

ಮಂಗಳೂರು: ಕೆಲದಿನಗಳ ಹಿಂದೆ ಉಳ್ಳಾಲದಲ್ಲಿ ಕ್ರಿಪ್ಟೊ ಕರೆನ್ಸಿ ಏಜೆನ್ಸಿ ನಡೆಸುತ್ತಿದ್ದ ಯುವಕನ ಸೇರಿದಂತೆ ಇಬ್ಬರನ್ನು ಹಣಕ್ಕಾಗಿ ಅಪಹರಣ ಮಾಡಿದ್ದ ಕೇರಳದ ತಂಡವನ್ನು ಮಂಗಳೂರು ಪೊಲೀಸರು ಬಂಧಿಸಿದ್ದಾರೆ.
ಮೊಹಮ್ಮದ್ ಅಶ್ರಫ್ ಎಂಬಾತನನ್ನು ಏ.೨೨ರಂದು ಮಧ್ಯಾಹ್ನ ೧.೩೦ಕ್ಕೆ ತಲಪಾಡಿ ಕೆ.ಸಿ.ರೋಡ್ ಸಮೀಪದ ಶಾಲೆಯೊಂದರ ಬಳಿಯಿಂದ ಅಪಹರಣ ಮಾಡಲಾಗಿತ್ತು. ಪ್ರಕರಣದ ಸೂತ್ರಧಾರ. ಕಾಸರಗೋಡಿನ ಅಹಮ್ಮದ್ ಇಕ್ಬಾಲ್, ಟಾರ್ಗೆಟ್ ಗ್ಯಾಂಗ್‌ನ ಇಲ್ಯಾಸ್ ಹತ್ಯಾ ಆರೋಪಿ ಉಮ್ಮರ್ ನವಾಫ್, ಶೇಕ್ ಮೊಹಮ್ಮದ್ ರಿಯಾಜ್, ಶಂಶೀರ್, ಯಾಕೂಬ್, ನೌಶಾದ್ ಹಾಗೂ ಸಯ್ಯದ್ ಮೊಹಮ್ಮದ್ ಕೌಸರ್ ಎಂಬ ೭ ಮಂದಿಯನ್ನು ಬಂಧಿಸಲಾಗಿದೆ ಎಂದು ಮಂಗಳೂರು ಪೊಲೀಸ್ ಆಯುಕ್ತ ಎನ್.ಶಶಿಕುಮಾರ್ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಇದೇ ಗ್ಯಾಂಗ್‌ನವರು ಅಶ್ರಫ್‌ನ ಮಿತ್ರ, ಮಂಜೇಶ್ವರದ ಜಾವಿದ್ ಎಂಬಾತನನ್ನೂ ಅಪಹರಿಸಿದ್ದರು, ಇಬ್ಬರನ್ನು ಕೂಡಾ ಮಂಜೇಶ್ವರ ಗೋವಿಂದ ಪೈ ಕಾಲೇಜು ಮೈದಾನದ ಬಳಿ, ಆ ಬಳಿಕ ಪೈವಳಿಕೆಯ ನಿರ್ಮಾಣ ಹಂತದ ಕಟ್ಟಡವೊಂದರಲ್ಲಿ ಇರಿಸಲಾಗಿತ್ತು. ಮೊದಲು ೨೫ ಲಕ್ಷ ರೂ. ಹಣ ಬೇಕೆಂದು ಅಪಹರಣಕಾರರು ಅಶ್ರಫ್‌ನ ಪತ್ನಿಗೆ ಫೋನ್ ಮೂಲಕ ಬೇಡಿಕೆ ಇರಿಸಿದ್ದರು, ಬಳಿಕ ಮಂಜೇಶ್ವರದಲ್ಲಿರುವ ಆತನ ಜಾಗವೊಂದರ ದಾಖಲೆಪತ್ರಗಳನ್ನು ನೀಡಬೇಕು, ಸಹಿಮಾಡಬೇಕು, ಚಿನ್ನಾಭರಣ ಹಾಗೂ ೫ಲಕ್ಷ ರೂ. ನೀಡಬೇಕು ಎಂದು ಒತ್ತಾಯಿಸಿದ್ದರು. ಇದೇ ರೀತಿ ಜಾವಿದ್‌ನ ಮನೆಯವರಿಗೆ ಕೂಡಾ ಬೇಡಿಕೆ ಇಟ್ಟಿದ್ದರು.
ಆದರೆ ದಾಖಲೆಪತ್ರ, ಹಣ, ಚಿನ್ನಾಭರಣ ನೀಡಿದ ಬಳಿಕವೂ ಇಬ್ಬರನ್ನೂ ಅಪಹರಣಕಾರರು ಬಿಡದ ಹಿನ್ನೆಲೆಯಲ್ಲಿ ಏ.೨೪ರಂದು ಉಳ್ಳಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಯಿತು. ಬಳಿಕ ಅಪಹರಣಕಾರರ ಕರೆಗಳನ್ನು ಟ್ರ್ಯಾಕ್ ಮಾಡಲಾಗಿದ್ದು ಸೋಮವಾರ ಬಂಧಿಸಲಾಗಿದೆ. ಅಶ್ರಫ್, ಜಾವಿದ್ ಇಬ್ಬರನ್ನೂ ಅಪಹರಣಕಾರರಿಂದ ರಕ್ಷಿಸಲಾಗಿದೆ.
ಸಾಲದ ಹಣಕ್ಕಾಗಿ ಕೃತ್ಯ?
ಆರೋಪಿ ಮಹಮ್ಮದ್ ಇಕ್ಬಾಲ್‌ನಿಂದ ಅಶ್ರಫ್ ವಹಿವಾಟಿಗೆಂದು ೯೦ ಲಕ್ಷ ರೂ. ನಷ್ಟು ಹಣ ಪಡೆದುಕೊಂಡಿದ್ದು ಅದನ್ನು ಹಿಂದಿರುಗಿಸಿರಲಿಲ್ಲ. ಅದಕ್ಕಾಗಿ ಹಣ ಪಡೆಯುವ ಉದ್ದೇಶದಿಂದ ಉಮೈದ್ ನವಾಫ್‌ಗೆ ಅಶ್ರಫ್‌ನನ್ನು ಹಾಗೂ ಆತನ ಮಿತ್ರ ಜಾವಿದ್‌ನನ್ನು ಅಪಹರಣ ಮಾಡುವುದಕ್ಕೆ ಇಕ್ಬಾಲ್ ನಿರ್ದೇಶಿಸಿದ್ದ. ನವಾಫ್ ವಿರುದ್ಧ ಕೊಲೆ, ಕೊಲೆಯತ್ನ, ದರೋಡೆಯಂತಹ ೧೦ಕ್ಕೂ ಅಧಿಕ ಪ್ರಕರಣಗಳು ದಾಖಲಾಗಿವೆ. ಸದ್ಯ ಕೋವಿಡ್ ಪಾಸಿಟಿವ್ ಆಗಿರುವ ಹಿನ್ನೆಲೆಯಲ್ಲಿ ಆತನನ್ನು ಪ್ರತ್ಯೇಕವಾಗಿ ಚಿಕಿತ್ಸೆ ನೀಡಲಾಗುತ್ತಿದೆ. ಕೋವಿಡ್ ಮುಕ್ತನಾದ ಬಳಿಕ ವಶಕ್ಕೆ ತೆಗೆದುಕೊಂಡು ತನಿಖೆ ಮುಂದುವರಿಸಲಾಗುವುದು ಎಂದು ಆಯುಕ್ತರು ತಿಳಿಸಿದ್ದಾರೆ.