

ಬೆಳಗಾವಿ: ಸವದತ್ತಿ ತಾಲೂಕಿನ ಸತ್ತಿಗೇರಿ ಗ್ರಾಮದ ಶ್ರೀ ಸಾಯಿನಾಥ ಸ್ಟೋನ್ ಕ್ರಷರ್‌ನಲ್ಲಿ ಅಕ್ರಮವಾಗಿ ಸಂಗ್ರಹಿಸಿದ್ದ ಅಪಾರ ಪ್ರಮಾಣದ ಜಿಲೆಟಿನ್ ಸ್ಫೋಟಕ ವಸ್ತುಗಳನ್ನು ಆಂತರಿಕ ಭದ್ರತಾ ವಿಭಾಗದ ಪೋಲಿಸರು ವಶಪಡಸಿಕೊಂಡಿದ್ದಾರೆ. ಕ್ರಷರ್ ಮ್ಯಾನೇಜರ್ ಬಸವರಾಜ್ ಮಹಾದೇವಪ್ಪ ಪಟ್ಟಣಶೆಟ್ಟಿ ಅವರನ್ನು ವಶಕ್ಕೆ ಪಡೆದು ವಿಚಾರಣೆ ಮುಂದುವರಿಸಿದ್ದಾರೆ.
ಖಚಿತ ಮಾಹಿತಿ ಮೇರೆಗೆ ಡಿ.23ರಂದು ಬುಧವಾರ ಆಂತರಿಕ ಭದ್ರತಾ ವಿಭಾಗದ ಪೊಲೀಸ್ ನಿರೀಕ್ಷಕ ಶಿವಾನಂದ ಅಂಬಿಗೇರ ನೇತೃತ್ವದಲ್ಲಿ ದಾಳಿ ನಡೆಸಿದ ತಂಡ 4 ಬಾಕ್ಸ್ ಜಿಲೆಟಿನ್ ಕಡ್ಡಿ, 8 ಬಂಡಲ್ ಇಡಿ ಕೇಬಲ್ ಮತ್ತು 1ಬ್ಲಾಸ್ಟಿಂಗ್ ಚಾರ್ಜರ್ ಬ್ಯಾಟರಿ ಸೇರಿ ಒಟ್ಟು 15,470 ರೂ.ಮೌಲ್ಯದ ವಸ್ತು ಜಪ್ತಿ ಮಾಡಿದ್ದಾರೆ.
ಪೊಲೀಸ್ ಸಿಬ್ಬಂದಿ ಪ್ರಶಾಂತ ಹಿರೇಮಠ, ಫಕ್ರುದ್ದೀನ್ ಖೊಂದುನಾಯ್ಕ, ಲೋಹಿತ ಅರೆಣ್ಣವರ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು. ಮುರಗೋಡ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ಆಂತರಿಕ ಭದ್ರತಾ ವಿಭಾಗದ ಉತ್ತರವಲಯದ ಉಸ್ತುವಾರಿ ಡಿ.ವೈ.ಎಸ್.ಪಿ ಅನಿಲಕುಮಾರ ಭೂಮರಡ್ಡಿ ತಿಳಿಸಿದ್ದಾರೆ.