ಕೃಷಿ ವಿಶ್ವವಿದ್ಯಾನಿಲಯ ತಪ್ಪಿಸುವ ಕೆಲಸ: ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ಆರೋಪ

07_01_Mdy_03(A(Minister N.Cheluvarayaswamy)
Published on

ಮಂಡ್ಯ: ಮಂಡ್ಯಕ್ಕೆ ಕೃಷಿ ವಿಶ್ವವಿದ್ಯಾನಿಲಯ ಪ್ರಾರಂಭಕ್ಕೆ ಅನುಮೋದನೆ ಸಿಕ್ಕಿದೆ. ಆದರೆ ಎಚ್.ಡಿ.ಕುಮಾರಸ್ವಾಮಿ, ಎಚ್.ಡಿ.ದೇವೇಗೌಡರು ಕೃಷಿ ವಿವಿ ಪ್ರಾರಂಭಕ್ಕೆ ನೇರವಾಗಿ ವಿರೋಧ ಮಾಡಲಾಗದೆ ಎಚ್.ಡಿ.ರೇವಣ್ಣ ಅವರನ್ನು ಮುಂದೆ ಬಿಟ್ಟಿದ್ದರು ಎಂದು ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ಆರೋಪಿಸಿದರು.

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಎಚ್.ಡಿ.ರೇವಣ್ಣ ಪ್ರತಿಭಟನೆ ಮಾಡಿ ಅಧಿವೇಶನದಲ್ಲೂ ವಿರೋಧ ಮಾಡಿದ್ದರು. ಇನ್ನೊಂದೆಡೆ ತಿಪ್ಪೇಸ್ವಾಮಿ ರಾಜ್ಯಪಾಲರಿಗೆ ಆಕ್ಷೇಪ ಪತ್ರ ಕೊಟ್ಟಿದ್ದರು. ತಿಪ್ಪೇಸ್ವಾಮಿ ಇದಾರೆ ಎಂದರೆ ಅಲ್ಲಿ ದೇವೇಗೌಡರಿದ್ದಾರೆ ಎಂಬುದು ಸ್ಪಷ್ಟ. ಮಂಡ್ಯ ಜಿಲ್ಲೆ ಮೇಲೆ ಎಚ್.ಡಿ.ಕುಮಾರಸ್ವಾಮಿ, ಎಚ್.ಡಿ.ದೇವೇಗೌಡರಿಗೆ ಏನೋ ಒಂದು ದ್ವೇಷ. ಯಾರಾದರೂ ದ್ವೇಷ ಮಾಡಲಿ, ನಾನು ಅಭಿವೃದ್ಧಿ ಪರ. ಕೃಷಿ ವಿವಿ ಸ್ಥಾಪನೆಗೆ ಕೈಮುಗಿದು ಮನವಿ ಮಾಡಿದ್ದೆನು. ಬಿಜೆಪಿಯವರು ಕೆಲ ಪ್ರಶ್ನೆ ಕೇಳಿದ್ದು ಬಿಟ್ಟರೆ ವಿರೋಧ ಮಾಡಿರಲಿಲ್ಲ. ಆದರೆ ಜೆಡಿಎಸ್ ನಾಯಕರು ನಡೆದುಕೊಂಡು ರೀತಿ ಜಿಲ್ಲೆಯ ಜನರ ವಿರುದ್ಧವಾಗಿತ್ತು ಎಂದರು.

ಎಚ್‌ಡಿಕೆ ಮಂಡ್ಯದಿಂದ ಸಂಸದರಾಗಿ ಕೇಂದ್ರ ಸಚಿವರಾಗಿದ್ದಾರೆ. ಅಧಿಕಾರ ಬಳಸಿ ಕೃಷಿ ವಿವಿ ತಪ್ಪಿಸುವ ಕೆಲಸ ಮಾಡಿದ್ದರು. ನಾನು ರಾಜ್ಯಪಾಲರಿಗೆ ಮನವರಿಕೆ ಮಾಡಿದೆ. ಮಂಡ್ಯ ಕೃಷಿ ಪ್ರಧಾನ ಜಿಲ್ಲೆ. ಇಲ್ಲಿನ ವಾತಾವರಣವೂ ಪೂರಕವಾಗಿದೆ ಎಂದು ಹೇಳಿದೆ. ನನ್ನ ಮನವಿಗೆ ಸ್ಪಂದಿಸಿ ರಾಜ್ಯಪಾಲರು ಒಪ್ಪಿಗೆ ಸೂಚಿಸಿದರು. ಅವರಿಗೆ ಧನ್ಯವಾದ ತಿಳಿಸುತ್ತೇನೆ. ಅಭಿವೃದ್ಧಿ ವಿಚಾರದಲ್ಲಿ ಕುಮಾರಸ್ವಾಮಿ ಏನೇ ಕೇಳಿದರೂ ಸಹಕಾರ ಕೊಡುತ್ತೇವೆ. ಕೇಂದ್ರ ಸರ್ಕಾರದ ಯೋಜನೆಗಳನ್ನ ತಂದರೆ ಅಗತ್ಯ ಸಹಕಾರ ಕೊಡುತ್ತೇವೆ. ಆದರೆ ಅವರು ಚಪಲಕ್ಕೆ ಮಾತನಾಡುತ್ತಾರೆ. ಅದನ್ನೆಲ್ಲ ನೋಡಿ ಸಾಕಾಗಿದೆ ಎಂದು ಟೀಕಿಸಿದರು.

ಭಾರತ ಪಾಕಿಸ್ತಾನ ಯುದ್ಧ ಸಾಧ್ಯತೆ ವಿಚಾರಕ್ಕೆ ಪ್ರತಿಕ್ರಿಯಿಸಿದ ಸಚಿವ ಸಿಆರ್‌ಎಸ್, ಕೇಂದ್ರದಲ್ಲಿ ಬಿಜೆಪಿ ಸರ್ಕಾರ ಅಧಿಕಾರದಲ್ಲಿದೆ. ಕೇಂದ್ರ ಏನು ನಿರ್ಧಾರ ಬೇಕಾದರೂ ತೆಗೆದುಕೊಳ್ಳಲಿ. ಒಬ್ಬರ ಪ್ರಾಣವೂ ಒಂದೇ ಸಾವಿರಾರು ಜನರ ಪ್ರಾಣಾನೂ ಒಂದೇ. ಪರಿಹಾರದ ಜತೆಗೆ ಕೇಂದ್ರ ಸರ್ಕಾರ ಮೃತರ ಕುಟುಂಬಸ್ಥರಿಗೆ ಉದ್ಯೋಗ ನೀಡಲಿ. ಜೀವನ ನಿರ್ವಹಣೆ ಮಾಡಲು ಕೇಂದ್ರ ಸರ್ಕಾರ ಉದ್ಯೋಗ ನೀಡಬೇಕು. ಮಾತ್ರವಲ್ಲದೆ ಇನ್ನು ಮುಂದೆ ಯಾವುದೇ ದಾಳಿಯಾಗದಂತೆ ಎಚ್ಚರಿಕೆ ವಹಿಸಲಿ. ಈ ನಿಟ್ಟಿನಲ್ಲಿ ಏನೇ ನಿರ್ಧಾರ ಮಾಡಿದರೂ ಬೆಂಬಲಿಸುತ್ತೇವೆ. ಆದರೆ ಸಾವಿನಲ್ಲೂ ರಾಜಕೀಯ ಮಾಡುವುದು ಬಿಜೆಪಿ ಸಂಸ್ಕೃತಿ. ಸಾವು, ನೋವಲ್ಲಿ ರಾಜಕಾರಣ ನಮಗಿಷ್ಟವಿಲ್ಲ ಎಂದರು.

ಎಎಸ್ಪಿ ಮೇಲೆ ಸಿಎಂ ಕೈ ಎತ್ತಿದ ವಿಚಾರಕ್ಕೆ ಪ್ರತಿಕ್ರಿಯಿಸಿದ ಎನ್.ಚಲುವರಾಯಸ್ವಾಮಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನ್ಯೂನತೆ ವಿಚಾರಕ್ಕೆ ಸಿಟ್ಟು ಮಾಡಿಕೊಂಡರು ಅಷ್ಟೇ. ಸಿದ್ದರಾಮಯ್ಯ ಸ್ವಲ್ಪ ಅಗ್ರೆಸ್ಸೀವ್ ನಾಯಕ. ಉದ್ದೇಶಪೂರ್ವಕವಾಗಿ ಒಬ್ಬ ಅಧಿಕಾರಿ ಮೇಲೆ ಕೈ ಎತ್ತಿಲ್ಲ. ನ್ಯೂನತೆ ಕಾರಣಕ್ಕಾಗಿ ಸಿಟ್ಟಾಗಿದ್ದರು. ಸಿದ್ದರಾಮಯ್ಯ ವಿರುದ್ಧ ಯಾವುದೇ ತಪ್ಪು ಹುಡುಕಲು ಸಾಧ್ಯವಿಲ್ಲದೆ ಹೀಗೆ ಮಾಡುತ್ತಾರೆ. ಬಿಜೆಪಿಯವರು ರಾಜಕೀಯ ಜೀವನ ನಡೆಸಲು ಏನಾದರೂ ಈ ರೀತಿಯ ವಿವಾದ ಸೃಷ್ಟಿಸುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದರು.

ಸಹಕಾರ ಚುನಾವಣೆಗೆ ಸಚ್ಚಿನ್ ಚಲುವರಾಯಸ್ವಾಮಿ ಪ್ರವೇಶ ವಿಚಾರದ ಬಗ್ಗೆ ಪ್ರತಿಕ್ರಿಯೆ ನೀಡಿದ ಸಿಆರ್‌ಎಸ್, ಸಚ್ಚಿನ್ ಮುಂದಿನ ರಾಜಕಾರಣ ನಾನು ಇವತ್ತು ಹೇಳಲು ಆಗಲ್ಲ. ಕೃಷಿ ಪತ್ತಿನ ಸಹಕಾರ ಸಂಘದಲ್ಲಿ ಸಚ್ಚಿನ್ ಆಯ್ಕೆ ಸ್ಥಳೀಯರ ತೀರ್ಮಾನ. ಅವನ ಮುಂದಿನ ರಾಜಕೀಯ ಅಂದಿನ ಪರಿಸ್ಥಿತಿಗೆ ತಕ್ಕಂತೆ ತೀರ್ಮಾನವಾಗುತ್ತದೆ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net