಗ್ರಹಿಸುವುದು. ಎಲ್ಲ ಕಾಲುವೆಗಳ ಹೂಳನ್ನು ಸ್ವಚ್ಛಗೊಳಿಸಿ ಜಲತ್ಯಾಜ್ಯಗಳ ಶುದ್ಧೀಕರಣ, ಅಂತಿಮ ಹಂತದಲ್ಲಿ ಸಂಗಮ ನಾಲೆಯನ್ನು ತಲಪುವ ಈ ಕಾಲುವೆಗಳ ಜಲತ್ಯಾಜ್ಯದ ಪೂರ್ಣ ಶುದ್ಧೀಕರಣಕ್ಕಾಗಿ ಪ್ರತ್ಯೇಕ ಸಂಸ್ಕರಣಾ ಘಟಕವನ್ನು ಸಮುದ್ರ ತೀರದ 9 ಗುಂಟೆ ಸ್ಥಳದಲ್ಲಿ ನಿರ್ವಿುಸಲಾಗುವುದು. ಇವುಗಳ ಜತೆಗೆ ಸಮುದ್ರದ ಉಬ್ಬರದ ವೇಳೆ ಸಮುದ್ರದ ನೀರು ಸಂಗಮ ನಾಲೆಯ ಒಳ ಸೇರದಂತೆ ತಡೆಯಲು ನೂತನ ತಡೆಗೋಡೆ ನಿರ್ವಿುಸಿ ಒಳಗಿನ ನೀರು ಮಾತ್ರ ಹೊರ ಹೋಗುವ ವ್ಯವಸ್ಥೆ ಮಾಡುವ ಜತೆಗೆ ಸಮುದ್ರದ ನೀರು ಒಳಗೆ ಬಾರದಂತೆ ತಡೆಯಲಾಗುವುದು. ಈ ಯೋಜನೆ ರೂಪಗೊಂಡು ವಿಶ್ವ ಬ್ಯಾಂಕ್ ನೆರವನ್ನು ಪಡೆದಿದ್ದರೂ ಕರಾವಳಿ ವಲಯ ನಿಯಂತ್ರಣ(ಸಿಆರ್ಜಡ್) ಕಾನೂನು ಯೋಜನೆಗೆ ಅಡ್ಡಿಯಾಗಿದೆ. ಹೀಗಾಗಿ ಯೋಜನಾ ಕಾಮಗಾರಿ ಮತ್ತು ಟೆಂಡರ್ ಪ್ರಕ್ರಿಯೆಗೆ ವಿಳಂಬ ಉಂಟಾಗಿದೆ.
ಒಟ್ಟಾರೆ ಕಳೆದ ನಾಲ್ಕು ವರ್ಷಗಳ ಸತತ ಪ್ರಯತ್ನಗಳಿಂದ ಈ ಎಲ್ಲ ಮೂರು ಪ್ರತ್ಯೇಕ ಯೋಜಿತ ಕಾಮಗಾರಿಗಳು ಪ್ರಾರಂಭವಾದಲ್ಲಿ ಗೋಕರ್ಣದ ನೈರ್ಮಲ್ಯೀಕರಣದ ಹೊಸ ಶಕೆ ಪ್ರಾರಂಭವಾಗುವ ನಿರೀಕ್ಷೆ ಬಲಗೊಳ್ಳಲಿದೆ.
ದೇಶದ ಪ್ರಮುಖ ಯಾತ್ರಾ ಮತ್ತು ಪ್ರವಾಸಿ ತಾಣ ಗೋಕರ್ಣದ ಕಸ-ಕಲ್ಮಷಗಳ ನಿವಾರಣೆಗಾಗಿ ವಿಶ್ವ ಬ್ಯಾಂಕ್ ಸಹಾಯ ಒದಗಿ ಬಂದಿರುವುದು ಒಂದು ಮಹತ್ ಸಾಧನೆಯಾಗಿದೆ. ಸಮುದ್ರ ತೀರದ ಸಂಗಮ ಪ್ರದೇಶದ ಸ್ವಚ್ಛತೆಗಾಗಿ ಈ ಹಿಂದಿನ ಸರ್ಕಾರದಿಂದ 90 ಲಕ್ಷ ರೂ. ಅನುದಾನ ಮಂಜೂರಾಗಿದೆ. ಸಂಗಮ ಮತ್ತು ರಾಜಕಾಲುವೆ ಕಾಮಗಾರಿಗೆ ಸಿಆರ್ಜಡ್ ಕಾಯ್ದೆ ತೊಡಕಾಗಿದೆ. ಇದನ್ನು ನಿವಾರಿಸಿ ಆದಷ್ಟು ತ್ವರಿತವಾಗಿ ಕಾಮಗಾರಿ ಪ್ರಾರಂಭಕ್ಕೆ ಪ್ರಯತ್ನಿಸುವ ಅಗತ್ಯವಿದೆ. ದಿನಕರ ಶೆಟ್ಟಿ, ಶಾಸಕರು